Contact Us : 04998-214360      Email Us : info@ananthapuratemple.com

ಚರಿತ್ರೆ

ಸರೋವರ ಕ್ಷೇತ್ರ, ಅನಂತಪುರ

‘ದೇವರ ನಾಡು’ ಎಂದೇ ಪ್ರಸಿದ್ಧವಾದ ಕೇರಳ ರಾಜ್ಯವು ಹೆಸರಿನಂತೆ ದೇವರು, ದೈವಗಳ ಹುಟ್ಟೂರು. ವಿಸ್ತೀರ್ಣದಲ್ಲಿ ಕಡಿಮೆಯಾದರೂ ದೇವಾಲಯಗಳು ಮತ್ತು ಇತರ ವೈಶಿಷ್ಟ್ಯಪೂರ್ಣವಾದ ಆರಾಧನಾಲಯಗಳಿರುವುದು ಇಲ್ಲಿನ ವಿಶೇಷತೆ. ಉತ್ತರದ ಕಾಸರಗೋಡು ಜಿಲ್ಲೆಯಿಂದ ದಕ್ಷಿಣದ ತಿರುವನಂತಪುರದವರೆಗಿನ ಹದಿನಾಲ್ಕು ಜಿಲ್ಲೆಗಳಲ್ಲಿ ಅದೆಷ್ಟೋ ದೇವಾಲಯಗಳು, ದೈವಸ್ಥಾನಗಳೂ, ಮಸೀದಿಗಳೂ, ಇಗರ್ಜಿಗಳೂ ತಮ್ಮದೇ ಗತಕಾಲದ ಪ್ರೌಢಿಮೆಯನ್ನೂ ವಾಸ್ತುಶಿಲ್ಪದ ಹಿರಿಮೆಯನ್ನೂ ಒಳಗೊಂದು ಆಸ್ತಿಕ ಬಾಂಧವರ ಮನೋವೃತ್ತಿಗನುಸರಿಸಿ ನಿತ್ಯನೂತನವಾಗಿ ಕಂಗೊಳಿಸುತ್ತಿವೆ. ಪರಶುರಾಮನ ಸೃಷ್ಟಿ ಎಂದೇ ಖ್ಯಾತಿವೆತ್ತ ಈ ಚಿಕ್ಕ ಕೇರಳವು ಆಧ್ಯಾತ್ಮಿಕವಾಗಿಯೂ ಸಾಂಸ್ಕೃತಿಕವಾಗಿಯೂ ವಾಸ್ತುಶಿಲ್ಪ ವೈವಿಧ್ಯಗಳಿಂದಲೂ ಹೆಸರುವಾಸಿಯಾಗಿದೆ. ದೇವರುಗಳು ನೆಲೆಯೂರುವಂತಹ ಪ್ರಾಕೃತಿಕ ವಿಶೇಷತೆಯೂ ಇದಕ್ಕೊಂದು ಕಾರಣವಾಗಿರಲೂ ಬಹುದು! ಒಂದು ಕಡೆಯಲ್ಲಿ ನೀಳವಾದ ಪಶ್ಚಿಮಘಟ್ಟದ ಸಾಲುಗಳು, ಇನ್ನೊಂದೆಡೆ ವಿಶಾಲವಾದ ಭೂಪ್ರದೇಶ, ಇನ್ನೆರಡು ಭಾಗಗಳಲ್ಲಿ ಜಲಾವೃತವಾಗಿರುವುದರಿಂದ ದೇವರಿಗೂ ಮನುಷ್ಯರಿಗೂ ವಾಸಯೋಗ್ಯವಾಗಿರುವ ಸ್ಥಳ. ನೀರು ಯಥೇಷ್ಟವಾಗಿರುವ ಸ್ಥಳದಲ್ಲಿ, ಕಾದುಪ್ರದೆಶದಲ್ಲಿ, ಬೆಟ್ಟದ ತಪ್ಪಲಿನಲ್ಲಿ, ವೃಂದಾವನ ಆವೃತವಾಗಿರುವಲ್ಲಿ ದೇವಸಾನ್ನಿಧ್ಯವಿರುತ್ತದೆ ಎಂಬುದು ಆಗಮ ಸಿದ್ದಾಂತ. ಆ ನಿಟ್ಟಿನಲ್ಲಿ ನೋಡುವುದಾದರೆ ಕೇರಳವಿಡೀ ದೇವರ ಸಾನ್ನಿಧ್ಯಕ್ಕೆ ಹೊಂದುವ ಭೂಪ್ರದೇಶ ಎಂದರೆ ತಪ್ಪಾಗಲಾರದು. ಕೇರಳದ ಅತಿ ಉತ್ತರದಲ್ಲಿರುವ ಜಿಲ್ಲೆಯೇ ಕಾಸರಗೋಡು. ಭೌಗೋಳಿಕವಾಗಿಯೂ, ಭಾಷಾಪರವಾಗಿಯೂ, ಸಾಂಸ್ಕೃತಿಕವಾಗಿಯೂ, ದೇವತಾರಾಧನಾ ಶೈಲಿಯಲ್ಲಿಯೂ ಕಾಸರಗೋಡಿಗೆ ಸಾಟಿ ಕಾಸರಗೋಡು ಮಾತ್ರ!

ಕಾಸರಗೋಡು ಜಿಲ್ಲೆಯಲ್ಲಿ ಅನೇಕ ದೇವಾಲಯಯಗಳಿವೆ. ಸಣ್ಣದು, ದೊಡ್ಡದು ಎಂಬ ರೀತಿಯಲ್ಲಿ ವರ್ಗೀಕರಣ ಮಾ ಡಲಸಾಧ್ಯವಾದರೂ, ದೇವಾಲಯಗಳ ಸಂಖ್ಯೆಯಲ್ಲಿ ಮಾತ್ರ ಅನೇಕ ಎಂದು ಹೇಳಬಹುದಾಗಿವೆ. ಮಧೂರು ಶ್ರೀ ಮದನಂತೇಶ್ವರ ವಿನಾಯಕ ಕ್ಷೇತ್ರ, ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ, ಮುಜುಂಗಾವು ಶ್ರೀ ಪಾರ್ಥಸಾರಥಿ ಕೃಷ್ಣ ದೇವಾಲಯ ಮತ್ತು ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯಗಳು ಕುಂಬಳೆ ಸೀಮೆಯ ಪ್ರಸಿದ್ಧ ನಾಲ್ಕು ಸೀಮೆ ದೇವಸ್ಥಾನಗಳು. ಇವುಗಳೆಡೆಯಲ್ಲಿ ಅದೆಷ್ಟೋ ದೇವಸ್ಥಾನಗಳು! ಅದೆಷ್ಟೋ ದೈವಸ್ಥಾನಗಳು! ಅದೆಷ್ಟೋ ಬನಗಳು! ಸೀಮೆಯ ನಾಲ್ಕು ದೇವಾಲಯಗಳು ಕೂಡ ವೈವಿಧ್ಯಮಯವಾಗಿವೆ. ಹೆಚ್ಚೇಕೆ, ಪ್ರಧಾನ ಪ್ರತಿಷ್ಠೆಗಳು ಕೂಡ ವೈವಿಧ್ಯಮಯ! ದೇವಾಲಯದ ವಾಸ್ತುಶಿಲ್ಪ ಶೈಲಿಯಲ್ಲಿಯೂ ವೈವಿಧ್ಯ. ಮಧೂರು ಕ್ಷೇತ್ರ ಮತ್ತು ಅಡೂರು ಕ್ಷೇತ್ರಗಳು ಹಳೆಯ ‘ಗಜಪೃಷ್ಠ’ ವಾಸ್ತುಶೈಲಿಯಲ್ಲಿದ್ದರೆ, ಕುಂಬಳೆ ಶ್ರೀ ಗೋಪಾಲಕೃಷ್ಣ ದೇವಾಲಯ ಮತ್ತು ಮುಜುಂಗಾವು ಶ್ರೀ ಪಾರ್ಥಸಾರಥಿ ಕೃಷ್ಣ ದೇವಾಲಯಗಳ ಭಂಗಿಯೇ ಬೇರೆ! ದೈವಿಕ ಚೈತನ್ಯವನ್ನು ಹೊರಜಗತ್ತಿಗೆ ಸ್ಫುರಿಸುತ್ತಿರುವ ದೇವ ಸಾನ್ನಿಧ್ಯಗಳಲ್ಲಿಯೂ ಇದೇ ವೈಶಿಷ್ಟ್ಯ, ಮಧೂರು ಕ್ಷೇತ್ರದ ಪ್ರಧಾನ ಪ್ರತಿಷ್ಠೆ ಶ್ರೀ ಮದನಂತೇಶ್ವರನಾದರೂ ಹೊರಪ್ರಪಂಚಕ್ಕೆ ಕ್ಯಾತೆವೆತ್ತಿದುದು ‘ಗಣಪತಿ’ಯ ನಾಮದಲ್ಲಿ! ಮಲ್ಲ ಶ್ರೀ ಅನ್ನಪೂರ್ಣೇಶ್ವರೀ ಕ್ಷೇತ್ರ, ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ, ಅರಿಕ್ಕಾಡಿ ಶ್ರೀ ಆಂಜನೇಯ ಕ್ಷೇತ್ರ, ಪೆರಡಾಲ ಶ್ರೀ ಉದನೇಶ್ವರ ದೇವಾಲಯ, ಕೊರಕ್ಕೋಡು ಶ್ರೀ ಆರ್ಯ ಕಾರ್ತ್ಯಾಯಿನೀ ಸನ್ನಿಧಿಗಳೆಲ್ಲವೂ ತಮ್ಮದೇ ಆದ ವೈಶಿಷ್ಟ್ಯಗಳಿಂದ ದೈವೀಕ ಚೈತನ್ಯವನ್ನೂ ಪಸರಿಸುತ್ತಾ ಕಾಸರಗೋಡಿನಲ್ಲಿ ರಾರಾಜಿಸುತ್ತವೆ. ಈ ವಿಶೇಷತೆಗಳೆಲ್ಲವೂ ಇದ್ದು, ಪ್ರಾಕೃತಿಕ ರಮಣೀಯತೆಯಿಂದಲೂ, ವಿಗ್ರಹ ವೈಶಿಷ್ಟ್ಯತೆಯಿಂದಲೂ, ಸಹಚರ ಮೊಸಳೆಯ ಇರುವಿಕೆಯಿಂದಲೂ ‘ ಅದ್ಭುತ ‘ ಭಾವನೆಯನ್ನು ಭಕ್ತರ ಮನಸ್ಸಿನಲ್ಲುಂಟು ಮಾಡುವ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮೀ ದೇವಾಲಯವು ಕಾಸರಗೋಡು ಜಿಲ್ಲೆಯಲ್ಲಿ ಇದೆಯೆಂಬುದು ನಮ್ಮೆಲ್ಲರ ಸುಕೃತ ಫಲವೆಂದೇ ಹೇಳಬೇಕು.

ಕಾಸರಗೋಡು ಪೇಟೆಯಿಂದ 11 ಕಿ.ಮೀ ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡಿದಾಗ ಕುಂಬಳೆ ಪೇಟೆಯನ್ನು ತಲುಪುವೆವು. ಕುಂಬಳೆ – ಬದಿಯಡ್ಕ ಮಾರ್ಗದಲ್ಲಿ 4 ಕಿ.ಮೀ ಪೂರ್ವಕ್ಕೆ ಸಂಚರಿಸಿದರೆ ನಾಯ್ಕಾಪು ಎಂಬ ಸ್ಥಳವನ್ನು ತಲುಪುತ್ತೇವೆ. ನಾಯ್ಕಾಪಿನಿಂದ 1 ಕಿ.ಮೀ ದಕ್ಷಿಣಾಭಿಮುಖವಾಗಿ ಡಾಮರು ಹಾಕಿದ ಮಾರ್ಗವನ್ನು ಉಪ ಕ್ರಮಿಸಿದರೆ ಶ್ರೀ ಅನಂತಪದ್ಮನಾಭ ಸ್ವಾಮಿಯು ಪ್ರತಿಷ್ಠೆಗೊಂಡ ಅನಂಥಪುರಕ್ಕೆ ತಲುಪುತ್ತೇವೆ.

ಮಂಗಳೂರಿನಿಂದ ಶ್ರೀ ಸನ್ನಿಧಿಗೆ ಆಗಮಿಸುವವರು 39 ಕಿ.ಮೀ ದೂರದ ಕುಂಬಳೆಗೆ ಮಂಗಳೂರು ಕಾಸರಗೋಡು ಹೆದ್ದಾರಿಯಾಗಿ ಬರಬೇಕು. ಪುತ್ತೂರು ಭಾಗದಿಂದ ಬರುವವರು ಬದಿಯಡ್ಕದಿಂದ ಕುಂಬಳೆಗೆ ಬರುವ ಮಾರ್ಗದಲ್ಲಿ 12 ಕಿ.ಮೀ ಪಶ್ಚಿಮಕ್ಕೆ ಸಂಚರಿಸಿದಾಗ ನಾಯ್ಕಾಪನ್ನು ತಲುಪುತ್ತೇವೆ. ನಾಯ್ಕಾಪಿನಿಂದ ಆನಂತಪುರದ ವರೆಗಿನ 1 ಕಿ.ಮೀ ದಾರಿಯಲ್ಲಿ ಬರುವಾಗ ಅದೇನೋ ಉದಾತ್ತವಾದ ದೈವೀಕ ಪ್ರಚೋದನೆ ಮನದಾಳದಲ್ಲಿ ಸ್ಪುರಿಸುವಂತಹ ಅವ್ಯಕ್ತ ಅನುಭವವು ಭಕ್ತರ ಮನಸ್ಸಿನಲ್ಲಿ ಮೂಡುತ್ತದೆ. ನಾಲ್ಕು ಕಡೆಯಲ್ಲಿ, ಗುಡ್ಡಗಳಿಂದ ಆವೃತವಾಗಿರುವ ಭೂ ಪ್ರದೇಶ! ಬಟ್ಟಲನ್ನು ಹೋಲುವ ಪ್ರದೇಶ! ವಿಶಾಲವಾದ ಗೋವುಗಳು ಮೇಯುತ್ತಿರುವ ಮೈದಾನ. ದೇವಸ್ಥಾನದ ಯಾವುದೇ ಕುರುಹು ಮೊದಲ ನೋಟಕ್ಕೆ ದೃಶ್ಯವಲ್ಲ.

ಈ ಪ್ರದೇಶದ ಬದಿಗಳಿಂದ ಸಂಚರಿಸುವಾತನಿಗೆ ಮೊದಲು ಕಾಣುವುದು ದೇವಾಲಯದ ಆವರಣ ಗೋಡೆ, ಸುಮಾರು 3 ಮೀಟರ್ ಎತ್ತರದಲ್ಲಿ ‘ ಸರ್ಪಕಟ್ಟು’ ಶೈಲಿಯಲ್ಲಿ ಕೆಂಪುಕಲ್ಲಿನಿಂದ ಕಟ್ಟಿದ ವಿಶೇಷ ರಚನೆ: ಕೇರಳದ ಕೆಲವು ದೇವಾಲಯಗಳಲ್ಲಿ ಮಾತ್ರ ಈ ಪುರಾತನ ಸರಪಕಟ್ಟು ಶೈಲಿಯ ಆವರಣಗೋಡೆಯನ್ನು ನೋಡಬಹುದಾಗಿದೆ. ಈ ರಚನೆಯು ಒಂದೊಮ್ಮೆ ಮಹಾಕ್ಷೇತ್ರದ ಕುರುಹಾಗಿತ್ತು ಎಂಬುದು ಶ್ರೀ ಕ್ಷೇತ್ರದ ವಾಸ್ತುಶಿಲ್ಪಿಗಲಾಗಿದ್ದ ದಿವಂಗತ ಪರಮೇಶ್ವರನ್ ನಂಬೂದಿರಿಯವರ ಮಾತಿನಿಂದ ತಿಳಿದುಬಂತು. ಯಾವುದೇ ಕಲ್ಲಿನ ಕಟ್ಟಕ್ಕೆ ಸರ್ಪವು ಏರಬಲ್ಲುದು. ಆದರೆ ಈ ರೀತಿಯ ರಚನೆಗೆ ಸರ್ಪಕ್ಕೂ ಏರಲು ಸಾಧ್ಯವಿಲ್ಲ. ಆದುದರಿಂದಲೇ ಈ ರಚನೆಗೆ ‘ಸರ್ಪಕಟ್ಟು’ ಎಂಬ ಹೆಸರು.

ಸರ್ಪಕಟ್ಟು ಶೈಲಿಯ ಹೊರಗೋಡೆಯ ಸಮೀಪಕ್ಕೆ ಬರುತ್ತಿರುವ ಓರ್ವ ಭಕ್ತನ ಮನಸ್ಸಿನಲ್ಲಿ ಏಕಾಗ್ರತೆಯು ಧ್ಯಾನಸದೃಶ ಮನೋಭಾವವು ಮೂಡುವುದು. ಇನ್ನೂ ಕೂಡ ಗೋಚರಿಸದ ದೇವಾಲಯದ ಅಸ್ಪಷ್ಟ ಚಿತ್ರಣಕ್ಕೆ ಮೂರ್ತ ಸ್ವರೂಪವನ್ನು ಕೊಡುವ ತವಕದಲ್ಲಿ ಹೆಜ್ಜೆಯ ವೇಗವು ನಿಧಾನವಾಗಿ ಹೆಚ್ಚುವುದು. ಧ್ಯಾನದಿಂದೊಡಗೂಡಿದ ಮನಸ್ಸು ಉತ್ಸುಕವಾಗುವುದು. ಪ್ರಶಾಂತ ವಾತಾವರಣ ! ಜನರ ಸದ್ದು ಗದ್ದಲವಿಲ್ಲದೆ, ಏಕಾಗ್ರತೆಯನ್ನು ಇಮ್ಮಡಿಗೊಳಿಸುವ ಮಂದ ಮಾರುತದ ಪ್ರವಾಹವು ಪಶ್ಚಿಮದಿಂದ ಹರಿದು ಬರುವುದು. ಸುತ್ತಲೂ ನೋಡುವಾತನಿಗೆ ಕಪ್ಪು ಕಲ್ಲಿನ ಗುಡ್ದವು (ಪಾರೆಕಲ್ಲು) ರಕ್ಷಾ ಕವಚದಂತೆ ಗೋಚರವಾಗುವುದು. ಸರ್ಪಕಟ್ಟು ಆವರಣ ಗೋಡೆಗೆ ತಲುಪಿದಾತನಿಗೆ ದೇವಸ್ಥಾನವು ಬಹಳ ಆಳದಲ್ಲಿರುವ ಒಂದು ಅನುಭವವು ಉಂಟಾಗುವುದು. ಇಲ್ಲಿಂದಲೂ ದೇವಸ್ಥಾನದ ಪೂರ್ಣ ರೂಪವನ್ನು ಆಸ್ವಾದಿಸಲು ಆಗದಂತಹ ಸ್ಥಿತಿ! ದೇವ ಬಿಂಬಗಳೂ ಅಷ್ಟೇ! ದೇವರುಗಳ ದರ್ಶನ ನಿಗೂಢವಾಗಿಯೇ ಇರುವುದು. ಶರೀರ, ಮನಸ್ಸುಗಳ ಹೊಂದಾಣಿಕೆಯಿದ್ದರೆ ಮಾತ್ರ ಈ ಅಸುಲಭ ಅನುಭವ ಅಥವಾ ಅನುಭೂತಿಯನ್ನೂ ನಮ್ಮದಾಗಿಸಿಕೊಳ್ಳಬಹುದು. ಮಹಾದ್ವಾರವನ್ನು ದಾಟಿದ ಭಕ್ತನ ಮನಸ್ಸಿನಲ್ಲಿ ವಿಶಾಲವಾದ ದೇವರ ಅಂಗಣದ ದರ್ಶನವಾರುವುದು. ಅಲ್ಲಲ್ಲಿ ಕಟ್ಟಡಗಳು, ಕಪ್ಪು ಕಲ್ಲಿನ ಪ್ರಕೃತಿದತ್ತವಾದ ಪ್ರದಕ್ಷಿನಾ ಪಥ! ಮುಂದಕ್ಕೆ ‘ಬಲಿಕಲ್ಲ’ ಎಂಬ ಪುರಾತನ ರಚನೆ. ಜಾತ್ರೆ ಸಮಯದಲ್ಲಿ ತಾಂತ್ರಿಕ ವಿಧಿವಿದಾನಗಳಿಂದ ಪೂಜಿಸಲ್ಪಡುವ ಈ ಬಲಿಕಲ್ಲು ದೇವಾಲಯದ ಅಸ್ತಿತ್ವವನ್ನು ಪುಷ್ಟೀಕರಿಸುತ್ತದೆ. ಬಲಿಕಲ್ಲನ್ನು ದಾಟಿದರೆ, ಪಾತಾಳಕ್ಕೆ ಇಲಿಯಬೇಕೆಂಬ ಸೂಚನೆಯೇ ಎಂಬಂತೆ ಹಲವು ಮೆಟ್ಟಿಲುಗಳು, ಉತ್ಸುಕನಾದ ಭಕ್ತನು ಭಕ್ತಿಪರವಶನಾಗಿ ಈ ಮೆಟ್ಟಿಲುಗಳನ್ನು ಇಳಿಯುತ್ತಾನೆ. ಮೆಟ್ಟಿಲುಗಳನ್ನು ಇಳಿದವರು ತಲಪುವುದೇ ದೇವಗೊಪುರಕ್ಕೆ. ದೇವಗೊಪುರದಿಂದ ಮುಂದಕ್ಕೆ ನೋಡಿದಾಗ, ವೈಕುಂಟ ಸದೃಶನಾದ ಮಹಾ ಕ್ಷೇತ್ರದ ದರ್ಶನ! ವಿಶಾಲವಾದ ಕೆರೆಯ ಮಧ್ಯದಲ್ಲಿ ದೇವಾಲಯ!

ವಿಸ್ತಾರವಾದ ಮೊರಕಲ್ಲಿನ ಪ್ರದೇಶದ ಮಧ್ಯಭಾಗದಲ್ಲಿ ಕೆರೆಯನ್ನು ನಿರ್ಮಿಸಿ, ಅದರ ಮಧ್ಯದಲ್ಲಿ ದೇವಾಲಯವನ್ನು ಕಟ್ಟಲಾಗಿದೆ. 100 ಅಡಿ X 100 ಅಡಿ ವಿಸ್ತಾರವಾದ ಕೆರೆ. ನಮಸ್ಕಾರ ಮಂಟಪ ಮತ್ತು ಗೋಪುರವನ್ನು ಜೋಡಿಸುವ ಒಂದು ಶಾಶ್ವತ ಸಂಕದ ಮೂಲಕ ಕೆರೆಯನ್ನು ದಾಟಬಹುದು. ನಮಸ್ಕಾರ ಮಂಟಪದ ಮಾಡನ್ನು ನಾಲ್ಕು ನಯವಾದ ಚಂದವಾದ ಕಪ್ಪು ಶಿಲೆಯಿಂದ ತಯಾರಿಸಿದ ಸ್ಥಂಬಗಳು ಆಧರಿಸುತ್ತದೆ. ಮಾಡಿನ ಮೇಲ್ಛಾವಣಿಯಲ್ಲಿ ಹಲವು ತೈಲ ಚಿತ್ರಗಳನ್ನು, ಮರದ ಕೆತ್ತನೆಗಳನ್ನು ಕಾಣಬಹುದು. ಭಕ್ತಿ ಮಾರ್ಗದ ಹಲವು ಭಾರತೀಯ ಗಣ್ಯರ ತೈಲ ಚಿತ್ರಗಾಳನ್ನೂ ಇಲ್ಲಿ ಅಳವಡಿಸಲಾಗಿದೆ. ಆರ್ಯಭಟ, ಕನಕದಾಸರು, ಪುರಂದರದಾಸರು, ಮೀರಾಭಾಯಿ, ಗುರು ರಾಘವೇಂದ್ರ, ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ತುಳಸಿದಾಸರು, ಶಡ್ವೈರಿಗಳು, ಸಪ್ತರ್ಷಿಗಳು, ದೆಹಾಗ್ನಿ.

ಅಷ್ಟೇ ಅಲ್ಲ, ದೇವಸ್ಥಾನ ಚರಿತ್ರೆಗೆ ಸಂಬಂಧಿಸಿದ ಘಟನೆಗಳನ್ನು, ದಶಾವತಾರ, ರಾಮಾಯಣ, ಮಹಾಭಾರತದ ಪ್ರಧಾನ ಸನ್ನಿವೇಶಗಳನ್ನು ಮರದಲ್ಲಿ ಕೆತ್ತಲಾಗಿದೆ. ಶ್ರೀ ಬಿಲ್ವಮಂಗಲ ಸ್ವಾಮಿಗಳು ಮತ್ತು ಶ್ರೀ ಕ್ಷೇತ್ರದೊಳಗಿನ ಚರಿತ್ರೆಯನ್ನು ಇಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ. ಈ ಎಲ್ಲಾ ಕೆತ್ತನೆ ಕೆಲಸಗಳು ಬಹಳ ನಾಜೂಕಾಗಿವೆ. ಅಷ್ಟೇ ಅಲ್ಲ, ಭಕ್ತರನ್ನು ಚಿಂತಿಸುವಂತೆ ಮಾಡುತ್ತವೆ. ಬಿಲ್ವಮಂಗಲ ಸ್ವಾಮಿಗಳ ಕಾಲದಿಂದ ತೊಡಗಿ, ಕಂಚಿ ಕಾಮಕೋಟಿ ಶ್ರೀ ಶ್ರೀ ಜಯೇಂದ್ರ ಸರಸ್ವತಿಯವರ ಕ್ಷೇತ್ರಾಗಮನದವರೆಗಿನ ಘಟನೆಗಳನ್ನೂ ಇಲ್ಲಿ ತೋರಿಸಲಾಗಿದೆ.

ಬಿಲ್ವಮಂಗಲ ಮತ್ತು ಅನಂತಪುರ

ಈಗಿನ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಎಡಪಡಿತ್ತಾಯ ಶಿವಳ್ಳಿ ಬ್ರಾಹ್ಮಣ ಕುಟುಂಬದ ಓರ್ವ ಸದಸ್ಯರಾಗಿದ್ದರು ಈ ಬಿಲ್ವಮಂಗಲ ಸ್ವಾಮಿಗಳು. ದಿವಾಕರ ಮುನಿಗಳೆಂದೂ ಇವರಿಗೆ ಹೆಸರಿದೆ. ಕೃಷ್ಣಾಮೃತವನ್ನು ರಚಿಸಿ, ತನ್ನ ಜೀವನವನ್ನು ಸಾರ್ಥಕಗೊಳಿಸಿದ ಮುನಿಶ್ರೇಷ್ಠರು! ಮಹಾವಿದ್ವಾಂಸರು ಸ್ತ್ರೀ ಸಂಬಂಧವಾದ ಜಿಗುಪ್ಸೆಯಿಂದ ಶ್ರೀಮನ್ನಾರಾಯಣನ ಆರಾಧನೆಯೇ ಯೋಗ್ಯವಾದುದೆಂದು ತೀರ್ಮಾನಿಸಿ, ಈ ಕ್ಷೇತ್ರದಲ್ಲಿ ಕೆಲಕಾಲ ಧ್ಯಾನ, ಪೂಜೆಗಳಿಂದ ಕಳೆದಿದ್ದರು ಎಂದು ದಂತಕತೆ. ಶ್ರೀಕೃಷ್ಣನಲ್ಲಿ ಅಚಲವಾದ ಭಕ್ತಿಭಾವಗಳಿಂದ ದೇವರನ್ನು ಪೂಜಿಸಿ ದಿನಗಳೆದರು. ಶ್ರೀ ಅನಂತಪದ್ಮನಾಭಸ್ವಾಮಿ ಕ್ಷೇತ್ರಕ್ಕಿಂತ ಮೊದಲೇ ಗೋಸಾಲೆ ಕೃಷ್ಣನ ದೇವಾಲಯವಿತ್ತೆಂದೂ, ಇದು ಒಂದು ಮಠವಾಗಿತ್ತೆಂದೂ ಪ್ರಶ್ನಾ ಚಿಂತನೆ. ಈ ದೇವಾಲಯವು ಕೆರೆಯ ನೈಋತ್ಯ ಭಾಗದಲ್ಲಿದೆ. ಈ ದೇವಾಲಯದ ಅಂಗಣದ ರಚನೆ ಮತ್ತು ಗೋಪುರಗಳ ವಿನ್ಯಾಸವು ಮಠದ ಛಾಯೆಯನ್ನು ಈಗಲೂ ಪ್ರತಿಬಿಂಬಿಸುತ್ತವೆ. ಈ ದೇವಾಲಯಕ್ಕೆ ನೈಋತ್ಯ ಭಾಗದಲ್ಲಾಗಿ ಸ್ವಾಮಿಗಳ ಸ್ನಾನ ಕೊಳವಿದೆ. ಕಗ್ಗಲ್ಲಿನ ಚಪ್ಪಡಿಗಳಿಂದಲೇ ಈ ಕೊಳವನ್ನು ನಿರ್ಮಿಸಲಾಗಿದೆ. ಇಳಿದು ಮುಳುಗಿ ಸ್ನಾನ ಮಾಡುವ ವ್ಯವಸ್ಥೆಗೆ ಅನುಗುಣವಾದಂತಿದೆ. (ಈಗ ಇದು ದೇವಸ್ಥಾನದ ಅಧೀನದಲ್ಲಿಲ್ಲ).

ಶಿವಳ್ಳಿ ಬ್ರಾಹ್ಮಣರಾದ ಈ ಮುನಿಶ್ರೇಷ್ಠರು ವಿಷ್ಣುವಿನ ಆರಾಧಕರಾಗಿದ್ದರು. ಹಲವು ವರ್ಷಗಳಷ್ಟು ಕಾಲ ಪೂಜಾದಿ ಕರ್ಮಗಳನ್ನು ಮಾಡುತ್ತಾ ಭಕ್ತಿರಸದ ಪ್ರತಿಪಾದಕರಾಗಿದ್ದರು. ಅನನ್ಯ ಭಕ್ತಿಯಿಂದ ಪೂಜೆಗಳಲ್ಲಿ ತೊಡಗುತ್ತಿದ್ದ ಶ್ರೀ ಸ್ವಾಮಿಗೆ ದಿನನಿತ್ಯ ಓರ್ವ ಬಾಲಕನು ಬಂದು ಸಹಕರಿಸುತ್ತಿದ್ದನು. ಈ ಬಾಲಕ ಯಾರು? ಎಲ್ಲಿಂದ ಬಂದ? ಎಂಬಿತ್ಯಾದಿ ವಿವರಗಳನ್ನಅನ್ವೇಷಣೆಮಾಡದೆ, ತಮ್ಮ ಭಕ್ತಿಪೂರ್ವಕ ಪೂಜೆಗಳಲ್ಲಿ ಮಗ್ನರಾಗುತ್ತಿದ್ದರು. ಕಾಲಚಕ್ರದ ಗತಿಯಲ್ಲಿ ಏನೆಲ್ಲಾ ವಿಪರ್ಯಾಸಗಳು ಬಂದೊದುಗುತ್ತವೆ ಎಂಬುದಕ್ಕ ಈ ಕ್ಷೇತ್ರ ಸಾಕ್ಷಿ ! ಅದೊಂದು ದಿನ ಶ್ರೀ ಸ್ವಾಮಿಗಳು ಎಂದಿನಂತೆ ಪೂಜಾಕಾರ್ಯದಲ್ಲಿ ಮಗ್ನರಾಗಿದ್ದರು. ಬಾಲಕನು ಬಂದ. ಬಾಲಚೇಷ್ಟೆಯ ಪ್ರತಿರೂಪವಾದ ಬಾಲಕನ ಕೃತ್ಯವು ಆ ಘಟನೆಗೆ ನಾಂದಿಯಾಯ್ತು. ಪೂಜಾ ಸಾಮಾಗ್ರಿಗಳನ್ನು ಹಿಡಿದು ತಂಟೆ ಮಾಡುತ್ತಿದ್ದ ಬಾಲಕನನ್ನು ಸ್ವಾಮಿಗಳು ತನ್ನ ಎಡ ಮೊಣಕೈಯಿಂದ ದೂಡಿಯೇ ಬಿಟ್ಟರು! ರಭಸಕ್ಕೆ ಬಾಲಕನು ದೂರಕ್ಕೆ ಎಸೆಯಲ್ಪಟ್ಟಂತೆ ತೋರಿತು. ಬಾಲಕನು ಹೋಗಿ ಬಿದ್ದ ಜಾಗದಲ್ಲಿ ದೊಡ್ಡ ಒಂದು ಗುಹೆಯು ರೂಪುಗೊಂಡಿತು. ಗುಹೆಯ ಸಮೀಪಕ್ಕೆ ಬಂದರು. ಬಾಲಕನನ್ನು ಕಾಣಲಾಗಲಿಲ್ಲ.ಬದಲಾಗಿ ಓಂಕಾರದ ಜ್ಯೋತಿರ್ಲಿಂಗ ಪ್ರತ್ಯಕ್ಷವಾಯ್ತು. ಪಶ್ಚಾತ್ತಾಪ, ಬೇಸರಗಳಿಂದ ಜ್ಯೋತಿಯನ್ನು ಪಡೆಯಲು ಮುಂದಾದರು. ಜ್ಯೋತಿರ್ಲಿಂಗ ಮುಂದೆ ಸಾಗಿತು. ಸ್ವಾಮಿಗಳು ಹಿಂಬಾಲಿಸಿದರು. ಜ್ಯೋತಿ ಮುಂದೆ….. ಸ್ವಾಮಿಗಳು ಹಿಂದೆ! ಪಯಣವು ಗುಹಾ ಮಾರ್ಗವಾಗಿಯೇ ಸಾಗಿತು.ಪಚ್ಚಿಮದ ಕಡಲ ಕೆರೆಯಲ್ಲಿ ಹೊರಲೋಕಕ್ಕೆ ಕಾಣಲ್ಪಟ್ಟಿತು.ಈಗಿನ ಮೊಗ್ರಾಲ್ ಗೆ ಸಮೀಪ ‘ನಾಂಗುಹಿ’ ಎಂಬ ಸ್ತಳದಲ್ಲಿ ಭೂಮಿಯ ಮೇಲ್ಭಾಗದಲ್ಲಿ ಸಂಧಿಸಿದರು. ಜ್ಯೋತಿರ್ಲಿಂಗವು ಅಲ್ಲಿಂದ ದಕ್ಷಿಣಾಭಿಮುಕವಾಗಿ ಪಯಣವನ್ನು ಬೆಳೆಸಿತು. ಹಿಂದೆಯೇ ಸ್ವಾಮಿಗಳು ನಡೆದರು. ದಿನಗಳೆಷ್ಟೋ ಸಂಚರಿಸಿದರು. ಕೊನೆಯಲ್ಲಿ ಕೇರಳದ ದಕ್ಷಿಣ ತುದಿಗೆ ತಲುಪುವಷ್ಟರಲ್ಲಿ ಜ್ಯೋತಿರ್ಲಿಂಗವು ಮೊದಲಿನ ಬಾಲಕನಿಗೆ ಸ್ವಾಮಿಗಳಿಗೆ ದರ್ಶನ ಕೊಟ್ಟಿತು. ಕೂಡಲೇ ತಾನು ಆರಾಧಿಸುತ್ತಿರುವ ಶ್ರೀಮನ್ನಾರಾಯಣನ ದರ್ಶನವು ಆಯ್ತು. ಸ್ವಾಮಿಗಳಿಗೆ ದೇವರು ಸಮಾಧಾನಕರವಾದ ಮಾತನ್ನಾಡಿದರು ಪಶ್ಚಾತ್ತಾಪಗೊಂಡ ಸ್ವಾಮಿಗಳಿಗೆ ದೇವರು ಸಮಾಧಾನಕರವಾದ ಮಾತನ್ನಾಡಿದರು. ‘ಕಾಲದ ಆಜ್ಞೆಯಂತೆ ನಾವು ನಡೆದುಕೊಳ್ಳಬೇಕು ಅದರಂತೆಯೇ ಈ ಘಟನೆ ನೆಡೆಯಬೇಕಾಯ್ತು, ನಡೆದಿದೆ ಇದರಲ್ಲಿ ನಿನ್ನದೇನೂ ತಪ್ಪಿಲ್ಲ… ನಿಮಿತ್ತ ಮಾತ್ರ.’ ಎಂದು ಅಶರೀರವಾಣಿಯೊಂದನ್ನು ಕೇಳಿದಾಗ ಸ್ವಾಮಿಗಳಿಗೆ ದಿವ್ಯಜ್ಞಾನವುಂಟಾಯಯುಯ್ತು ಈ ಸಮಾಗಮ ಉಂಟಾದ ಸ್ಥಳವನ್ನು ‘ಅನಂತನ್ ಕಾಡು’ ಎಂದು ಕರೆಯುತ್ತಾರೆ.

(ಮೊಗ್ರಾಲ್ ಸಮೀಪದ ನಾಗುಯಲ್ಲಿ ಮೇಲೆ ಹೇಳಿದ ಘಟನೆಗೆ ಪೂರಕವಾದ ಕುರುಹನ್ನು ಈಗಲೂ ಕಾಣಬಹುದಾಗಿದೆ. ಸುತ್ತಲೂ ಅನ್ಯಮತದವರಿಂದ ಆವೃತ್ತವಾಗಿದ್ದರೂ, ಸ್ವಲ್ಪ ಜಾಗವನ್ನು ಹೊರಗೊಡೆಗಳಿಂದ ಸಂರಕ್ಷಿಸಿ ಹಾಗೆಯೇ ಇಟ್ಟಿರುತ್ತಾರೆ. ಎರಡು ಪಾದಗಳನ್ನು ಮುರಕಲ್ಲಿನಿಂದ ಕೆತ್ತಿದ ಆಕೃತಿಯಲ್ಲಿ ಕಾಣಬಹುದಾಗಿದೆ. ಭಯಭಕ್ತಿಗಳಿಂದ ಯಾರು ಈ ಆವರಣದೊಳಗೆ ಹೋಗುವುದೂ ಇಲ್ಲ) ಯಾವುದೇ ಮನುಷ್ಯ ನಿರ್ಮಾಣದ ಕುರುಹುಗಳಿಲ್ಲದ ಈ ಗುಯೆಯನ್ನು ಭಕ್ತಿಪೂರ್ವಕವಾಗಿ ಶ್ರೀ ಕ್ಷೇತ್ರದಲ್ಲಿ ಕಾಯ್ದುಕೊಳ್ಳಲಾಗಿದೆ. ಗುಯೆಯ ಮಧ್ಯಭಾಗದಲ್ಲಿ ಒಂದು ಸಣ್ಣ ಹೊಂಡವಿದೆ. ಹೆಚ್ಚೆಂದರೆ 3 ಅಡಿ ಆಳ. ಈ ಹೊಂಡದಲ್ಲಿ ವರ್ಷದ ಎಲ್ಲಾ ದಿನಗಳಲ್ಲೂ ಅತಿ ಶುಭ್ರವಾದ ಸ್ವಚ್ಚವಾದ ನೀರನ್ನು ಕಾಣಬಹುದು. ಬಿಲ್ವಮಂಗಲ ಸ್ವಾಮಿಗಳು ಇಲ್ಲಿ ತಪಸ್ಸನ್ನು ಮಾಡುತ್ತಿದ್ದರೆಂದು ತೀರ್ಥವಾಗಿ ಈ ಹೊಂಡದ ಜಲವನ್ನು ಊಪಯೋಗಿಸುತ್ತಿದ್ದರೆಂದು ಐತಿಯ್ಯ! ಸದ್ಯ ಅದರ ಪಾವಿತ್ರ್ಯವನ್ನು ಅದೇ ರೀತಿಯಲ್ಲಿ ಇಟ್ಟುಕೊಳ್ಳುವುದಕ್ಕೋಸ್ಕರ ಜನರಿಗೆ ಇದರ ಒಳಗೆ ಪ್ರವೇಶ ನಿಷಿದ್ಧವಾಗಿದೆ. ಮುರಕಲ್ಲು ಒಡೆದು ನಿರ್ಮಾಣಗೊಂಡ ಈ ಗುಯೆಯೊಳಗೆ ಅದೇನೋ ಧ್ಯಾನದ ಅನುಭವಕ್ಕೆ ಪ್ರೇರಣೆಯನ್ನೀಯುವಂತಿದೆ. ಗುಯೆಯ ಮೇಲೆಯೇ ಶ್ರೀ ಗಣಪತಿ ಗುಡಿಯಿದೆ. ಕಾಲಗರ್ಭದಲ್ಲಿ ಅಡಕವಾಗಿರುವ ಅದ್ಯಾವುದೋ ರಹಸ್ಯಗಳ ಜೀವಂತ ನಿದರ್ಶನವಾಗಿಯೂ, ಆಶ್ಚರ್ಯಕರ ಘಟನೆಗಳಿಗೂ ಊದಾತ್ತ ಊದಾಹರಣೆಯಾಗಿ ಭಕ್ತರ ಮನಸ್ಸಿನಲ್ಲಿ ಈ ಗುಹೆಯ ಚಿರಸ್ಥಾಯಿಯಾಗಿದೆ.

ನಮಸ್ಕಾರ ಮಂಟಪದ ಎಡಪಾರ್ಶ್ವವಾಗಿ ದೇವರ ನಡೆಗೆ ಹೋಗಲು ಸೌಕರ್ಯವಿದೆ. ಇದರ ಎಡಭಾಗದಲ್ಲಿ ದೇವರ ನೈವೇದ್ಯ ಶಾಲೆ ಇದೆ. ನೈವೇದ್ಯ ಶಾಲೆ ಅಥವಾ ಪಾಕಶಾಲೆಯೂ ಕೆರೆಯಲ್ಲೇ ಇದೆ. ‘ಸೋಪಾನ’ ಅಥವಾ ‘ಆನೆಪ್ಪಡಿ’ ಯ ಮುಂದೆ ನಿಂತು ಮಾತ್ರವೇ ಭಕ್ತರ ದೇವರ ದರ್ಶನವನ್ನು ಪಡೆಯಬಹುದಾಗಿದೆ. ಇಲ್ಲಿ ಕಗ್ಗಲ್ಲಿನ ಫಲಕಗಳನ್ನು ಹಾಸಿ, ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ. ಈ ಫಲಕಗಳ ಕೆಳಗಿನಿಂದ ನೀರು ಅತ್ತಿಂದಿತ್ತ ಹರಿದು ಹೋಗುವುದರಿಂದ, ಪ್ರಧಾನ ದೇವಾಲಯಕ್ಕೆ ಸೂತ್ತಲೂ ನೀರಿನ ನೇರ ಸಂಪರ್ಕ ಇರುವುದು.

ಆನೆಪ್ಪಡಿಯ ಮೂಲಕ ಒಳಪ್ರವೇಶಿಸಿದರೆ, ಮುಖಮಂಟಪದೊಳಗೆ ತಲುಪುತ್ತೇವೆ. ಮುಖ ಮಂಟಪವನ್ನು ಕೂಡಾ ಪವಿತ್ರವಾಗಿ ಇರಿಸಿಕೊಳ್ಳಬೇಕಾಗಿದೆ. ಯಾಕೆಂದರೆ, ದೇವರು ಅಭಿಷೇಕ ಕಾರ್ಯಗಳು ಇಲ್ಲಿಯೇ ನಡೆಯುವುದು. ವೃಷಭರಾಶಿಯಲ್ಲಿ ನಿರ್ಮಿತವಾದ ಕಗ್ಗಲ್ಲಿನ ‘ಅಭಿಷೇಕ ಪೀಠ’ವನ್ನು ಇಲ್ಲಿ ಕಾಣಬಹುದು. ಅಭಿಷೇಕದ ನೀರು ನೇರವಾಗಿ ಕೆರೆಗೆ ಬೀಳುವುದು. ಆದುದರಿಂದ ಇಡೀ ಕೆರೆಯ ನೀರು ತಿರ್ಥವಾಗುವುದು. ದಳಿಯ ಸಮೀಪದಲ್ಲಿ ಈಶಾನ್ಯ ಮೂಲೆಯಲ್ಲಿ ಸಣ್ಣ ಬಾವಿಯೊಂದನ್ನು ಕಾಣಬಹುದು. ಅರ್ಚಕರು ಅಭಿಷೇಕ ಮತ್ತು ನೈವೇದ್ಯ ತಯಾರಿಗಾಗಿ ಶುದ್ಧವಾದ ನೀರನ್ನು ಈ ಬಾವಿಯಿಂದಲೇ ತೆಗೆಯಬೇಕು.

ಮುಖಮಂಟಪವನ್ನು ದಾಟಿದರೆ ಎಡನಾಳಿ ತಲುಪುವೆವು. ದೈವಿಕ ಚೈತನ್ಯವನ್ನು ಹೊರಲೋಕಕ್ಕೆ ಪಸರಿಸುವಂತೆ ಮಾಡುವಲ್ಲಿ ಈ ಎಡನಾಳಿಯ ಸ್ಥಾನವು ಪ್ರಧಾನ ಪಾತ್ರ ವಹಿಸುತ್ತದೆ. ಗರ್ಭಗುಡಿಗೆ ಪ್ರವೇಶಿಸುವ ಪ್ರಧಾನ ಕವಾಟದ ಇಕ್ಕೆಡೆಗಳಲ್ಲಿ ಜಯವಿಜಯರ ಪ್ರತಿಮೆಗಳನ್ನು ಕಾಣಬಹುದು. ಸಾಕ್ಷಾತ್ ವೈಕುಂಠ ಸದೃಶವಾದ ಗರ್ಭಗೃಹ. ದ್ವಾರಪಾಲಕರಾದ ಜಯವಿಜಯರು ಒಡೆಯನ ಆಣತಿಯನ್ನು ಶಿರಸಾವಹಿಸುವಂತೆ ಕಾದುನಿಂತಿರುವ ಭಾವ ಇವರ ಮುಖದಲ್ಲಿ ಸ್ಫುರಿಸುತ್ತವೆ.! ಸೂತ್ತಲು ನೀರು. ಇದುವೇ ಕ್ಷೀರ ಸಾಗರ! ಅದರ ಮಧ್ಯೆ ಶ್ರೀಮನ್ನಾರಾಯಣನು ಅನಂತನ ಮೇಲೆ ಉಪವಿಶ್ಯನಾಗಿರುವಂತಹ ಭಂಗಿ. ಐದುಹೆಡೆಯ ಅನಂತನು ಶ್ರೀ ಅನಂತಪದ್ಮನಾಭನಿಗೆ ತನ್ನ ಹೆಡೆಗಳಿಂದ ಛತ್ರದೋಪಾದಿಯಲ್ಲಿ ರಕ್ಷಣೆ ನೀಡುತ್ತಿದ್ದರು ಸ್ಥಿತಿ. ಇಕ್ಕೆಡೆಗಳಲ್ಲಿ ಶ್ರೀದೇವಿ. ಭೂದೇವಿಯರ ವಿಗ್ರಹಗಳು. ಭಕ್ತಿಪೂರ್ವಕ ದೇವರಿಗೆ ನಮಸ್ಕ್ಕರಿಸುವ ಗರುಡ ಮತ್ತು ಹನುಮರು, ಭಕ್ತಶ್ರೇಷ್ಟರ ಪ್ರತೀಕಗಳು. ಎಡಬಲ ಗೋಡೆಗಳಲ್ಲಿ ನಾಗಕನ್ನಿಕೆಯರ ಚಾಮರ ಬೀಸುತ್ತಿದ್ದಾರೆ. ಹೀಗೆ ಒಟ್ಟು ಏಳು ವಿಗ್ರಹಗಳನ್ನು ಕಡುಶರ್ಕರ ಪಾಕದಿಂದಲೇ ನಿರ್ಮಿಸಲಾಗಿದೆ. ಎಕಾಂತವಾದ ಸನ್ನಿವೇಶ! ಭಕ್ತಿರಸ ಪ್ರಧಾನವಾದ ನೋಟಗಳು. ಪುರಾಣ ಕತೆಗಳ ಮೂರ್ತರೂಪದ ದೃಶ್ಯಗಳು!

ಕಡುಶರ್ಕರ ಪಾಕದ ವಿಗ್ರಹಗಳು:

ಹಿಂದೂ ದೇವಬಿಂಬಗಳು ಹಲವು ರೂಪದಲ್ಲಿ ಕಂಡುಬರುತ್ತವೆ. ಹಲವು ರೂಪಗಳನ್ನು ಹಲವು ದ್ರವ್ಯಗಳಿಂದ ಮಾಡಿರುವವುಗಳಾಗಿವೆ. ಪ್ರತಿಯೊಂದಕ್ಕೂ ಅದರದ್ದೇ ಆದ ಆಯುಧಗಳು, ಪೂಜಾವಿಧಾನದಲ್ಲೂ ಅನುಷ್ಠಾನ ಕರ್ಮಗಳಲ್ಲೂ ಉಚ್ಛರಿಸುವ ಮಂತ್ರದಲ್ಲೂ ವ್ಯತ್ಯಾಸ.

ದೇವರ ವಿಗ್ರಹವನ್ನು ಶಿಲ್ಪಶಾಸ್ತ್ರ ವಿಧಿಯಂತೆ ಹಲವು ದ್ರವ್ಯಗಳಿಂದ ಮಾಡುವುದು ರೂಢಿ. ಲೋಹ, ದಾರು, ಶಿಲೆ, ಮೃತ್ತಿಕಾ ಮೊದಲಾದ ದ್ರವ್ಯಗಳಿಂದ ಮಾಡಲ್ಪಟ್ಟ ಹೆಚ್ಚು ವಿಗ್ರಹಗಳನ್ನು ನಾವು ಬೇರೆ ಬೇರೆ ದೇವಾಲಯಗಳಲ್ಲಿ ನೋಡುತ್ತೇವೆ. ಆದರೆ ‘ಕಡುಶರ್ಕರ ಪಾಕ’ವೆಂಬ ಪುರಾತನ ವಿಗ್ರಹ ಶೈಲಿಯು ಅತಿ ವಿರಳ. ಮುನಿಶ್ರೇಷ್ಠರ ತಪೋಬಲದಿಂದಲೂ, ದೇವರ ಅಸ್ಥಿತ್ವವನ್ನು ಅವರ ಸಿದ್ಧಾಂತಕ್ಕೆ ಪರಿವರ್ತಿಸಿದಾಗ ಉಂಟಾದ ವಿಧಾನವೇ ಈ ಕಡುಶರ್ಕರ ಪಾಕ. ಅವರ ಆಶಯವೂ ಮೂರ್ತ ಸ್ವರೂಪವನ್ನು ತಾಳಿದುದು ಈ ಕಡುಶರ್ಕರ ಪಾಕ ವಿಧಾನದಿಂದ. ಹೆಸರೇ ಸೂಚಿಸುವಂತೆ, ಕಠಿಣವಾದ ಪಾಕವೇ ಈ ವಿಗ್ರಹ ನಿರ್ಮಾಣದಮೂಲ. ಎಂದರೆ, ಶರ್ಕರೋಪಾದಿಯಲ್ಲಿರುವ ಹತ್ತು ಹಲವು ವಸ್ತುಗಳ ಮಿಶ್ರಣವೇ ಇದರ ಪ್ರಧಾನ ಕಚ್ಛಾವಸ್ತು!

ಪ್ರಧಾನ ಕ್ಷೇತ್ರದಲ್ಲಿರುವ ವಿಗ್ರಹಗಳೆಲ್ಲವೂ ಕಡುಶರ್ಕರ ಪಾಕದಿಂದ ನಿರ್ಮಾಣವಾಗಿದ್ದವುಗಳಾಗಿದ್ದವು. ಸುಮಾರು 1200 ವರ್ಷಗಳಷ್ಟು ಹಳೆಯದಾದ ಮೊದಲಿನ ವಿಗ್ರಹಗಳಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿದ್ದವು. 1976 ರಲ್ಲಿ ನಡೆದ ನವೀಕರಣದ ಭಾಗವಾಗಿ ಈ ಪುರಾತನ ವಿಗ್ರಹಗಳನ್ನು ಗರ್ಭಗುಡಿಯಿಂದ ತೆಗೆದು ಜಲಾಧಿವಾಸ ಮಾಡಿದ್ದರು. ಆ ಸ್ಥಾನದಲ್ಲಿ ಪಂಚಲೋಹ ವಿಗ್ರಹಗಳನ್ನು ಪ್ರತಿಷ್ಠೆ ಮಾಡಿದರು. ನಾಗಕನ್ನಿಕೆಯರ ರೂಪಗಳನ್ನು ದಾರು ವಿಗ್ರಹವಾಗಿ ಗರ್ಭಗುಡಿಯೊಳಗೆ ಇಟ್ಟರು. ಕಲಶಾನಂತರ ಕಂಡುಬಂದ ದೋಷಗಳ ಪರಿಹಾರಕ್ಕಾಗಿ ‘ದೇವಪ್ರಶ್ನೆ’ ಯೊಂದನ್ನು ಇಡಲಾಯ್ತು. ಅದರಲ್ಲಿ ವಿಗ್ರಹ ಬದಲಾವಣೆಯು ಪ್ರಧಾನ ದೋಷವಾಗಿ ಮೂಡಿಬಂತು. ಅಲ್ಲದೆ, ಪೂರ್ವ ಸ್ಥಿತಿಯಲ್ಲಿದ್ದ ‘ಕಡುಶರ್ಕರಪಾಕ’ ವಿಗ್ರಹಗಳನ್ನೇ ಪ್ರತಿಷ್ಠೆ ಮಾಡಬೇಕೆಂದು ಕಂಡುಬಂತು. ಎಲ್ಲಾ ಏಳು ವಿಗ್ರಹಗಳೂ ಕೂಡಾ ಕಡುಶರ್ಕರ ಪಾಕದಿಂದಲೇ ಆಗಬೇಕೆಂದೂ ಕಂಡು ಬಂತು. ಈ ಪುರಾತನ ಶೈಲಿಯ ವಿಗ್ರಹ ನಿರ್ಮಾಣದ ಅರಿವು ಆಗಿನ ಜನರಲ್ಲಿ ಏನೂ ಇಲ್ಲದುದರಿಂದ, ಭಕ್ತ ಜನರೆಲ್ಲರೂ ಒಗ್ಗೂಡಿ ಇನ್ನೊಂದು ದೇವಪ್ರಶ್ನೆಯನ್ನು ಇಟ್ಟು, ಇರುವ ಪಂಚಲೋಹ ವಿಗ್ರಹದಲ್ಲೇ ಚೈತನ್ಯ ಆವಾಹಿಸಲು, ದೇವರ ಪ್ರೀತಿ ಅನುಗ್ರಹಗಳನ್ನು ಕೇಳಲು ಮುಂದಾದರು. ಎರಡನೇ ಅಷ್ಟಮಂಗಲ ಪ್ರಶ್ನೆಯಲ್ಲೂ ಮೊದಲ ಪ್ರಶ್ನೆಯಲ್ಲಿ ಕಂಡುಬಂದ ದೋಷಗಳೇ ಮೂಡಿ ಬಂದವು. ಇದರ ಬದಲಾವಣೆ ಹೊರತು ಅನ್ಯ ಮಾರ್ಗವಿಲ್ಲ ಎಂದು ಘಂಟಾಘೋಷವಾಗಿ ಸಾರಿದರು.

ಕಾರಣ:

ಗರ್ಭಗೃಹ, ದೇವಾಲಯದ ರಚನೆ, ಆಚಾರ, ವಿಧಿ ವಿಧಾನಗಳೆಲ್ಲವೂ ಅಲ್ಲಿ ನಡೆಯತಕ್ಕ ಆಗಮ ವಿಧಾನಗಳನ್ನು ಆಶ್ರಯಿಸಿಕೊಂಡಿರುವುದು. ಎಲ್ಲಾ ದೇವಾಲಯಗಳಲ್ಲಿ ನಡೆದುಕೊಂಡು ಬರುವ ಪ್ರಧಾನ ವಿಧಾನಗಳೆಂದರೆ ‘ಏಕಬೇರ ವಿಧಾನ.’ ಆದರೆ ‘ಬಹುಬೇರ ವಿಧಾನ’ ದಲ್ಲಿ ಪೂಜಾಧಿ ಕಾರ್ಯಗಳು ನಡೆಯುವ ವಿರಳ ದೇವಾಲಯಗಳೂ ಇವೆ. ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರ ಅನಂತಪುರದಲ್ಲಿ ಪುರಾತನದಲ್ಲೇ ನಡೆದುಕೊಂಡ ವಿಧಾನವು ‘ಬಹುಬೇರ ವಿಧಾನ.’ ಏಕಬೇರ ವಿಧಾನದಲ್ಲಿ ಪ್ರತಿಷ್ಠೆ ಮಾಡಿದ ವಿಗ್ರಹಗಳಿಗೆ ಅಭಿಷೇಕ ಮತ್ತು ಪೂಜೆಗಳು ನಡೆಯುತ್ತವೆ. ಎಂದರೆ, ಅಭಿಷೇಕ, ಪೂಜೆ ಪುನಸ್ಕಾರಗಲೆಲ್ಲವೂ ಗರ್ಭಗುಡಿಯಲ್ಲಿಯೇ ನಡೆಯುತ್ತದೆ. ಆದರೆ ಬಹುಬೇರ ವಿಧಾನದಲ್ಲಿ ಪ್ರತಿಷ್ಠೆಗೊಂಡ ವಿಗ್ರಹಗಳಿಗೆ ಅಭಿಷೇಕವಿಲ್ಲ. ಅಭಿಷೇಕ ವಿಗ್ರಹವು ಪ್ರತ್ಯೇಕವಾಗಿಯೇ ಇರುವುದು. ಗರ್ಭಗುಡಿಯಿಂದ ಹೊರಕ್ಕೆ ತಂದು, ಆ ವಿಗ್ರಹಗಳಿಗೆ ಅಭಿಷೇಕ ಮಾಡಿ, ಪುನಃ ವಿಗ್ರಹಗಳನ್ನು ಯಥಾಸ್ಥಾನದಲ್ಲಿರಿಸಿ ಪೂಜೆಯನ್ನು ಮಾಡುವುದು ಕ್ರಮ. ಇಲ್ಲಿ ಆತ್ಮ ಮತ್ತು ದೇಹಗಳೆಂಬ ಎರಡು ಪ್ರಭೇದಗಳು ಬೇರೆ ಬೇರೆಯಾಗಿಯೇ ಇರುವುದೆಂಬ ಸಂಕಲ್ಪ. ಏಕಬೇರದಲ್ಲಿ ಇವೆರಡೂ ಒಂದೇ ವಿಗ್ರಹದಲ್ಲಿ! ಸ್ನಾನ, ಜಪ, ತಪ, ಪೂಜಾದಿ ಕರ್ಮಗಳು ಆತ್ಮಕ್ಕೆ ಸಮರ್ಪಿಸಿ, ಪೂಜೆಯ ಕೊನೆಯಲ್ಲಿ ಈ ಆತ್ಮದ ದೈವೀಕ ಚೈತನ್ಯವನ್ನು ದೇಹದಲ್ಲಿ ಆವಾಹಿಸಬೇಕಾಗಿದೆ. ಭಕ್ತ ಜನರ ಮನೋಭೀಷ್ಟೆಯನ್ನು ಪೂರೈಸುವುದು ಈ ದೇಹದ ಮೂಲಕ, ಅಂದರೆ ಪ್ರಧಾನ ಪ್ರತಿಷ್ಠೆಯ ಮೂಲಕ!

ಕಡುಶರ್ಕರ ಪಾಕದ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಬಹುಬೇರ ಪೂಜಾ ವಿಧಾನಗಳನ್ನು ಈ ಕ್ಷೇತ್ರದಲ್ಲಿ ಪಾಲಿಸಲ್ಪಡಬೇಕು ಎಂಬುದು ಪ್ರಶ್ನಾ ಚಿಂತನೆ. ಕಡುಶರ್ಕರದ ದ್ರವ್ಯಗಳಾಗಲೀ, ಶಿಲ್ಪಿಗಳ ಬಗ್ಗೆಯಾಗಲೀ ಬಗ್ಗೆ ಯಾಗಲೀ ಅನುಭವವಿಲ್ಲದ ಭಕ್ತ ಜನರು ಕಂಗೆಟ್ಟರು. ಮುಂದಿನ ದಿನಗಳಲ್ಲಿ ತಿಳಿದವರಲ್ಲಿ ವಿಚಾರ ವಿನಿಮಯ ಮಾಡಲಾಯ್ತು. ಆದರೂ ಇದನ್ನು ನಿರ್ಮಿಸುವ ಶಿಲ್ಪಿಗಳ ಬಗ್ಗೆ ಯಾವುದೇ ಮಾಹಿತಿ ದೊರೆಯದೇ ಇದ್ದುದರಿಂದ, ಏನು ಮಾಡುವುದೆಂದು ದೇವರಿಗೇ ಶರಣು ಹೋಗೋಣ ಎಂಬಲ್ಲಿಗೆ ಮೂರನೆಯ ಅಷ್ಟಮಂಗಲವನ್ನೂ ಇದಬೇಕಾಯ್ತು.

ಈ ಪ್ರಶ್ನೆಯಿಂದ ಕೆಲವೊಂದು ಅಶಾಕಿರಣಗಳು ಭಕ್ತರಿಗೆ ಲಭಿಸುವಂತಾಯಿತು. ಇನ್ನೂ ಹೆಚ್ಚಿನ ವಿಷಯಗಳು ಲಭಿಸಲು ಸಹಕಾರಿಯಾಯ್ತು. ವಾಸ್ತುಶಿಲ್ಪಿಗಳನ್ನು ಪ್ರಶ್ನಾ ಮುಖೇನ ನಿರ್ಣಯಿಸಲಾಯಿತು. ಕೋಟ್ಟಯಂ ಜಿಲ್ಲೆಯ ವೇಲಾಪ್ಪರಂಬಿಲ್ ಎಂಬಲ್ಲಿ ಶ್ರೀ ಪರಮೇಶ್ವರನ್ ನಂಬೂದಿರಿಯವರು ಕೇರಳದ ಓರ್ವ ಪ್ರಸಿದ್ಧ ವಾಸ್ತುಶಿಲ್ಪಿ ಎಂದೂ, ಜ್ಞಾನವೃದ್ಧರೂ ವಯೋವೃದ್ಧರೂ ಆದ ಈ ಶಿಲ್ಪಿಗಳನ್ನು ಕಂಡು ಭಿನ್ನವಿಸಿಕೊಂಡಲ್ಲಿ ಈ ಮಹಾಕಾರ್ಯದ ಉಸ್ತುವಾರಿಯನ್ನು ಅವರು ವಹಿಸಿಕೊಂಡಾರು ಎಂದೂ ದೇವಪ್ರಶ್ನೆಯಲ್ಲಿ ತಿಳಿದಂತೆ, ಅವರಲ್ಲಿಗೆ ನಿಯೋಗವೊಂದು ಹೋಗಿ ಅರಿಕೆ ಮಾಡಲಾಯಿತು. ಶಿಲ್ಪಿಗಳು ಯಾವುದೇ ನಕಾರಾತ್ಮಕ ಪ್ರತಿಕ್ರಿಯೆ ತೋರಿಸದೆ ಒಪ್ಪಿಕೊಂಡರು. ಅಷ್ಟೇ ಅಲ್ಲ, ಕೇರಳದ ‘ರಾಜಶಿಲ್ಪಿ’ ಪಟ್ಟವನ್ನಲಂಕರಿಸಿದ ಬ್ರಹ್ಮ ಮಂಗಲ ಶ್ರೀ ಸುಬ್ರಹ್ಮಣ್ಯ ಆಚಾರಿಯಲ್ಲಿಗೆ ಹೋಗಲು ಆಣತಿ ಕೊಟ್ಟರು.

 

ಮುಂದಿನ ಪುಟ…