ಅನಂತಪುರ, 24-02-2025
ಕೇರಳದ ಏಕೈಕ ಸರೋವರ ಕ್ಷೇತ್ರವೆಂದೇ ಪ್ರಖ್ಯಾತವಾದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಕುಂಭ ಮಾಸ 14 ರಂದು (ದಿನಾಂಕ: 26-02-2025, ಬುಧವಾರ) ಏಕದಿನ ವಾರ್ಷಿಕ ಮಹೋತ್ಸವ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಬಹಳ ವಿಸ್ತಾರವಾಗಿರುವ ಕ್ಷೇತ್ರ ಪರಿಸರವನ್ನು, ಸರೋವರ ತಟವನ್ನು ಶುಚಿಗೊಳಿಸುವ ಹಾಗೂ ದೇವಾಲಯ ಪರಿಸರವನ್ನು ಬ್ಯಾನರ್, ಬಂಟಿಂಗ್ಸ್, ತಳಿರು ತೋರಣಗಳಿಂದ ಅಲಂಕರಿಸುವ ಕೆಲಸವು ಶ್ರೀ ಕ್ಷೇತ್ರದ ಉತ್ಸವ ಸಮಿತಿಯ ನೇತೃತ್ವದಲ್ಲಿ ಭರದಿಂದ ನಡೆಯುತ್ತಿದೆ.
ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಜನಾರ್ಧನ ಕಣ್ಣೂರು, ಶ್ರೀ ಕ್ಷೇತ್ರದ ಉತ್ಸವ ಸಮಿತಿಯ ಅಧ್ಯಕ್ಷರಾದ ನಟೇಶ್ ಕುಮಾರ್ ಮದನಗುಳಿ, ಕಾರ್ಯದರ್ಶಿಗಳಾದ ರವಿಚಂದ್ರ ಮಜಲು ಇವರ ನೇತೃತ್ವದಲ್ಲಿ ಊರ ಭಕ್ತಾಭಿಮಾನಿಗಳು ವಾರ್ಷಿಕ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶುಚಿಯಾದ ಪರಿಸರ ಮತ್ತು ಅಚ್ಚುಕಟ್ಟಾದ ವ್ಯವಸ್ಥೆ ಮಾಡುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.