+91 82813 90099 info@ananthapuratemple.com

ಚರಿತ್ರೆ

ಸರೋವರ ಕ್ಷೇತ್ರ, ಅನಂತಪುರ

‘ದೇವರ ನಾಡು’ ಎಂದೇ ಪ್ರಸಿದ್ಧವಾದ ಕೇರಳ ರಾಜ್ಯವು ಹೆಸರಿನಂತೆ ದೇವರು, ದೈವಗಳ ಹುಟ್ಟೂರು. ವಿಸ್ತೀರ್ಣದಲ್ಲಿ ಕಡಿಮೆಯಾದರೂ ದೇವಾಲಯಗಳು ಮತ್ತು ಇತರ ವೈಶಿಷ್ಟ್ಯಪೂರ್ಣವಾದ ಆರಾಧನಾಲಯಗಳಿರುವುದು ಇಲ್ಲಿನ ವಿಶೇಷತೆ. ಉತ್ತರದ ಕಾಸರಗೋಡು ಜಿಲ್ಲೆಯಿಂದ ದಕ್ಷಿಣದ ತಿರುವನಂತಪುರದವರೆಗಿನ ಹದಿನಾಲ್ಕು ಜಿಲ್ಲೆಗಳಲ್ಲಿ ಅದೆಷ್ಟೋ ದೇವಾಲಯಗಳು, ದೈವಸ್ಥಾನಗಳೂ, ಮಸೀದಿಗಳೂ, ಇಗರ್ಜಿಗಳೂ ತಮ್ಮದೇ ಗತಕಾಲದ ಪ್ರೌಢಿಮೆಯನ್ನೂ ವಾಸ್ತುಶಿಲ್ಪದ ಹಿರಿಮೆಯನ್ನೂ ಒಳಗೊಂದು ಆಸ್ತಿಕ ಬಾಂಧವರ ಮನೋವೃತ್ತಿಗನುಸರಿಸಿ ನಿತ್ಯನೂತನವಾಗಿ ಕಂಗೊಳಿಸುತ್ತಿವೆ. ಪರಶುರಾಮನ ಸೃಷ್ಟಿ ಎಂದೇ ಖ್ಯಾತಿವೆತ್ತ ಈ ಚಿಕ್ಕ ಕೇರಳವು ಆಧ್ಯಾತ್ಮಿಕವಾಗಿಯೂ ಸಾಂಸ್ಕೃತಿಕವಾಗಿಯೂ ವಾಸ್ತುಶಿಲ್ಪ ವೈವಿಧ್ಯಗಳಿಂದಲೂ ಹೆಸರುವಾಸಿಯಾಗಿದೆ. ದೇವರುಗಳು ನೆಲೆಯೂರುವಂತಹ ಪ್ರಾಕೃತಿಕ ವಿಶೇಷತೆಯೂ ಇದಕ್ಕೊಂದು ಕಾರಣವಾಗಿರಲೂ ಬಹುದು! ಒಂದು ಕಡೆಯಲ್ಲಿ ನೀಳವಾದ ಪಶ್ಚಿಮಘಟ್ಟದ ಸಾಲುಗಳು, ಇನ್ನೊಂದೆಡೆ ವಿಶಾಲವಾದ ಭೂಪ್ರದೇಶ, ಇನ್ನೆರಡು ಭಾಗಗಳಲ್ಲಿ ಜಲಾವೃತವಾಗಿರುವುದರಿಂದ ದೇವರಿಗೂ ಮನುಷ್ಯರಿಗೂ ವಾಸಯೋಗ್ಯವಾಗಿರುವ ಸ್ಥಳ. ನೀರು ಯಥೇಷ್ಟವಾಗಿರುವ ಸ್ಥಳದಲ್ಲಿ, ಕಾದುಪ್ರದೆಶದಲ್ಲಿ, ಬೆಟ್ಟದ ತಪ್ಪಲಿನಲ್ಲಿ, ವೃಂದಾವನ ಆವೃತವಾಗಿರುವಲ್ಲಿ ದೇವಸಾನ್ನಿಧ್ಯವಿರುತ್ತದೆ ಎಂಬುದು ಆಗಮ ಸಿದ್ದಾಂತ. ಆ ನಿಟ್ಟಿನಲ್ಲಿ ನೋಡುವುದಾದರೆ ಕೇರಳವಿಡೀ ದೇವರ ಸಾನ್ನಿಧ್ಯಕ್ಕೆ ಹೊಂದುವ ಭೂಪ್ರದೇಶ ಎಂದರೆ ತಪ್ಪಾಗಲಾರದು. ಕೇರಳದ ಅತಿ ಉತ್ತರದಲ್ಲಿರುವ ಜಿಲ್ಲೆಯೇ ಕಾಸರಗೋಡು. ಭೌಗೋಳಿಕವಾಗಿಯೂ, ಭಾಷಾಪರವಾಗಿಯೂ, ಸಾಂಸ್ಕೃತಿಕವಾಗಿಯೂ, ದೇವತಾರಾಧನಾ ಶೈಲಿಯಲ್ಲಿಯೂ ಕಾಸರಗೋಡಿಗೆ ಸಾಟಿ ಕಾಸರಗೋಡು ಮಾತ್ರ!

ಕಾಸರಗೋಡು ಜಿಲ್ಲೆಯಲ್ಲಿ ಅನೇಕ ದೇವಾಲಯಯಗಳಿವೆ. ಸಣ್ಣದು, ದೊಡ್ಡದು ಎಂಬ ರೀತಿಯಲ್ಲಿ ವರ್ಗೀಕರಣ ಮಾ ಡಲಸಾಧ್ಯವಾದರೂ, ದೇವಾಲಯಗಳ ಸಂಖ್ಯೆಯಲ್ಲಿ ಮಾತ್ರ ಅನೇಕ ಎಂದು ಹೇಳಬಹುದಾಗಿವೆ. ಮಧೂರು ಶ್ರೀ ಮದನಂತೇಶ್ವರ ವಿನಾಯಕ ಕ್ಷೇತ್ರ, ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ, ಮುಜುಂಗಾವು ಶ್ರೀ ಪಾರ್ಥಸಾರಥಿ ಕೃಷ್ಣ ದೇವಾಲಯ ಮತ್ತು ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯಗಳು ಕುಂಬಳೆ ಸೀಮೆಯ ಪ್ರಸಿದ್ಧ ನಾಲ್ಕು ಸೀಮೆ ದೇವಸ್ಥಾನಗಳು. ಇವುಗಳೆಡೆಯಲ್ಲಿ ಅದೆಷ್ಟೋ ದೇವಸ್ಥಾನಗಳು! ಅದೆಷ್ಟೋ ದೈವಸ್ಥಾನಗಳು! ಅದೆಷ್ಟೋ ಬನಗಳು! ಸೀಮೆಯ ನಾಲ್ಕು ದೇವಾಲಯಗಳು ಕೂಡ ವೈವಿಧ್ಯಮಯವಾಗಿವೆ. ಹೆಚ್ಚೇಕೆ, ಪ್ರಧಾನ ಪ್ರತಿಷ್ಠೆಗಳು ಕೂಡ ವೈವಿಧ್ಯಮಯ! ದೇವಾಲಯದ ವಾಸ್ತುಶಿಲ್ಪ ಶೈಲಿಯಲ್ಲಿಯೂ ವೈವಿಧ್ಯ. ಮಧೂರು ಕ್ಷೇತ್ರ ಮತ್ತು ಅಡೂರು ಕ್ಷೇತ್ರಗಳು ಹಳೆಯ ‘ಗಜಪೃಷ್ಠ’ ವಾಸ್ತುಶೈಲಿಯಲ್ಲಿದ್ದರೆ, ಕುಂಬಳೆ ಶ್ರೀ ಗೋಪಾಲಕೃಷ್ಣ ದೇವಾಲಯ ಮತ್ತು ಮುಜುಂಗಾವು ಶ್ರೀ ಪಾರ್ಥಸಾರಥಿ ಕೃಷ್ಣ ದೇವಾಲಯಗಳ ಭಂಗಿಯೇ ಬೇರೆ! ದೈವಿಕ ಚೈತನ್ಯವನ್ನು ಹೊರಜಗತ್ತಿಗೆ ಸ್ಫುರಿಸುತ್ತಿರುವ ದೇವ ಸಾನ್ನಿಧ್ಯಗಳಲ್ಲಿಯೂ ಇದೇ ವೈಶಿಷ್ಟ್ಯ, ಮಧೂರು ಕ್ಷೇತ್ರದ ಪ್ರಧಾನ ಪ್ರತಿಷ್ಠೆ ಶ್ರೀ ಮದನಂತೇಶ್ವರನಾದರೂ ಹೊರಪ್ರಪಂಚಕ್ಕೆ ಕ್ಯಾತೆವೆತ್ತಿದುದು ‘ಗಣಪತಿ’ಯ ನಾಮದಲ್ಲಿ! ಮಲ್ಲ ಶ್ರೀ ಅನ್ನಪೂರ್ಣೇಶ್ವರೀ ಕ್ಷೇತ್ರ, ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ, ಅರಿಕ್ಕಾಡಿ ಶ್ರೀ ಆಂಜನೇಯ ಕ್ಷೇತ್ರ, ಪೆರಡಾಲ ಶ್ರೀ ಉದನೇಶ್ವರ ದೇವಾಲಯ, ಕೊರಕ್ಕೋಡು ಶ್ರೀ ಆರ್ಯ ಕಾರ್ತ್ಯಾಯಿನೀ ಸನ್ನಿಧಿಗಳೆಲ್ಲವೂ ತಮ್ಮದೇ ಆದ ವೈಶಿಷ್ಟ್ಯಗಳಿಂದ ದೈವೀಕ ಚೈತನ್ಯವನ್ನೂ ಪಸರಿಸುತ್ತಾ ಕಾಸರಗೋಡಿನಲ್ಲಿ ರಾರಾಜಿಸುತ್ತವೆ. ಈ ವಿಶೇಷತೆಗಳೆಲ್ಲವೂ ಇದ್ದು, ಪ್ರಾಕೃತಿಕ ರಮಣೀಯತೆಯಿಂದಲೂ, ವಿಗ್ರಹ ವೈಶಿಷ್ಟ್ಯತೆಯಿಂದಲೂ, ಸಹಚರ ಮೊಸಳೆಯ ಇರುವಿಕೆಯಿಂದಲೂ ‘ ಅದ್ಭುತ ‘ ಭಾವನೆಯನ್ನು ಭಕ್ತರ ಮನಸ್ಸಿನಲ್ಲುಂಟು ಮಾಡುವ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮೀ ದೇವಾಲಯವು ಕಾಸರಗೋಡು ಜಿಲ್ಲೆಯಲ್ಲಿ ಇದೆಯೆಂಬುದು ನಮ್ಮೆಲ್ಲರ ಸುಕೃತ ಫಲವೆಂದೇ ಹೇಳಬೇಕು.

ಕಾಸರಗೋಡು ಪೇಟೆಯಿಂದ 11 ಕಿ.ಮೀ ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡಿದಾಗ ಕುಂಬಳೆ ಪೇಟೆಯನ್ನು ತಲುಪುವೆವು. ಕುಂಬಳೆ – ಬದಿಯಡ್ಕ ಮಾರ್ಗದಲ್ಲಿ 4 ಕಿ.ಮೀ ಪೂರ್ವಕ್ಕೆ ಸಂಚರಿಸಿದರೆ ನಾಯ್ಕಾಪು ಎಂಬ ಸ್ಥಳವನ್ನು ತಲುಪುತ್ತೇವೆ. ನಾಯ್ಕಾಪಿನಿಂದ 1 ಕಿ.ಮೀ ದಕ್ಷಿಣಾಭಿಮುಖವಾಗಿ ಡಾಮರು ಹಾಕಿದ ಮಾರ್ಗವನ್ನು ಉಪ ಕ್ರಮಿಸಿದರೆ ಶ್ರೀ ಅನಂತಪದ್ಮನಾಭ ಸ್ವಾಮಿಯು ಪ್ರತಿಷ್ಠೆಗೊಂಡ ಅನಂಥಪುರಕ್ಕೆ ತಲುಪುತ್ತೇವೆ.

ಮಂಗಳೂರಿನಿಂದ ಶ್ರೀ ಸನ್ನಿಧಿಗೆ ಆಗಮಿಸುವವರು 39 ಕಿ.ಮೀ ದೂರದ ಕುಂಬಳೆಗೆ ಮಂಗಳೂರು ಕಾಸರಗೋಡು ಹೆದ್ದಾರಿಯಾಗಿ ಬರಬೇಕು. ಪುತ್ತೂರು ಭಾಗದಿಂದ ಬರುವವರು ಬದಿಯಡ್ಕದಿಂದ ಕುಂಬಳೆಗೆ ಬರುವ ಮಾರ್ಗದಲ್ಲಿ 12 ಕಿ.ಮೀ ಪಶ್ಚಿಮಕ್ಕೆ ಸಂಚರಿಸಿದಾಗ ನಾಯ್ಕಾಪನ್ನು ತಲುಪುತ್ತೇವೆ. ನಾಯ್ಕಾಪಿನಿಂದ ಆನಂತಪುರದ ವರೆಗಿನ 1 ಕಿ.ಮೀ ದಾರಿಯಲ್ಲಿ ಬರುವಾಗ ಅದೇನೋ ಉದಾತ್ತವಾದ ದೈವೀಕ ಪ್ರಚೋದನೆ ಮನದಾಳದಲ್ಲಿ ಸ್ಪುರಿಸುವಂತಹ ಅವ್ಯಕ್ತ ಅನುಭವವು ಭಕ್ತರ ಮನಸ್ಸಿನಲ್ಲಿ ಮೂಡುತ್ತದೆ. ನಾಲ್ಕು ಕಡೆಯಲ್ಲಿ, ಗುಡ್ಡಗಳಿಂದ ಆವೃತವಾಗಿರುವ ಭೂ ಪ್ರದೇಶ! ಬಟ್ಟಲನ್ನು ಹೋಲುವ ಪ್ರದೇಶ! ವಿಶಾಲವಾದ ಗೋವುಗಳು ಮೇಯುತ್ತಿರುವ ಮೈದಾನ. ದೇವಸ್ಥಾನದ ಯಾವುದೇ ಕುರುಹು ಮೊದಲ ನೋಟಕ್ಕೆ ದೃಶ್ಯವಲ್ಲ.

ಈ ಪ್ರದೇಶದ ಬದಿಗಳಿಂದ ಸಂಚರಿಸುವಾತನಿಗೆ ಮೊದಲು ಕಾಣುವುದು ದೇವಾಲಯದ ಆವರಣ ಗೋಡೆ, ಸುಮಾರು 3 ಮೀಟರ್ ಎತ್ತರದಲ್ಲಿ ‘ ಸರ್ಪಕಟ್ಟು’ ಶೈಲಿಯಲ್ಲಿ ಕೆಂಪುಕಲ್ಲಿನಿಂದ ಕಟ್ಟಿದ ವಿಶೇಷ ರಚನೆ: ಕೇರಳದ ಕೆಲವು ದೇವಾಲಯಗಳಲ್ಲಿ ಮಾತ್ರ ಈ ಪುರಾತನ ಸರಪಕಟ್ಟು ಶೈಲಿಯ ಆವರಣಗೋಡೆಯನ್ನು ನೋಡಬಹುದಾಗಿದೆ. ಈ ರಚನೆಯು ಒಂದೊಮ್ಮೆ ಮಹಾಕ್ಷೇತ್ರದ ಕುರುಹಾಗಿತ್ತು ಎಂಬುದು ಶ್ರೀ ಕ್ಷೇತ್ರದ ವಾಸ್ತುಶಿಲ್ಪಿಗಲಾಗಿದ್ದ ದಿವಂಗತ ಪರಮೇಶ್ವರನ್ ನಂಬೂದಿರಿಯವರ ಮಾತಿನಿಂದ ತಿಳಿದುಬಂತು. ಯಾವುದೇ ಕಲ್ಲಿನ ಕಟ್ಟಕ್ಕೆ ಸರ್ಪವು ಏರಬಲ್ಲುದು. ಆದರೆ ಈ ರೀತಿಯ ರಚನೆಗೆ ಸರ್ಪಕ್ಕೂ ಏರಲು ಸಾಧ್ಯವಿಲ್ಲ. ಆದುದರಿಂದಲೇ ಈ ರಚನೆಗೆ ‘ಸರ್ಪಕಟ್ಟು’ ಎಂಬ ಹೆಸರು.

ಸರ್ಪಕಟ್ಟು ಶೈಲಿಯ ಹೊರಗೋಡೆಯ ಸಮೀಪಕ್ಕೆ ಬರುತ್ತಿರುವ ಓರ್ವ ಭಕ್ತನ ಮನಸ್ಸಿನಲ್ಲಿ ಏಕಾಗ್ರತೆಯು ಧ್ಯಾನಸದೃಶ ಮನೋಭಾವವು ಮೂಡುವುದು. ಇನ್ನೂ ಕೂಡ ಗೋಚರಿಸದ ದೇವಾಲಯದ ಅಸ್ಪಷ್ಟ ಚಿತ್ರಣಕ್ಕೆ ಮೂರ್ತ ಸ್ವರೂಪವನ್ನು ಕೊಡುವ ತವಕದಲ್ಲಿ ಹೆಜ್ಜೆಯ ವೇಗವು ನಿಧಾನವಾಗಿ ಹೆಚ್ಚುವುದು. ಧ್ಯಾನದಿಂದೊಡಗೂಡಿದ ಮನಸ್ಸು ಉತ್ಸುಕವಾಗುವುದು. ಪ್ರಶಾಂತ ವಾತಾವರಣ ! ಜನರ ಸದ್ದು ಗದ್ದಲವಿಲ್ಲದೆ, ಏಕಾಗ್ರತೆಯನ್ನು ಇಮ್ಮಡಿಗೊಳಿಸುವ ಮಂದ ಮಾರುತದ ಪ್ರವಾಹವು ಪಶ್ಚಿಮದಿಂದ ಹರಿದು ಬರುವುದು. ಸುತ್ತಲೂ ನೋಡುವಾತನಿಗೆ ಕಪ್ಪು ಕಲ್ಲಿನ ಗುಡ್ದವು (ಪಾರೆಕಲ್ಲು) ರಕ್ಷಾ ಕವಚದಂತೆ ಗೋಚರವಾಗುವುದು. ಸರ್ಪಕಟ್ಟು ಆವರಣ ಗೋಡೆಗೆ ತಲುಪಿದಾತನಿಗೆ ದೇವಸ್ಥಾನವು ಬಹಳ ಆಳದಲ್ಲಿರುವ ಒಂದು ಅನುಭವವು ಉಂಟಾಗುವುದು. ಇಲ್ಲಿಂದಲೂ ದೇವಸ್ಥಾನದ ಪೂರ್ಣ ರೂಪವನ್ನು ಆಸ್ವಾದಿಸಲು ಆಗದಂತಹ ಸ್ಥಿತಿ! ದೇವ ಬಿಂಬಗಳೂ ಅಷ್ಟೇ! ದೇವರುಗಳ ದರ್ಶನ ನಿಗೂಢವಾಗಿಯೇ ಇರುವುದು. ಶರೀರ, ಮನಸ್ಸುಗಳ ಹೊಂದಾಣಿಕೆಯಿದ್ದರೆ ಮಾತ್ರ ಈ ಅಸುಲಭ ಅನುಭವ ಅಥವಾ ಅನುಭೂತಿಯನ್ನೂ ನಮ್ಮದಾಗಿಸಿಕೊಳ್ಳಬಹುದು. ಮಹಾದ್ವಾರವನ್ನು ದಾಟಿದ ಭಕ್ತನ ಮನಸ್ಸಿನಲ್ಲಿ ವಿಶಾಲವಾದ ದೇವರ ಅಂಗಣದ ದರ್ಶನವಾರುವುದು. ಅಲ್ಲಲ್ಲಿ ಕಟ್ಟಡಗಳು, ಕಪ್ಪು ಕಲ್ಲಿನ ಪ್ರಕೃತಿದತ್ತವಾದ ಪ್ರದಕ್ಷಿನಾ ಪಥ! ಮುಂದಕ್ಕೆ ‘ಬಲಿಕಲ್ಲ’ ಎಂಬ ಪುರಾತನ ರಚನೆ. ಜಾತ್ರೆ ಸಮಯದಲ್ಲಿ ತಾಂತ್ರಿಕ ವಿಧಿವಿದಾನಗಳಿಂದ ಪೂಜಿಸಲ್ಪಡುವ ಈ ಬಲಿಕಲ್ಲು ದೇವಾಲಯದ ಅಸ್ತಿತ್ವವನ್ನು ಪುಷ್ಟೀಕರಿಸುತ್ತದೆ. ಬಲಿಕಲ್ಲನ್ನು ದಾಟಿದರೆ, ಪಾತಾಳಕ್ಕೆ ಇಲಿಯಬೇಕೆಂಬ ಸೂಚನೆಯೇ ಎಂಬಂತೆ ಹಲವು ಮೆಟ್ಟಿಲುಗಳು, ಉತ್ಸುಕನಾದ ಭಕ್ತನು ಭಕ್ತಿಪರವಶನಾಗಿ ಈ ಮೆಟ್ಟಿಲುಗಳನ್ನು ಇಳಿಯುತ್ತಾನೆ. ಮೆಟ್ಟಿಲುಗಳನ್ನು ಇಳಿದವರು ತಲಪುವುದೇ ದೇವಗೊಪುರಕ್ಕೆ. ದೇವಗೊಪುರದಿಂದ ಮುಂದಕ್ಕೆ ನೋಡಿದಾಗ, ವೈಕುಂಟ ಸದೃಶನಾದ ಮಹಾ ಕ್ಷೇತ್ರದ ದರ್ಶನ! ವಿಶಾಲವಾದ ಕೆರೆಯ ಮಧ್ಯದಲ್ಲಿ ದೇವಾಲಯ!

ವಿಸ್ತಾರವಾದ ಮೊರಕಲ್ಲಿನ ಪ್ರದೇಶದ ಮಧ್ಯಭಾಗದಲ್ಲಿ ಕೆರೆಯನ್ನು ನಿರ್ಮಿಸಿ, ಅದರ ಮಧ್ಯದಲ್ಲಿ ದೇವಾಲಯವನ್ನು ಕಟ್ಟಲಾಗಿದೆ. 100 ಅಡಿ X 100 ಅಡಿ ವಿಸ್ತಾರವಾದ ಕೆರೆ. ನಮಸ್ಕಾರ ಮಂಟಪ ಮತ್ತು ಗೋಪುರವನ್ನು ಜೋಡಿಸುವ ಒಂದು ಶಾಶ್ವತ ಸಂಕದ ಮೂಲಕ ಕೆರೆಯನ್ನು ದಾಟಬಹುದು. ನಮಸ್ಕಾರ ಮಂಟಪದ ಮಾಡನ್ನು ನಾಲ್ಕು ನಯವಾದ ಚಂದವಾದ ಕಪ್ಪು ಶಿಲೆಯಿಂದ ತಯಾರಿಸಿದ ಸ್ಥಂಬಗಳು ಆಧರಿಸುತ್ತದೆ. ಮಾಡಿನ ಮೇಲ್ಛಾವಣಿಯಲ್ಲಿ ಹಲವು ತೈಲ ಚಿತ್ರಗಳನ್ನು, ಮರದ ಕೆತ್ತನೆಗಳನ್ನು ಕಾಣಬಹುದು. ಭಕ್ತಿ ಮಾರ್ಗದ ಹಲವು ಭಾರತೀಯ ಗಣ್ಯರ ತೈಲ ಚಿತ್ರಗಾಳನ್ನೂ ಇಲ್ಲಿ ಅಳವಡಿಸಲಾಗಿದೆ. ಆರ್ಯಭಟ, ಕನಕದಾಸರು, ಪುರಂದರದಾಸರು, ಮೀರಾಭಾಯಿ, ಗುರು ರಾಘವೇಂದ್ರ, ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ತುಳಸಿದಾಸರು, ಶಡ್ವೈರಿಗಳು, ಸಪ್ತರ್ಷಿಗಳು, ದೆಹಾಗ್ನಿ.

ಅಷ್ಟೇ ಅಲ್ಲ, ದೇವಸ್ಥಾನ ಚರಿತ್ರೆಗೆ ಸಂಬಂಧಿಸಿದ ಘಟನೆಗಳನ್ನು, ದಶಾವತಾರ, ರಾಮಾಯಣ, ಮಹಾಭಾರತದ ಪ್ರಧಾನ ಸನ್ನಿವೇಶಗಳನ್ನು ಮರದಲ್ಲಿ ಕೆತ್ತಲಾಗಿದೆ. ಶ್ರೀ ಬಿಲ್ವಮಂಗಲ ಸ್ವಾಮಿಗಳು ಮತ್ತು ಶ್ರೀ ಕ್ಷೇತ್ರದೊಳಗಿನ ಚರಿತ್ರೆಯನ್ನು ಇಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ. ಈ ಎಲ್ಲಾ ಕೆತ್ತನೆ ಕೆಲಸಗಳು ಬಹಳ ನಾಜೂಕಾಗಿವೆ. ಅಷ್ಟೇ ಅಲ್ಲ, ಭಕ್ತರನ್ನು ಚಿಂತಿಸುವಂತೆ ಮಾಡುತ್ತವೆ. ಬಿಲ್ವಮಂಗಲ ಸ್ವಾಮಿಗಳ ಕಾಲದಿಂದ ತೊಡಗಿ, ಕಂಚಿ ಕಾಮಕೋಟಿ ಶ್ರೀ ಶ್ರೀ ಜಯೇಂದ್ರ ಸರಸ್ವತಿಯವರ ಕ್ಷೇತ್ರಾಗಮನದವರೆಗಿನ ಘಟನೆಗಳನ್ನೂ ಇಲ್ಲಿ ತೋರಿಸಲಾಗಿದೆ.

ಬಿಲ್ವಮಂಗಲ ಮತ್ತು ಅನಂತಪುರ

ಈಗಿನ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಎಡಪಡಿತ್ತಾಯ ಶಿವಳ್ಳಿ ಬ್ರಾಹ್ಮಣ ಕುಟುಂಬದ ಓರ್ವ ಸದಸ್ಯರಾಗಿದ್ದರು ಈ ಬಿಲ್ವಮಂಗಲ ಸ್ವಾಮಿಗಳು. ದಿವಾಕರ ಮುನಿಗಳೆಂದೂ ಇವರಿಗೆ ಹೆಸರಿದೆ. ಕೃಷ್ಣಾಮೃತವನ್ನು ರಚಿಸಿ, ತನ್ನ ಜೀವನವನ್ನು ಸಾರ್ಥಕಗೊಳಿಸಿದ ಮುನಿಶ್ರೇಷ್ಠರು! ಮಹಾವಿದ್ವಾಂಸರು ಸ್ತ್ರೀ ಸಂಬಂಧವಾದ ಜಿಗುಪ್ಸೆಯಿಂದ ಶ್ರೀಮನ್ನಾರಾಯಣನ ಆರಾಧನೆಯೇ ಯೋಗ್ಯವಾದುದೆಂದು ತೀರ್ಮಾನಿಸಿ, ಈ ಕ್ಷೇತ್ರದಲ್ಲಿ ಕೆಲಕಾಲ ಧ್ಯಾನ, ಪೂಜೆಗಳಿಂದ ಕಳೆದಿದ್ದರು ಎಂದು ದಂತಕತೆ. ಶ್ರೀಕೃಷ್ಣನಲ್ಲಿ ಅಚಲವಾದ ಭಕ್ತಿಭಾವಗಳಿಂದ ದೇವರನ್ನು ಪೂಜಿಸಿ ದಿನಗಳೆದರು. ಶ್ರೀ ಅನಂತಪದ್ಮನಾಭಸ್ವಾಮಿ ಕ್ಷೇತ್ರಕ್ಕಿಂತ ಮೊದಲೇ ಗೋಸಾಲೆ ಕೃಷ್ಣನ ದೇವಾಲಯವಿತ್ತೆಂದೂ, ಇದು ಒಂದು ಮಠವಾಗಿತ್ತೆಂದೂ ಪ್ರಶ್ನಾ ಚಿಂತನೆ. ಈ ದೇವಾಲಯವು ಕೆರೆಯ ನೈಋತ್ಯ ಭಾಗದಲ್ಲಿದೆ. ಈ ದೇವಾಲಯದ ಅಂಗಣದ ರಚನೆ ಮತ್ತು ಗೋಪುರಗಳ ವಿನ್ಯಾಸವು ಮಠದ ಛಾಯೆಯನ್ನು ಈಗಲೂ ಪ್ರತಿಬಿಂಬಿಸುತ್ತವೆ. ಈ ದೇವಾಲಯಕ್ಕೆ ನೈಋತ್ಯ ಭಾಗದಲ್ಲಾಗಿ ಸ್ವಾಮಿಗಳ ಸ್ನಾನ ಕೊಳವಿದೆ. ಕಗ್ಗಲ್ಲಿನ ಚಪ್ಪಡಿಗಳಿಂದಲೇ ಈ ಕೊಳವನ್ನು ನಿರ್ಮಿಸಲಾಗಿದೆ. ಇಳಿದು ಮುಳುಗಿ ಸ್ನಾನ ಮಾಡುವ ವ್ಯವಸ್ಥೆಗೆ ಅನುಗುಣವಾದಂತಿದೆ. (ಈಗ ಇದು ದೇವಸ್ಥಾನದ ಅಧೀನದಲ್ಲಿಲ್ಲ).

ಶಿವಳ್ಳಿ ಬ್ರಾಹ್ಮಣರಾದ ಈ ಮುನಿಶ್ರೇಷ್ಠರು ವಿಷ್ಣುವಿನ ಆರಾಧಕರಾಗಿದ್ದರು. ಹಲವು ವರ್ಷಗಳಷ್ಟು ಕಾಲ ಪೂಜಾದಿ ಕರ್ಮಗಳನ್ನು ಮಾಡುತ್ತಾ ಭಕ್ತಿರಸದ ಪ್ರತಿಪಾದಕರಾಗಿದ್ದರು. ಅನನ್ಯ ಭಕ್ತಿಯಿಂದ ಪೂಜೆಗಳಲ್ಲಿ ತೊಡಗುತ್ತಿದ್ದ ಶ್ರೀ ಸ್ವಾಮಿಗೆ ದಿನನಿತ್ಯ ಓರ್ವ ಬಾಲಕನು ಬಂದು ಸಹಕರಿಸುತ್ತಿದ್ದನು. ಈ ಬಾಲಕ ಯಾರು? ಎಲ್ಲಿಂದ ಬಂದ? ಎಂಬಿತ್ಯಾದಿ ವಿವರಗಳನ್ನಅನ್ವೇಷಣೆಮಾಡದೆ, ತಮ್ಮ ಭಕ್ತಿಪೂರ್ವಕ ಪೂಜೆಗಳಲ್ಲಿ ಮಗ್ನರಾಗುತ್ತಿದ್ದರು. ಕಾಲಚಕ್ರದ ಗತಿಯಲ್ಲಿ ಏನೆಲ್ಲಾ ವಿಪರ್ಯಾಸಗಳು ಬಂದೊದುಗುತ್ತವೆ ಎಂಬುದಕ್ಕ ಈ ಕ್ಷೇತ್ರ ಸಾಕ್ಷಿ ! ಅದೊಂದು ದಿನ ಶ್ರೀ ಸ್ವಾಮಿಗಳು ಎಂದಿನಂತೆ ಪೂಜಾಕಾರ್ಯದಲ್ಲಿ ಮಗ್ನರಾಗಿದ್ದರು. ಬಾಲಕನು ಬಂದ. ಬಾಲಚೇಷ್ಟೆಯ ಪ್ರತಿರೂಪವಾದ ಬಾಲಕನ ಕೃತ್ಯವು ಆ ಘಟನೆಗೆ ನಾಂದಿಯಾಯ್ತು. ಪೂಜಾ ಸಾಮಾಗ್ರಿಗಳನ್ನು ಹಿಡಿದು ತಂಟೆ ಮಾಡುತ್ತಿದ್ದ ಬಾಲಕನನ್ನು ಸ್ವಾಮಿಗಳು ತನ್ನ ಎಡ ಮೊಣಕೈಯಿಂದ ದೂಡಿಯೇ ಬಿಟ್ಟರು! ರಭಸಕ್ಕೆ ಬಾಲಕನು ದೂರಕ್ಕೆ ಎಸೆಯಲ್ಪಟ್ಟಂತೆ ತೋರಿತು. ಬಾಲಕನು ಹೋಗಿ ಬಿದ್ದ ಜಾಗದಲ್ಲಿ ದೊಡ್ಡ ಒಂದು ಗುಹೆಯು ರೂಪುಗೊಂಡಿತು. ಗುಹೆಯ ಸಮೀಪಕ್ಕೆ ಬಂದರು. ಬಾಲಕನನ್ನು ಕಾಣಲಾಗಲಿಲ್ಲ.ಬದಲಾಗಿ ಓಂಕಾರದ ಜ್ಯೋತಿರ್ಲಿಂಗ ಪ್ರತ್ಯಕ್ಷವಾಯ್ತು. ಪಶ್ಚಾತ್ತಾಪ, ಬೇಸರಗಳಿಂದ ಜ್ಯೋತಿಯನ್ನು ಪಡೆಯಲು ಮುಂದಾದರು. ಜ್ಯೋತಿರ್ಲಿಂಗ ಮುಂದೆ ಸಾಗಿತು. ಸ್ವಾಮಿಗಳು ಹಿಂಬಾಲಿಸಿದರು. ಜ್ಯೋತಿ ಮುಂದೆ….. ಸ್ವಾಮಿಗಳು ಹಿಂದೆ! ಪಯಣವು ಗುಹಾ ಮಾರ್ಗವಾಗಿಯೇ ಸಾಗಿತು.ಪಚ್ಚಿಮದ ಕಡಲ ಕೆರೆಯಲ್ಲಿ ಹೊರಲೋಕಕ್ಕೆ ಕಾಣಲ್ಪಟ್ಟಿತು.ಈಗಿನ ಮೊಗ್ರಾಲ್ ಗೆ ಸಮೀಪ ‘ನಾಂಗುಹಿ’ ಎಂಬ ಸ್ತಳದಲ್ಲಿ ಭೂಮಿಯ ಮೇಲ್ಭಾಗದಲ್ಲಿ ಸಂಧಿಸಿದರು. ಜ್ಯೋತಿರ್ಲಿಂಗವು ಅಲ್ಲಿಂದ ದಕ್ಷಿಣಾಭಿಮುಕವಾಗಿ ಪಯಣವನ್ನು ಬೆಳೆಸಿತು. ಹಿಂದೆಯೇ ಸ್ವಾಮಿಗಳು ನಡೆದರು. ದಿನಗಳೆಷ್ಟೋ ಸಂಚರಿಸಿದರು. ಕೊನೆಯಲ್ಲಿ ಕೇರಳದ ದಕ್ಷಿಣ ತುದಿಗೆ ತಲುಪುವಷ್ಟರಲ್ಲಿ ಜ್ಯೋತಿರ್ಲಿಂಗವು ಮೊದಲಿನ ಬಾಲಕನಿಗೆ ಸ್ವಾಮಿಗಳಿಗೆ ದರ್ಶನ ಕೊಟ್ಟಿತು. ಕೂಡಲೇ ತಾನು ಆರಾಧಿಸುತ್ತಿರುವ ಶ್ರೀಮನ್ನಾರಾಯಣನ ದರ್ಶನವು ಆಯ್ತು. ಸ್ವಾಮಿಗಳಿಗೆ ದೇವರು ಸಮಾಧಾನಕರವಾದ ಮಾತನ್ನಾಡಿದರು ಪಶ್ಚಾತ್ತಾಪಗೊಂಡ ಸ್ವಾಮಿಗಳಿಗೆ ದೇವರು ಸಮಾಧಾನಕರವಾದ ಮಾತನ್ನಾಡಿದರು. ‘ಕಾಲದ ಆಜ್ಞೆಯಂತೆ ನಾವು ನಡೆದುಕೊಳ್ಳಬೇಕು ಅದರಂತೆಯೇ ಈ ಘಟನೆ ನೆಡೆಯಬೇಕಾಯ್ತು, ನಡೆದಿದೆ ಇದರಲ್ಲಿ ನಿನ್ನದೇನೂ ತಪ್ಪಿಲ್ಲ… ನಿಮಿತ್ತ ಮಾತ್ರ.’ ಎಂದು ಅಶರೀರವಾಣಿಯೊಂದನ್ನು ಕೇಳಿದಾಗ ಸ್ವಾಮಿಗಳಿಗೆ ದಿವ್ಯಜ್ಞಾನವುಂಟಾಯಯುಯ್ತು ಈ ಸಮಾಗಮ ಉಂಟಾದ ಸ್ಥಳವನ್ನು ‘ಅನಂತನ್ ಕಾಡು’ ಎಂದು ಕರೆಯುತ್ತಾರೆ.

(ಮೊಗ್ರಾಲ್ ಸಮೀಪದ ನಾಗುಯಲ್ಲಿ ಮೇಲೆ ಹೇಳಿದ ಘಟನೆಗೆ ಪೂರಕವಾದ ಕುರುಹನ್ನು ಈಗಲೂ ಕಾಣಬಹುದಾಗಿದೆ. ಸುತ್ತಲೂ ಅನ್ಯಮತದವರಿಂದ ಆವೃತ್ತವಾಗಿದ್ದರೂ, ಸ್ವಲ್ಪ ಜಾಗವನ್ನು ಹೊರಗೊಡೆಗಳಿಂದ ಸಂರಕ್ಷಿಸಿ ಹಾಗೆಯೇ ಇಟ್ಟಿರುತ್ತಾರೆ. ಎರಡು ಪಾದಗಳನ್ನು ಮುರಕಲ್ಲಿನಿಂದ ಕೆತ್ತಿದ ಆಕೃತಿಯಲ್ಲಿ ಕಾಣಬಹುದಾಗಿದೆ. ಭಯಭಕ್ತಿಗಳಿಂದ ಯಾರು ಈ ಆವರಣದೊಳಗೆ ಹೋಗುವುದೂ ಇಲ್ಲ) ಯಾವುದೇ ಮನುಷ್ಯ ನಿರ್ಮಾಣದ ಕುರುಹುಗಳಿಲ್ಲದ ಈ ಗುಯೆಯನ್ನು ಭಕ್ತಿಪೂರ್ವಕವಾಗಿ ಶ್ರೀ ಕ್ಷೇತ್ರದಲ್ಲಿ ಕಾಯ್ದುಕೊಳ್ಳಲಾಗಿದೆ. ಗುಯೆಯ ಮಧ್ಯಭಾಗದಲ್ಲಿ ಒಂದು ಸಣ್ಣ ಹೊಂಡವಿದೆ. ಹೆಚ್ಚೆಂದರೆ 3 ಅಡಿ ಆಳ. ಈ ಹೊಂಡದಲ್ಲಿ ವರ್ಷದ ಎಲ್ಲಾ ದಿನಗಳಲ್ಲೂ ಅತಿ ಶುಭ್ರವಾದ ಸ್ವಚ್ಚವಾದ ನೀರನ್ನು ಕಾಣಬಹುದು. ಬಿಲ್ವಮಂಗಲ ಸ್ವಾಮಿಗಳು ಇಲ್ಲಿ ತಪಸ್ಸನ್ನು ಮಾಡುತ್ತಿದ್ದರೆಂದು ತೀರ್ಥವಾಗಿ ಈ ಹೊಂಡದ ಜಲವನ್ನು ಊಪಯೋಗಿಸುತ್ತಿದ್ದರೆಂದು ಐತಿಯ್ಯ! ಸದ್ಯ ಅದರ ಪಾವಿತ್ರ್ಯವನ್ನು ಅದೇ ರೀತಿಯಲ್ಲಿ ಇಟ್ಟುಕೊಳ್ಳುವುದಕ್ಕೋಸ್ಕರ ಜನರಿಗೆ ಇದರ ಒಳಗೆ ಪ್ರವೇಶ ನಿಷಿದ್ಧವಾಗಿದೆ. ಮುರಕಲ್ಲು ಒಡೆದು ನಿರ್ಮಾಣಗೊಂಡ ಈ ಗುಯೆಯೊಳಗೆ ಅದೇನೋ ಧ್ಯಾನದ ಅನುಭವಕ್ಕೆ ಪ್ರೇರಣೆಯನ್ನೀಯುವಂತಿದೆ. ಗುಯೆಯ ಮೇಲೆಯೇ ಶ್ರೀ ಗಣಪತಿ ಗುಡಿಯಿದೆ. ಕಾಲಗರ್ಭದಲ್ಲಿ ಅಡಕವಾಗಿರುವ ಅದ್ಯಾವುದೋ ರಹಸ್ಯಗಳ ಜೀವಂತ ನಿದರ್ಶನವಾಗಿಯೂ, ಆಶ್ಚರ್ಯಕರ ಘಟನೆಗಳಿಗೂ ಊದಾತ್ತ ಊದಾಹರಣೆಯಾಗಿ ಭಕ್ತರ ಮನಸ್ಸಿನಲ್ಲಿ ಈ ಗುಹೆಯ ಚಿರಸ್ಥಾಯಿಯಾಗಿದೆ.

ನಮಸ್ಕಾರ ಮಂಟಪದ ಎಡಪಾರ್ಶ್ವವಾಗಿ ದೇವರ ನಡೆಗೆ ಹೋಗಲು ಸೌಕರ್ಯವಿದೆ. ಇದರ ಎಡಭಾಗದಲ್ಲಿ ದೇವರ ನೈವೇದ್ಯ ಶಾಲೆ ಇದೆ. ನೈವೇದ್ಯ ಶಾಲೆ ಅಥವಾ ಪಾಕಶಾಲೆಯೂ ಕೆರೆಯಲ್ಲೇ ಇದೆ. ‘ಸೋಪಾನ’ ಅಥವಾ ‘ಆನೆಪ್ಪಡಿ’ ಯ ಮುಂದೆ ನಿಂತು ಮಾತ್ರವೇ ಭಕ್ತರ ದೇವರ ದರ್ಶನವನ್ನು ಪಡೆಯಬಹುದಾಗಿದೆ. ಇಲ್ಲಿ ಕಗ್ಗಲ್ಲಿನ ಫಲಕಗಳನ್ನು ಹಾಸಿ, ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ. ಈ ಫಲಕಗಳ ಕೆಳಗಿನಿಂದ ನೀರು ಅತ್ತಿಂದಿತ್ತ ಹರಿದು ಹೋಗುವುದರಿಂದ, ಪ್ರಧಾನ ದೇವಾಲಯಕ್ಕೆ ಸೂತ್ತಲೂ ನೀರಿನ ನೇರ ಸಂಪರ್ಕ ಇರುವುದು.

ಆನೆಪ್ಪಡಿಯ ಮೂಲಕ ಒಳಪ್ರವೇಶಿಸಿದರೆ, ಮುಖಮಂಟಪದೊಳಗೆ ತಲುಪುತ್ತೇವೆ. ಮುಖ ಮಂಟಪವನ್ನು ಕೂಡಾ ಪವಿತ್ರವಾಗಿ ಇರಿಸಿಕೊಳ್ಳಬೇಕಾಗಿದೆ. ಯಾಕೆಂದರೆ, ದೇವರು ಅಭಿಷೇಕ ಕಾರ್ಯಗಳು ಇಲ್ಲಿಯೇ ನಡೆಯುವುದು. ವೃಷಭರಾಶಿಯಲ್ಲಿ ನಿರ್ಮಿತವಾದ ಕಗ್ಗಲ್ಲಿನ ‘ಅಭಿಷೇಕ ಪೀಠ’ವನ್ನು ಇಲ್ಲಿ ಕಾಣಬಹುದು. ಅಭಿಷೇಕದ ನೀರು ನೇರವಾಗಿ ಕೆರೆಗೆ ಬೀಳುವುದು. ಆದುದರಿಂದ ಇಡೀ ಕೆರೆಯ ನೀರು ತಿರ್ಥವಾಗುವುದು. ದಳಿಯ ಸಮೀಪದಲ್ಲಿ ಈಶಾನ್ಯ ಮೂಲೆಯಲ್ಲಿ ಸಣ್ಣ ಬಾವಿಯೊಂದನ್ನು ಕಾಣಬಹುದು. ಅರ್ಚಕರು ಅಭಿಷೇಕ ಮತ್ತು ನೈವೇದ್ಯ ತಯಾರಿಗಾಗಿ ಶುದ್ಧವಾದ ನೀರನ್ನು ಈ ಬಾವಿಯಿಂದಲೇ ತೆಗೆಯಬೇಕು.

ಮುಖಮಂಟಪವನ್ನು ದಾಟಿದರೆ ಎಡನಾಳಿ ತಲುಪುವೆವು. ದೈವಿಕ ಚೈತನ್ಯವನ್ನು ಹೊರಲೋಕಕ್ಕೆ ಪಸರಿಸುವಂತೆ ಮಾಡುವಲ್ಲಿ ಈ ಎಡನಾಳಿಯ ಸ್ಥಾನವು ಪ್ರಧಾನ ಪಾತ್ರ ವಹಿಸುತ್ತದೆ. ಗರ್ಭಗುಡಿಗೆ ಪ್ರವೇಶಿಸುವ ಪ್ರಧಾನ ಕವಾಟದ ಇಕ್ಕೆಡೆಗಳಲ್ಲಿ ಜಯವಿಜಯರ ಪ್ರತಿಮೆಗಳನ್ನು ಕಾಣಬಹುದು. ಸಾಕ್ಷಾತ್ ವೈಕುಂಠ ಸದೃಶವಾದ ಗರ್ಭಗೃಹ. ದ್ವಾರಪಾಲಕರಾದ ಜಯವಿಜಯರು ಒಡೆಯನ ಆಣತಿಯನ್ನು ಶಿರಸಾವಹಿಸುವಂತೆ ಕಾದುನಿಂತಿರುವ ಭಾವ ಇವರ ಮುಖದಲ್ಲಿ ಸ್ಫುರಿಸುತ್ತವೆ.! ಸೂತ್ತಲು ನೀರು. ಇದುವೇ ಕ್ಷೀರ ಸಾಗರ! ಅದರ ಮಧ್ಯೆ ಶ್ರೀಮನ್ನಾರಾಯಣನು ಅನಂತನ ಮೇಲೆ ಉಪವಿಶ್ಯನಾಗಿರುವಂತಹ ಭಂಗಿ. ಐದುಹೆಡೆಯ ಅನಂತನು ಶ್ರೀ ಅನಂತಪದ್ಮನಾಭನಿಗೆ ತನ್ನ ಹೆಡೆಗಳಿಂದ ಛತ್ರದೋಪಾದಿಯಲ್ಲಿ ರಕ್ಷಣೆ ನೀಡುತ್ತಿದ್ದರು ಸ್ಥಿತಿ. ಇಕ್ಕೆಡೆಗಳಲ್ಲಿ ಶ್ರೀದೇವಿ. ಭೂದೇವಿಯರ ವಿಗ್ರಹಗಳು. ಭಕ್ತಿಪೂರ್ವಕ ದೇವರಿಗೆ ನಮಸ್ಕ್ಕರಿಸುವ ಗರುಡ ಮತ್ತು ಹನುಮರು, ಭಕ್ತಶ್ರೇಷ್ಟರ ಪ್ರತೀಕಗಳು. ಎಡಬಲ ಗೋಡೆಗಳಲ್ಲಿ ನಾಗಕನ್ನಿಕೆಯರ ಚಾಮರ ಬೀಸುತ್ತಿದ್ದಾರೆ. ಹೀಗೆ ಒಟ್ಟು ಏಳು ವಿಗ್ರಹಗಳನ್ನು ಕಡುಶರ್ಕರ ಪಾಕದಿಂದಲೇ ನಿರ್ಮಿಸಲಾಗಿದೆ. ಎಕಾಂತವಾದ ಸನ್ನಿವೇಶ! ಭಕ್ತಿರಸ ಪ್ರಧಾನವಾದ ನೋಟಗಳು. ಪುರಾಣ ಕತೆಗಳ ಮೂರ್ತರೂಪದ ದೃಶ್ಯಗಳು!

ಕಡುಶರ್ಕರ ಪಾಕದ ವಿಗ್ರಹಗಳು:

ಹಿಂದೂ ದೇವಬಿಂಬಗಳು ಹಲವು ರೂಪದಲ್ಲಿ ಕಂಡುಬರುತ್ತವೆ. ಹಲವು ರೂಪಗಳನ್ನು ಹಲವು ದ್ರವ್ಯಗಳಿಂದ ಮಾಡಿರುವವುಗಳಾಗಿವೆ. ಪ್ರತಿಯೊಂದಕ್ಕೂ ಅದರದ್ದೇ ಆದ ಆಯುಧಗಳು, ಪೂಜಾವಿಧಾನದಲ್ಲೂ ಅನುಷ್ಠಾನ ಕರ್ಮಗಳಲ್ಲೂ ಉಚ್ಛರಿಸುವ ಮಂತ್ರದಲ್ಲೂ ವ್ಯತ್ಯಾಸ.

ದೇವರ ವಿಗ್ರಹವನ್ನು ಶಿಲ್ಪಶಾಸ್ತ್ರ ವಿಧಿಯಂತೆ ಹಲವು ದ್ರವ್ಯಗಳಿಂದ ಮಾಡುವುದು ರೂಢಿ. ಲೋಹ, ದಾರು, ಶಿಲೆ, ಮೃತ್ತಿಕಾ ಮೊದಲಾದ ದ್ರವ್ಯಗಳಿಂದ ಮಾಡಲ್ಪಟ್ಟ ಹೆಚ್ಚು ವಿಗ್ರಹಗಳನ್ನು ನಾವು ಬೇರೆ ಬೇರೆ ದೇವಾಲಯಗಳಲ್ಲಿ ನೋಡುತ್ತೇವೆ. ಆದರೆ ‘ಕಡುಶರ್ಕರ ಪಾಕ’ವೆಂಬ ಪುರಾತನ ವಿಗ್ರಹ ಶೈಲಿಯು ಅತಿ ವಿರಳ. ಮುನಿಶ್ರೇಷ್ಠರ ತಪೋಬಲದಿಂದಲೂ, ದೇವರ ಅಸ್ಥಿತ್ವವನ್ನು ಅವರ ಸಿದ್ಧಾಂತಕ್ಕೆ ಪರಿವರ್ತಿಸಿದಾಗ ಉಂಟಾದ ವಿಧಾನವೇ ಈ ಕಡುಶರ್ಕರ ಪಾಕ. ಅವರ ಆಶಯವೂ ಮೂರ್ತ ಸ್ವರೂಪವನ್ನು ತಾಳಿದುದು ಈ ಕಡುಶರ್ಕರ ಪಾಕ ವಿಧಾನದಿಂದ. ಹೆಸರೇ ಸೂಚಿಸುವಂತೆ, ಕಠಿಣವಾದ ಪಾಕವೇ ಈ ವಿಗ್ರಹ ನಿರ್ಮಾಣದಮೂಲ. ಎಂದರೆ, ಶರ್ಕರೋಪಾದಿಯಲ್ಲಿರುವ ಹತ್ತು ಹಲವು ವಸ್ತುಗಳ ಮಿಶ್ರಣವೇ ಇದರ ಪ್ರಧಾನ ಕಚ್ಛಾವಸ್ತು!

ಪ್ರಧಾನ ಕ್ಷೇತ್ರದಲ್ಲಿರುವ ವಿಗ್ರಹಗಳೆಲ್ಲವೂ ಕಡುಶರ್ಕರ ಪಾಕದಿಂದ ನಿರ್ಮಾಣವಾಗಿದ್ದವುಗಳಾಗಿದ್ದವು. ಸುಮಾರು 1200 ವರ್ಷಗಳಷ್ಟು ಹಳೆಯದಾದ ಮೊದಲಿನ ವಿಗ್ರಹಗಳಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿದ್ದವು. 1976 ರಲ್ಲಿ ನಡೆದ ನವೀಕರಣದ ಭಾಗವಾಗಿ ಈ ಪುರಾತನ ವಿಗ್ರಹಗಳನ್ನು ಗರ್ಭಗುಡಿಯಿಂದ ತೆಗೆದು ಜಲಾಧಿವಾಸ ಮಾಡಿದ್ದರು. ಆ ಸ್ಥಾನದಲ್ಲಿ ಪಂಚಲೋಹ ವಿಗ್ರಹಗಳನ್ನು ಪ್ರತಿಷ್ಠೆ ಮಾಡಿದರು. ನಾಗಕನ್ನಿಕೆಯರ ರೂಪಗಳನ್ನು ದಾರು ವಿಗ್ರಹವಾಗಿ ಗರ್ಭಗುಡಿಯೊಳಗೆ ಇಟ್ಟರು. ಕಲಶಾನಂತರ ಕಂಡುಬಂದ ದೋಷಗಳ ಪರಿಹಾರಕ್ಕಾಗಿ ‘ದೇವಪ್ರಶ್ನೆ’ ಯೊಂದನ್ನು ಇಡಲಾಯ್ತು. ಅದರಲ್ಲಿ ವಿಗ್ರಹ ಬದಲಾವಣೆಯು ಪ್ರಧಾನ ದೋಷವಾಗಿ ಮೂಡಿಬಂತು. ಅಲ್ಲದೆ, ಪೂರ್ವ ಸ್ಥಿತಿಯಲ್ಲಿದ್ದ ‘ಕಡುಶರ್ಕರಪಾಕ’ ವಿಗ್ರಹಗಳನ್ನೇ ಪ್ರತಿಷ್ಠೆ ಮಾಡಬೇಕೆಂದು ಕಂಡುಬಂತು. ಎಲ್ಲಾ ಏಳು ವಿಗ್ರಹಗಳೂ ಕೂಡಾ ಕಡುಶರ್ಕರ ಪಾಕದಿಂದಲೇ ಆಗಬೇಕೆಂದೂ ಕಂಡು ಬಂತು. ಈ ಪುರಾತನ ಶೈಲಿಯ ವಿಗ್ರಹ ನಿರ್ಮಾಣದ ಅರಿವು ಆಗಿನ ಜನರಲ್ಲಿ ಏನೂ ಇಲ್ಲದುದರಿಂದ, ಭಕ್ತ ಜನರೆಲ್ಲರೂ ಒಗ್ಗೂಡಿ ಇನ್ನೊಂದು ದೇವಪ್ರಶ್ನೆಯನ್ನು ಇಟ್ಟು, ಇರುವ ಪಂಚಲೋಹ ವಿಗ್ರಹದಲ್ಲೇ ಚೈತನ್ಯ ಆವಾಹಿಸಲು, ದೇವರ ಪ್ರೀತಿ ಅನುಗ್ರಹಗಳನ್ನು ಕೇಳಲು ಮುಂದಾದರು. ಎರಡನೇ ಅಷ್ಟಮಂಗಲ ಪ್ರಶ್ನೆಯಲ್ಲೂ ಮೊದಲ ಪ್ರಶ್ನೆಯಲ್ಲಿ ಕಂಡುಬಂದ ದೋಷಗಳೇ ಮೂಡಿ ಬಂದವು. ಇದರ ಬದಲಾವಣೆ ಹೊರತು ಅನ್ಯ ಮಾರ್ಗವಿಲ್ಲ ಎಂದು ಘಂಟಾಘೋಷವಾಗಿ ಸಾರಿದರು.

ಕಾರಣ:

ಗರ್ಭಗೃಹ, ದೇವಾಲಯದ ರಚನೆ, ಆಚಾರ, ವಿಧಿ ವಿಧಾನಗಳೆಲ್ಲವೂ ಅಲ್ಲಿ ನಡೆಯತಕ್ಕ ಆಗಮ ವಿಧಾನಗಳನ್ನು ಆಶ್ರಯಿಸಿಕೊಂಡಿರುವುದು. ಎಲ್ಲಾ ದೇವಾಲಯಗಳಲ್ಲಿ ನಡೆದುಕೊಂಡು ಬರುವ ಪ್ರಧಾನ ವಿಧಾನಗಳೆಂದರೆ ‘ಏಕಬೇರ ವಿಧಾನ.’ ಆದರೆ ‘ಬಹುಬೇರ ವಿಧಾನ’ ದಲ್ಲಿ ಪೂಜಾಧಿ ಕಾರ್ಯಗಳು ನಡೆಯುವ ವಿರಳ ದೇವಾಲಯಗಳೂ ಇವೆ. ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರ ಅನಂತಪುರದಲ್ಲಿ ಪುರಾತನದಲ್ಲೇ ನಡೆದುಕೊಂಡ ವಿಧಾನವು ‘ಬಹುಬೇರ ವಿಧಾನ.’ ಏಕಬೇರ ವಿಧಾನದಲ್ಲಿ ಪ್ರತಿಷ್ಠೆ ಮಾಡಿದ ವಿಗ್ರಹಗಳಿಗೆ ಅಭಿಷೇಕ ಮತ್ತು ಪೂಜೆಗಳು ನಡೆಯುತ್ತವೆ. ಎಂದರೆ, ಅಭಿಷೇಕ, ಪೂಜೆ ಪುನಸ್ಕಾರಗಲೆಲ್ಲವೂ ಗರ್ಭಗುಡಿಯಲ್ಲಿಯೇ ನಡೆಯುತ್ತದೆ. ಆದರೆ ಬಹುಬೇರ ವಿಧಾನದಲ್ಲಿ ಪ್ರತಿಷ್ಠೆಗೊಂಡ ವಿಗ್ರಹಗಳಿಗೆ ಅಭಿಷೇಕವಿಲ್ಲ. ಅಭಿಷೇಕ ವಿಗ್ರಹವು ಪ್ರತ್ಯೇಕವಾಗಿಯೇ ಇರುವುದು. ಗರ್ಭಗುಡಿಯಿಂದ ಹೊರಕ್ಕೆ ತಂದು, ಆ ವಿಗ್ರಹಗಳಿಗೆ ಅಭಿಷೇಕ ಮಾಡಿ, ಪುನಃ ವಿಗ್ರಹಗಳನ್ನು ಯಥಾಸ್ಥಾನದಲ್ಲಿರಿಸಿ ಪೂಜೆಯನ್ನು ಮಾಡುವುದು ಕ್ರಮ. ಇಲ್ಲಿ ಆತ್ಮ ಮತ್ತು ದೇಹಗಳೆಂಬ ಎರಡು ಪ್ರಭೇದಗಳು ಬೇರೆ ಬೇರೆಯಾಗಿಯೇ ಇರುವುದೆಂಬ ಸಂಕಲ್ಪ. ಏಕಬೇರದಲ್ಲಿ ಇವೆರಡೂ ಒಂದೇ ವಿಗ್ರಹದಲ್ಲಿ! ಸ್ನಾನ, ಜಪ, ತಪ, ಪೂಜಾದಿ ಕರ್ಮಗಳು ಆತ್ಮಕ್ಕೆ ಸಮರ್ಪಿಸಿ, ಪೂಜೆಯ ಕೊನೆಯಲ್ಲಿ ಈ ಆತ್ಮದ ದೈವೀಕ ಚೈತನ್ಯವನ್ನು ದೇಹದಲ್ಲಿ ಆವಾಹಿಸಬೇಕಾಗಿದೆ. ಭಕ್ತ ಜನರ ಮನೋಭೀಷ್ಟೆಯನ್ನು ಪೂರೈಸುವುದು ಈ ದೇಹದ ಮೂಲಕ, ಅಂದರೆ ಪ್ರಧಾನ ಪ್ರತಿಷ್ಠೆಯ ಮೂಲಕ!

ಕಡುಶರ್ಕರ ಪಾಕದ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಬಹುಬೇರ ಪೂಜಾ ವಿಧಾನಗಳನ್ನು ಈ ಕ್ಷೇತ್ರದಲ್ಲಿ ಪಾಲಿಸಲ್ಪಡಬೇಕು ಎಂಬುದು ಪ್ರಶ್ನಾ ಚಿಂತನೆ. ಕಡುಶರ್ಕರದ ದ್ರವ್ಯಗಳಾಗಲೀ, ಶಿಲ್ಪಿಗಳ ಬಗ್ಗೆಯಾಗಲೀ ಬಗ್ಗೆ ಯಾಗಲೀ ಅನುಭವವಿಲ್ಲದ ಭಕ್ತ ಜನರು ಕಂಗೆಟ್ಟರು. ಮುಂದಿನ ದಿನಗಳಲ್ಲಿ ತಿಳಿದವರಲ್ಲಿ ವಿಚಾರ ವಿನಿಮಯ ಮಾಡಲಾಯ್ತು. ಆದರೂ ಇದನ್ನು ನಿರ್ಮಿಸುವ ಶಿಲ್ಪಿಗಳ ಬಗ್ಗೆ ಯಾವುದೇ ಮಾಹಿತಿ ದೊರೆಯದೇ ಇದ್ದುದರಿಂದ, ಏನು ಮಾಡುವುದೆಂದು ದೇವರಿಗೇ ಶರಣು ಹೋಗೋಣ ಎಂಬಲ್ಲಿಗೆ ಮೂರನೆಯ ಅಷ್ಟಮಂಗಲವನ್ನೂ ಇದಬೇಕಾಯ್ತು.

ಈ ಪ್ರಶ್ನೆಯಿಂದ ಕೆಲವೊಂದು ಅಶಾಕಿರಣಗಳು ಭಕ್ತರಿಗೆ ಲಭಿಸುವಂತಾಯಿತು. ಇನ್ನೂ ಹೆಚ್ಚಿನ ವಿಷಯಗಳು ಲಭಿಸಲು ಸಹಕಾರಿಯಾಯ್ತು. ವಾಸ್ತುಶಿಲ್ಪಿಗಳನ್ನು ಪ್ರಶ್ನಾ ಮುಖೇನ ನಿರ್ಣಯಿಸಲಾಯಿತು. ಕೋಟ್ಟಯಂ ಜಿಲ್ಲೆಯ ವೇಲಾಪ್ಪರಂಬಿಲ್ ಎಂಬಲ್ಲಿ ಶ್ರೀ ಪರಮೇಶ್ವರನ್ ನಂಬೂದಿರಿಯವರು ಕೇರಳದ ಓರ್ವ ಪ್ರಸಿದ್ಧ ವಾಸ್ತುಶಿಲ್ಪಿ ಎಂದೂ, ಜ್ಞಾನವೃದ್ಧರೂ ವಯೋವೃದ್ಧರೂ ಆದ ಈ ಶಿಲ್ಪಿಗಳನ್ನು ಕಂಡು ಭಿನ್ನವಿಸಿಕೊಂಡಲ್ಲಿ ಈ ಮಹಾಕಾರ್ಯದ ಉಸ್ತುವಾರಿಯನ್ನು ಅವರು ವಹಿಸಿಕೊಂಡಾರು ಎಂದೂ ದೇವಪ್ರಶ್ನೆಯಲ್ಲಿ ತಿಳಿದಂತೆ, ಅವರಲ್ಲಿಗೆ ನಿಯೋಗವೊಂದು ಹೋಗಿ ಅರಿಕೆ ಮಾಡಲಾಯಿತು. ಶಿಲ್ಪಿಗಳು ಯಾವುದೇ ನಕಾರಾತ್ಮಕ ಪ್ರತಿಕ್ರಿಯೆ ತೋರಿಸದೆ ಒಪ್ಪಿಕೊಂಡರು. ಅಷ್ಟೇ ಅಲ್ಲ, ಕೇರಳದ ‘ರಾಜಶಿಲ್ಪಿ’ ಪಟ್ಟವನ್ನಲಂಕರಿಸಿದ ಬ್ರಹ್ಮ ಮಂಗಲ ಶ್ರೀ ಸುಬ್ರಹ್ಮಣ್ಯ ಆಚಾರಿಯಲ್ಲಿಗೆ ಹೋಗಲು ಆಣತಿ ಕೊಟ್ಟರು.

ಧನ್ಯತೆಯ ಆ ನಿಮಿಷ:

ವಾಸ್ತು ಶಿಲ್ಪಿಗಳಾದ ಶ್ರೀ ಪರಮೇಶ್ವರನ್ ನಂಬೂದಿರಿಯವರಿಂದ ಆಜ್ಞೆಯನ್ನು ಸ್ವೀಕರಿಸಿ, ನಿಯೋಗವು ಬ್ರಹ್ಮಮಂಗಲಕ್ಕೆ ಪಯಣ ಬೆಳೆಸಿತು. ವಯೋವೃದ್ಧರಾದ(83 ವರ್ಷ) ಶ್ರೀ ಸುಬ್ರಹ್ಮಣ್ಯ ಆಚಾರಿಯವರು ಮತ್ತು ಮಕ್ಕಳ ಸಮಕ್ಷಮದಲ್ಲಿ ಬಂದ ಕಾರ್ಯದ ಪೂರ್ಣ ರೂಪವನ್ನು ಅವರ ಮುಂದಿಟ್ಟೆವು. ಧನ್ಯ ಮುಹೂರ್ತಕ್ಕೆ  ನಾಂದಿಯೋ ಎಂಬಂತೆ, ನಮ್ಮ ಅಗತ್ಯಗಳನ್ನು ಕೇಳುತ್ತಾ ಈ ವೃದ್ಧನ ಕಣ್ಣಲ್ಲಿ ನೀರು ತೊಟ್ಟಿಕ್ಕುವುದನ್ನು ಗಮನಿಸಿದೆವು. ಮಕ್ಕಳು ಯಾವುದೋ ಅವ್ಯಕ್ತ ಆನಂದದಿಂದ ತೆಲಾಡುವಂತೆ ನಮಗನಿಸಿತು. ನಮ್ಮ ಬರುವಿಕೆಯ ಉದ್ದೇಶವನ್ನು ವಿವರಿಸಿದ ನಂತರ, ಕೆಲಕಾಲ ಮೌನವನ್ನಾಚರಿಸಿದ ಶ್ರೀ ಸುಬ್ರಹ್ಮಣ್ಯ ಆಚಾರಿಯವರು ಈ ರೀತಿ ಹೇಳಿದರು. “ಇವತ್ತಿಗೆ ಒಂದು ವಾರವಾಗಿರಬಹುದು. ನಾನು ಮತ್ತು ಮಕ್ಕಳು ನಮ್ಮ ಕೆಲಸಕಾರ್ಯಗಳ ಬಗ್ಗೆ ಯಾವಾಗಲೂ ಚರ್ಚಿಸುವುದು ವಾಡಿಕೆ. ಕಳೆದ ಚರ್ಚೆಯಲ್ಲಿ ನಾನು ಇವರಲ್ಲಿ ಒಂದು ವಿಷಯವನ್ನು ತಿಳಿಸಿದ್ದೇನೆ. ಮಕ್ಕಳೇ, ನಾವು ಎಲ್ಲಾ ಬಗೆಯ ಶಿಲ್ಪಗಳನ್ನೂ ಕರಗತ ಮಾಡಿಕೊಂಡಿದ್ದೇವೆ. ಹಲವು ದೇವಸ್ಥಾನಗಳಿಗೆ ವಿಗ್ರಹಗಳನ್ನು ಮಾಡಿಕೊಟ್ಟಿದ್ದೇವೆ. ಲೋಹ, ಶಿಲೆ, ದಾರು, ಮೃತ್ತಿಕಾ ಮೊದಲಾದುವುಗಳಲ್ಲದೆ ಇನ್ನೂ ಬೇರೆ ತರದ ವಿಗ್ರಹಗಳು ನಮ್ಮ ಕಮ್ಮಟದಲ್ಲಿ ರೂಪುಗೊಂಡಿವೆ. ವಿಗ್ರಹಗಳು ಇಷ್ಟಕ್ಕೇ ನಿಲ್ಲುವುದಿಲ್ಲ. ನಮ್ಮ ಪೂರ್ವಿಕರು ಹತ್ತು ತಲೆಮಾರಿನಿಂದೀಚೆಗೆ ‘ಕಡುಶರ್ಕರ ಪಾಕ’ದಿಂದ ವಿಗ್ರಹ ನಿರ್ಮಿಸಿದ್ದಾಗಿ ತಿಳಿದು ಬಂದಿಲ್ಲ. ಆ ಒಂದು ವಿಧಾನವೂ ಶಿಲ್ಪಶಾಸ್ತ್ರದಲ್ಲಿ ಸೇರಿಕೊಂಡಿದೆ. ಯಾರಾದರೂ ಬಂದು ನಮ್ಮ ಸೇವೆಯನ್ನು ಬಯಸಿದ್ದಲ್ಲಿ ನೀವು ಖಂಡಿತವಾಗಿಯೂ ಅದನ್ನು ಮಾಡಿಕೊಡಬೇಕು. ನನಗಂತೂ ಆ ಭಾಗ್ಯ ಸಿಕ್ಕಿಲ್ಲ.” ಈ ಮಾತು ಈಗ ನೆನಪಾಯ್ತು. ನನಗೇ ಆ ಭಾಗ್ಯ ಬಂತಲ್ಲ ಎಂದರಿತು ಭಾವಪರವಶನಾದೆ ಎಂದು ಸಂತೋಷದಿಂದ ಹೇಳಿದರು. ಅಲ್ಲದೆ ಹತ್ತು ತಲೆಮಾರಿನಿಂದಲೂ ಜೋಪಾನವಾಗಿಟ್ಟುಕೊಂಡಿರುವಂತಹ  ‘ಕಡುಶರ್ಕರ ಯೋಗ ವಿಧಿ ವಿಧಾನಂ’ ಎಂಬ ಸಂಸ್ಕೃತದಲ್ಲಿರುವ ಗ್ರಂಥವನ್ನೂ  ತೋರಿಸಿದರು.  ದೇವರ ಲೀಲೆಯ ಪರಾಕಾಷ್ಠೆ! ಧನ್ಯ ನಿಮಿಷದ ಮೌನ! ಒಳ್ಳೆ ಕೆಲಸಕ್ಕೆ ದೈವೀಕ ಚಿಂತನೆ! ಕಾಲಚಕ್ರದ ಉರುಲಾಟಕ್ಕಿರುವ ಅಗೋಚರ ಶಕ್ತಿಯ ಇರವನ್ನು ಅನುಭವಿಸಿದೆವು.

ದೇವರ ಆಟ:

ದೇವಸ್ಥಾನಕ್ಕೆ ಶಿಲ್ಪಿಗಳನ್ನು ಸ್ವಾಗತಿಸಿದೆವು. ವಾಸ್ತುಶಿಲ್ಪಿ ಮತ್ತು ವಿಗ್ರಹ ಶಿಲ್ಪಿಗಳ ಆಗಮನವಾಯ್ತು. ಗರ್ಭಗೃಹದ ವೀಕ್ಷಣೆ, ರಚನೆಯ ವೈಶಿಷ್ಟ್ಯಗಳ ಮನವರಿಕೆ. ಕೊನೆಗೊಂದು ಪ್ರಶ್ನೆ. ‘ಎಷ್ಟು ಎತ್ತರದ, ಗಾತ್ರದ ವಿಗ್ರಹ ಇಲ್ಲಿ ಅಗತ್ಯವಿದೆ?’ ಅಲ್ಲೂ ನಮ್ಮಿಂದ ಉತ್ತರಿಸಲಾಗಲಿಲ್ಲ. ಕಾರಣ, ವಿಗ್ರಹದ ಗಾತ್ರ ಆಕಾರಗಳ ಕಲ್ಪನೆ ಏನೇನೂ ಇರಲಿಲ್ಲ. ನಾವೂ ಕೈ ಮುಗಿದು ಹೇಳಿದೆವು. ‘ನಮಗೆ ಗೊತ್ತಿಲ್ಲ. ಚಿಂತಾಕ್ರಾಂತರಾದ ವಾಸ್ತುಶಿಲ್ಪಿ ಮತ್ತು ವಿಗ್ರಹ ಶಿಲ್ಪಿಗಳು ಪರಸ್ಪರ ಏನೋ ಮಾತನಾಡಿಕೊಂಡರು. ಕೊನೆಗೊಂದು ಪ್ರಶ್ನೆ: ಮೊದಲಿನ ಕದುಶರ್ಕರ ಪಾಕದ ವಿಗ್ರಹವನ್ನು ಏನು ಮಾಡಿದಿರಿ! ಉತ್ತರ:ಜಲಾಧಿವಾಸ ಮಾಡಲಾಗಿದೆ. ಪ್ರಶ್ನೆ: ಎಲ್ಲಿ ? ಜಲಾಧಿವಾಸ ಮಾಡಿದ ಕೆರೆಯ ಭಾಗವನ್ನು ಬೆರಳಿನಿಂದ ತೋರಿಸಿದೆವು. ‘ನೀರಲ್ಲಿ ಮುಳುಗುವವರು ಯಾರಾದರೂ ಇದ್ದಾರೆಯೇ’-ಮರುಪ್ರಶ್ನೆ. ಆದರೆ ಕೆರೆಯಲ್ಲಿ ಮೊಸಳೆ ಇದೆಯಲ್ಲಾ ಎಂದು ಉತ್ತರಿಸಿದಾಗ ಅವರು ದಂಗಾದರು. ಕೆರೆಯಲ್ಲಿ ಮೊಸಳೆ ಇದೆ ಎಂದು ಊಹಿಸಲೂ ಸಾಧ್ಯವಾಗದ ಸಂಗತಿಯನ್ನು ಕೇಳಿ ದಂಗಾಗಿ ಬಿಟ್ಟರು. ಕೊನೆಗೂ ನಿರಾಶರಾಗದೆ ಪ್ರೋತ್ಸಾಹದಾಯಕ ದಾಟಿಯಲ್ಲಿ ಹೇಳಿದರು. ‘ದೇವರ ಮೊಸಳೆಯಲ್ಲವೇ? ದೇವರ ಕೆಲಸಕ್ಕೆ ಅದು ಸಹಕರಿಸೀತು’ ಎಂಬ ಮಾತನ್ನು ಕೇಳಿದಾಕ್ಷಣ ಭಕ್ತರೊಬ್ಬರು ಕೆರೆಗೆ ದುಮುಕಿಯೇ ಬಿಟ್ಟರು. ಮುಳುಗಿದರು. ಅವರು ಮೇಲಕ್ಕೆ ಬಂದಾಗ ಅವರ ಕೈಯಲ್ಲಿ ಉದ್ದದ ಮರದ ಒಂದು ತುಂಡು!

ನೋಡಿದಾಕ್ಷಣ ಶಿಲ್ಪಿಗಳಿಬ್ಬರೂ ‘ಸಾಕು’ ಅದುವೇ ನಮಗೆ ಬೇಕಾದುದು. ಅದುವೇ ‘ಶೂಲ’ ಎಂದೇನೋ ಅವರ ಭಾಷೆಯಲ್ಲಿ ಹೇಳಿದರು. ದಡಕ್ಕೆ ತಲುಪಿದ ಶೂಲವನ್ನು ಪರೀಕ್ಷಿಸಿ ಅದರ ವೈಶಿಷ್ಟ್ಯವನ್ನು ಎಲ್ಲರಿಗೂ ಮನನ ಮಾಡಿಕೊಟ್ಟರು. ಇದು ಸಿಕ್ಕಿದರೆ, ವಿಗ್ರಹದ ತೋರ, ಎತ್ತರ, ಅಗಲಗಳೆಲ್ಲವೂ ಲೆಕ್ಕ ಮಾಡಿ ಪಡೆಯಬಹುದೆಂದರು. ಮತ್ತೊಮ್ಮೆ ‘ಸಂಶಯಕ್ಕೆ ತೆರೆ’. ನಿರರ್ಗಳವಾಗಿ ನಿಟ್ಟುಸಿರುಬಿಟ್ಟ ನಿಮಿಷಗಳು. ಖಂಡಿತಾ ಮುಂದೆ ಏನೋ ಆಗುವುದರ ಶುಭ ಸೂಚನೆ ಎಂದು ಸಮಾಧಾನ ಪಟ್ಟೆವು. ಮುಂದೆ ನಾಲ್ಕು ವರ್ಷಗಳಲ್ಲಿ ವಿಗ್ರಹ ನಿರ್ಮಾಣದ ಕೆಲಸಗಳು ನಡೆದದ್ದು ನಮ್ಮ ಕಣ್ಣ ಮುಂದೆಯೇ.

ಏನಿದು ಕಡುಶರ್ಕರಪಾಕ:

ಮುನಿಶ್ರೇಷ್ಠರ ಸಿದ್ಧಾಂತದ ಆಧಾರದಲ್ಲಿ ರೂಪುಗೊಂಡ ವಿಗ್ರಹ ನಿರ್ಮಾಣ ವಿಧಾನವಿದು. ಜೀವಂತ ಮನುಷ್ಯ ಶರೀರವೇ ವಿಗ್ರಹವೆಂದು ಸಂಕಲ್ಪಿಸಿ, ಮನುಷ್ಯ ಶರೀರದಲ್ಲಿರುವ ಎಲ್ಲಾ ಭಾಗಗಳನ್ನು ಸಾಂಕೇತಿಕವಾಗಿ ಗುರುತಿಸಿ, ಪೂರ್ಣರೂಪವನ್ನು ಕೊಡುವುದೇ ಇದರ ಪ್ರಧಾನ ಆಶಯ. ಜೀವಂತ ಮನುಷ್ಯ ಶರೀರವು ಕಾರ್ಯ ಪ್ರವೃತ್ತವಾಗಬೇಕಾದರೆ ಎಲ್ಲಾ ಅಂಗಾಂಗಗಳೂ ಸರಿಯಾಗಿದ್ದು, ಆರೋಗ್ಯ ಪೂರ್ಣವಾಗಿದ್ದರೆ ಮಾತ್ರ ಸಾಧ್ಯ. ಅಂತೆಯೇ ಈ ವಿಗ್ರಹಗಳು ಕೂಡಾ. ಆರೋಗ್ಯವಂತ ಮನುಷ್ಯ ಶರೀರವೆಂಬ ಭಾವನೆ ಇದರ ನಿರ್ಮಾಣದ ತಳಹದಿ. ಶಾಸ್ತ್ರದಲ್ಲಿ ಇದನ್ನು ‘ವೈದ್ಯೋನಾರಾಯಾಣಃ’ ಎಂದೂ ಕರೆಯುವುದಿದೆ. ತಲೆ, ದೇಹ, ಕೈಕಾಲುಗಲೆಂಬ ಬಾಹ್ಯ ಅಂಗಗಳು ಮಾತ್ರ ಇದ್ದರೆ, ಶರೀರ ಶಾಸ್ತ್ರ ಪೂರ್ಣತೆಗೆ ತಲುಪಲು ಅಸಾಧ್ಯ. ಶರೀರದಲ್ಲಿರುವ ಅಸ್ತಿಪಂಜರ (ಎಲುಬುಗೂಡು), ನರನಾಡಿಗಳ, ಮಾಂಸ, ಆಭರಣಗಳೆಲ್ಲವೂ ಈ ವಿಗ್ರಹದ ಸವಿಶೇಷತೆಗಳು. ಸುಮಾರು ಅರುವತ್ತನಾಲ್ಕು ಆಯುರ್ವೇದ ಔಷಧಿಗಳನ್ನು ಒಟ್ಟು ಸೇರಿಸಿ 108 ವಸ್ತುಗಳ ಉಪಯೋಗದೊಂದಿಗೆ ವಿಗ್ರಹದ ಕೆಲಸವೂ ಪೂರ್ತಿಯಾಗಬೇಕಾಗಿದೆ. ಅರುವತ್ತನಾಲ್ಕು ಸಸ್ಯಜನ್ಯ, ಪ್ರಾಣಿಜನ್ಯ ಔಷಧಿಗಳು, ಉಳಿದವು ನಿರ್ಮಾಣಕ್ಕೆ ಅಗತ್ಯವಿರುವ ಉಪಕರಣಗಳು. ಉಪಕರಣಗಳಲ್ಲಿ ಅಗತ್ಯವಾಗಿರುವವುಗಳಲ್ಲಿ ಮಣ್ಣಿನ ಮಡಕೆ, ಅರೆಯುವ ಕಲ್ಲು, ಕತ್ತಿ, ಕೊಪ್ಪರಿಗೆ, ಲೇಪನಕ್ಕಿರುವ ಸಾಮಗ್ರಿಗಳು, ಪ್ರತ್ಯೇಕ ಒಲೆ, ತಾಮ್ರದ ತಗಡು ಮತ್ತು ಆಣಿ, ಚಿನ್ನ, ಬೆಳ್ಳಿ, ನೂಲು, ಹಗ್ಗ, ಹುಡಿಮಾಡುವ ಪಾತ್ರೆ, ಪಾಕ ಬರಿಸುವ ಪತ್ರೆ, ತೂತಿರುವ ಒರೆಸು ಬಟ್ಟೆ, ಕಲ್ಲುಗಳು, ಮರ ಸೇರಿವೆ. ತಂತ್ರಿಗಳು ನಿಶ್ಚಯಿಸಿದ ಜಾಗದಲ್ಲಿ ತಾಂತ್ರಿಕ ವಿಧಾನಗಳ ಪ್ರಕಾರ ಪ್ರತಿಷ್ಠೆ ಮಾಡುವುದು. ಅಡಿಭಾಗಕ್ಕೆ ಶಂಖದ ಹುಡಿಯನ್ನು ಹರಡಿ, ಗಂಗಾಜಲದಿಂದ ಪ್ರೋಕ್ಷಣೆ ಮಾಡಿ ಈ ಮುರಕಲ್ಲಿನಿಂದ ಮಾಡಿದ ಪೀಠವನ್ನು ಇಡುವುದು. ಪೀಠದ ಕಲ್ಲಿಗೆ ಯಾವುದೇ ರೀತಿಯ ಚಲನೆಯುಂಟಾಗದಂತೆ ಶಂಖದ ಹುಡಿಯನ್ನು ಹರಡುತ್ತಾರೆ. ಇದುವೇ ‘ಪೀಠ ಪ್ರತಿಷ್ಠೆ’.

ಪಾಕಕ್ಕೆ ಉಪಯೋಗಿಸುವ ವಸ್ತುಗಳು:

ತ್ರಿವೇಣಿ ಸಂಗಮದ ಮಣ್ಣು, ಗಂಗಾಮಣ್ಣು, ಗಂಗಾಜಲ, ತ್ರಿವೇಣಿ ಸಂಗಮದಿಂದ ಕೆಂಪುಕಲ್ಲು, ಕಪ್ಪುಕಲ್ಲು, ಕಾವಿಕಲ್ಲು, ಕೋಝಿಪ್ಪರಲ್ (ಭಾರತ ಹೊಳೆಯ ಆಳವಾದ ಪ್ರದೇಶದಲ್ಲಿ ಕಂಡುಬರುವ ಕೆಸರು – ಇದು ಚಿಕ್ಕ ಚಿಕ್ಕ ಸ್ಫಟಿಕದಂತೆ ಗೋಚರಿಸುತ್ತದೆ), ಮುತ್ತು ಚಿಪ್ಪಿ, ಗಾಳಿಸಿದ ಹೊಯ್ಗೆ, ಕಸ್ತೂರಿ ಗೊರೋಚನ – ಇವುಗಳೆಲ್ಲಾ ಹೊರಪ್ರದೇಶಗಳಿಂದ ಸಂಗ್ರಹಿಸಿದವುಗಳು. ಅದೇ ರೀತಿ ಬಿಲ್ವಪತ್ರೆ ಕಾಯಿಯ ಮಯಣ! ಹಲಸಿನ ಮಯಣ, ಗುಲ್ ಗುಲ್, ಕುಂದಿರಿಕಾ ಮೊದಲಾದುವುಗಳು ಪ್ರಕೃತಿಯಿಂದ ಲಭಿಸುವ ಮಯಣ ವಸ್ತುಗಳು. ಚಾಂಚಲ್ಯಂ ಕೊಲರಕ್ಕು, ಯವ, ಗೋಧಿ, ಉದ್ದು, ಇಂಗಿನ ಎಲೆ, ಪೋನ್ನಾರಿತ್ತಾರಂ, ಅಕಿಲ್, ತ್ರಿಪ್ಪಲಿ, ಕರಿಮೆಣಸು, ಅರಸಿನ, ಸಾಸಿವೆ,, ಶ್ರೀ ಗಂಧ, ರಕ್ತ ಚಂದನ, ಶುಂಠಿ, ಮೊದಲಾದ ಔಷಧಿ ಗುಣವುಳ್ಳ ಪ್ರಕೃತಿಯಿಂದ ಲಭಿಸುವ ಮೂಲವಸ್ತುಗಳು. ಪ್ರಾಣಿಜನ್ಯ ವಸ್ತುಗಳು: ದನದ ಹಾಲು, ಹೊಸರು, ತುಪ್ಪ, ಗೊರೋಚನ, ಕಸ್ತೂರಿ, ಶಂಖ ಮತ್ತು ಮುತ್ತು ಚಿಪ್ಪಿ. ಅನೆ ಕುಟ್ಟಿದ ಮಣ್ಣು, ಬಸವ ಕುಟ್ಟಿದ ಮಣ್ಣು, ಏಡಿ ಮಣ್ಣು, ನೇಗಿಲ ಮಣ್ಣು, ಹುತ್ತದ ಮಣ್ಣು, ಸಮುದ್ರ ಮಣ್ಣು, ಗಂಗಾ ಮಣ್ಣು ಮೊದಲಾದ ವಿಶೇಷ ಮಣ್ಣುಗಳೂ ಬೇಕಾಗಿವೆ.

ಈ ಮಣ್ಣಿನ ವಿಶೇಷತೆ ಏನು?:

ಆನೆಗೆ ಮದ ಬಂದಾಗ ತನ್ನ ದಾಡೆಯಿಂದ ನೆಲವನ್ನು ತಿವಿಯುವುದಿದೆ. ಎಲ್ಲಾ ಸ್ಥಳಗಳಲ್ಲಿಯೂ ಆನೆ ದಾಡೆಯಿಂದ ತಿವಿಯಲಾರದು. ಆ ಜಾಗದ ಪ್ರತ್ಯೇಕತೆಯನ್ನು ಆಘ್ರಾಣಿಸಿ ನೋಡಿದಾಕ್ಷಣ ತಿವಿಯಲಿರುವ ಪ್ರೇರಣೆ ಆನೆಗುಂಟಾಗುವುದು. ಆ ವಿಶಿಷ್ಟ ಮಣ್ಣನ್ನು ಸಂಗ್ರಹಿಸಿ ಈ ಪಾಕಕ್ಕೆ ಉಪಯೋಗಿಸುವುದಾಗಿದೆ. ಬಸವ ಕುಟ್ಟಿದ ಮಣ್ಣಿನ ವಿಶೇಷತೆಯೂ ಅದೇ ಆಗಿದೆ. ಸಮುದ್ರ ಕಿನಾರೆಯಲ್ಲಿ ತೆರೆಯೊಂದಿಗೆ ನೆಲಕ್ಕಪ್ಪಳಿಸುವ ಏಡಿಗಳು ನೆಲದಲ್ಲಿಯೇ ಬಾಕಿಯಾಗುವುದುಂಟು. ಆಗ ಪ್ರತ್ಯೇಕ ಪರಿಮಳದ ಜಾಗವನ್ನು ಆರಿಸಿ ಅಲ್ಲಿ ತೂತು ಮಾಡಿ ತನ್ನ ವಾಸವನ್ನಾರಂಬಿಸುವುದು. ಆ ಬಿಳದೊಳಗಿನಿಂದ ಒಂದು ಹಿಡಿ ಮಣ್ಣು ತೆಗೆಯಬೇಕು. ಆ ಮಣ್ಣಿನಲ್ಲೂ ಔಷಧಿ ಗುಣವಿರುವುದು. ಗದ್ದೆಯಲ್ಲಿ ಉಳುವಾಗ ನೇಗಿಲಲ್ಲಿ ಅಂಟಿನಿಲ್ಲುವ ಮಣ್ಣಿಗೂ ಪ್ರತ್ಯೇಕತೆ ಇದೆ. ಈ ಮಣ್ಣಿಗೆ ವಿಶೇಷ ಅಂಟು ಸ್ವಭಾವವಿದ್ದು, ನೇಗಿಲಿನಿಂದ ಕೆರೆದು ಸಂಗ್ರಹಿಸಬೇಕಾಗುವುದು. ಮೇಲೆ ಹೇಳಿದ ವಿಶೇಷ ವಸ್ತುಗಳನ್ನು ಸಂಗ್ರಹಿಸಿ, ಮಣ್ಣಿನ ಮಡಕೆಯಲ್ಲಿ ಶೇಖರಿಸಿಡಲಾಗುವುದು.ಎಲ್ಲಾ ವಸ್ತುಗಳನ್ನೂ ಶುದ್ಧೀಕರಿಸಿ ಹುಡಿ ಮಾಡಬೇಕಾಗುವುದು. ಹುಡಿ ಮಾಡುವ ಅಕಾರ್ಯ ಕೂಡಾ ಬಹಳ ಗೌಪ್ಯವಾಗಿಟ್ಟುಕೊಳ್ಳಬೇಕು. ಕಾರಣ, ಅಶುದ್ಧ ವಸ್ತುಗಳು ಬೆರಕೆಯಾಗದಂತೆಯೂ, ಇನ್ನೊಬ್ಬರು ಅದರ ಬಗ್ಗೆ ಹೆಚ್ಚೇನೂ ಕೇಳದಂತೆಯೂ ಆಗಿದೆ. ಹುಡಿಮಾಡುವ ವ್ಯಕ್ತಿಯು ಮಿಂದು ಶುಚಿರ್ಭೂತನಾಗಿ ಏಕಚಿತ್ತದಿಂದ ಈ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಮಾತು ಸಲ್ಲ. ಬೆವರನ್ನು ಜಾಗ್ರತೆ ವಹಿಸಬೇಕು. ಈ ವಸ್ತುಗಳ ಸಂಗ್ರಹವಾದ ಕೂಡಲೇ ಪಾಕದ ಬಗ್ಗೆ ಮತ್ತು ವಿಗ್ರಹ ನಿರ್ಮಾಣದ ಹತ್ತು ಹಲವು ವಿಧಾನಗಳ ಮೂಲಕ ಮುಂದುವರಿಯಬೇಕು.

ಪೀಠದ ತಯಾರಿ :

ಕೆಂಪುಕಲ್ಲಿನ ಪೀಠವನ್ನು ಉಪಯೋಗಿಸುವುದಾಗಿದೆ. ಯೋಗ್ಯವಾದ ಸ್ಥಳದಿಂದ ನಿಶ್ಚಿತ ಅಳತೆಯ ಕಲ್ಲನ್ನು ಕಡಿದು ತೆಗೆಯಬೇಕು. ಕಲ್ಲನ್ನು ಬಹಳ ದೈವೀಕ ಭಾವನೆಯಿಂದ ಕ್ಷೇತ್ರಾಂಗಣಕ್ಕೆ ತಂದು ಕೆಲಸವನ್ನು ಪ್ರಾರಂಭಿಸುವುದು. ಎಲ್ಲಾ ಬದಿಗಳಿಂದಲೂ ಕೆತ್ತಿ ನಯಗೊಳಿಸಿದ ನಂತರ, ಶೂಲದ ಗಾತ್ರಕ್ಕನುಸರಿಸಿದ ರಂಧ್ರವನ್ನು ಪೀಠದ ಕಲ್ಲಿನ ಮಧ್ಯಭಾಗದಲ್ಲಿ ಕೊರೆಯಬೇಕು. ಈಗ ಪೀಠವು ಪ್ರತಿಷ್ಠೆಗೆ ಯೋಗ್ಯವಾಗುವುದು. ಈ ಕಲ್ಲನ್ನು ಶುಭ ಮುಹೂರ್ತದಲ್ಲಿ ಗರ್ಭಗೃಹದ ಒಳಗೆ, ತಂತ್ರಿಗಳು ನಿಶ್ಚಯಿಸಿದ ಜಾಗದಲ್ಲಿ ತಾಂತ್ರಿಕ ವಿಧಾನಗಳ ಪ್ರಕಾರ ಪ್ರತಿಷ್ಠೆ ಮಾಡುವುದು. ಅಡಿಭಾಗಕ್ಕೆ ಶಂಖದ ಹುಡಿಯನ್ನು ಹರಡಿ, ಗಂಗಾಜಲದ ಪ್ರೋಕ್ಷಣೆ ಮಾಡಿ ಈ ಕಲ್ಲನ್ನು ಇಡುವುದು. ಪೀಠದ ಕಲ್ಲಿಗೆ ಯಾವುದೇ ರೀತಿಯ ಚಲನೆಯುoಟಾಗದಂತೆ ಶಂಖದ ಹುಡಿಯನ್ನು ಹರಡುತ್ತಾರೆ. ಇದುವೇ ‘ಪೀಠ ಪ್ರತಿಷ್ಠೆ’.

ಏನಿದು ಶೂಲ?:

ಕಡುಶರ್ಕರ ಪಾಕದ ವಿಹ್ರಹ ನಿರ್ಮಾಣದಲ್ಲಿ ಶರೀರ ಶಾಸ್ತ್ರದ ತತ್ವಗಳನ್ನು ಪಾಲಿಸಲಾಗುವುದೆಂದು ಮೊದಲೇ ಹೇಳಿಯಾಗಿದೆಯಷ್ಟೇ.? ಮನುಷ್ಯ ಶರೀರದಲ್ಲಿರುವ ಅಸ್ತಿಪಂಜರವನ್ನು ಗಡುಸಾದ ದ್ರವ್ಯದಿಂದ ಮಾಡಬೇಕಾಗಿದೆ. ಇದರಲ್ಲಿ ಸಾಂಕೇತಿಕವಾಗಿ 206 ಎಲುಬುಗಳು ಗುರುತಿಸಿಕೊಳ್ಳಬೇಕು. ತಲೆಬುರುಡೆ, ಕೈಕಾಲುಗಳ ಎಲುಬುಗಳು, ಹೊಟ್ಟೆಯ ಭಾಗದ ಎಲುಬುಗಳು, ತೊಡೆ ಎಲುಬು, ಕಾಲು ಎಲುಬು, ಬೆರಳುಗಳೇ ಮೊದಲಾದ ಭಾಗದಲ್ಲಿ ಎಲುಬುಗಳನ್ನು ಮಾಡಬೇಕಾಗಿದೆ. ಈ ಮರ ಕೂಡಾ ಔಷಧ ಗುಣವುಳ್ಳ ಕದಿರ ಮರ(ಕಾಟಿ ಮರ)ದಿಂದ ತಯಾರಿಸಲಾಗುತ್ತದೆ.

ಕದಿರ ಮರದ ಆಯ್ಕೆ:

ಶ್ರೀ ದೇವರ ವಿಗ್ರಹ ನಿರ್ಮಾಣಕ್ಕೆ ದೊಡ್ಡದಾದ, ಆರೋಗ್ಯವಂತ, ಹಸಿರಾಗಿರುವ ಕದಿರ ಮರವೊಂದು ಬೇಕಾಗಿ ಬರುವುದೆಂದು ವಿಗ್ರಹ ಶಿಲ್ಪಿಗಳು ಹೇಳಿದರು. ಈ ಮರದ ಅನ್ವೇಷಣೆಯಲ್ಲಿ ಕಾರ್ಯಕರ್ತರು ಜಾಗೃತರಾದರು. ಹತ್ತು ಹಲವು ಮರಗಳನ್ನು ನೋಡಿದೆವು. ಒಂದಲ್ಲ ಒಂದು ಕಾರಣಕ್ಕೆ ಮರವನ್ನು ಬಿಡಬೇಕಾಯ್ತು. ಮರವೊಂದಕ್ಕೆ 50 ಸಾವಿರ ರೂ ಕೊಡಬೇಕೆಂದವರೂ ಇದ್ದಾರೆ. ಮರ ಸಿಗದೇ ಇದ್ದು, ಚಿಂತಾಕ್ರಾಂತರಾಗಿ ಕೆಲವು ದಿನಗಳನ್ನು ಸಮಿತಿಯ ಸದಸ್ಯರು ಕಳೆದರು.

ಒಂದು ದಿನ ಪೈವಳಿಕೆ ಭಾಗದಿಂದ ಶ್ರೀ ಮುಂಡ ಎಂಬವರು ದೇವಸ್ಥಾನಕ್ಕೆ ಬಂದಿದ್ದರು. ಬಂದವರೇ, ಕದಿರ ಮರದ ಅಗತ್ಯವನ್ನು ವಿವರವಾಗಿ ಕೇಳಿ ತಿಳಿದುಕೊಂಡರು. ಕೂಡಲೇ ಒಂದು ಮಾತನ್ನು ತಮ್ಮ ತುಳು ಭಾಷೆಯಲ್ಲಿಯೇ ಈ ರೀತಿ ಹೇಳಿದರು -“ಎಂಕ್ಲೆನ ಬಿತ್ತಲ್ ಡ್ ಮಲ್ಲ ಒಂಜಿ ಕಾಚಿ ಮರ ಉಂಡು. ಸುಮಾರ್ ಜನ ಬತ್ತೆರ್. ಕ್ರಯ ಸರಿಯಾತಿಜಿ, ಅಂಚ ಏರೆಗ್ಲಾ ಕೊರ್ತಿಜಿ. ಇತ್ತೆ ದೇವೆರ್ನ ಅಗತ್ಯ ಅತ್ತೋ…ಅಂಚಣೆ ದಾನ್ನೋ ಅವು ಪಿದಾಯಿ ಪೋವಂದೆ…ನಿಕ್ಲು ಬಲ್ಮೆಡ್ ತೂಲೆ… ಆಪುಂಡ ಮರ ಕೊರೋಲಿ” ಎಂದರು. ಕ್ರಯ ಕೇಳಿದಾಗ ಏನೂ ಹೇಳಲಿಲ್ಲ. “ನಿಕ್ಲೆಗ್ ಪಿಂದ್ ದ್ ಕೊರ್ನವ್ ಯಾವು” ಎಂದರು. ಬಹಳ ಉತ್ಸುಕರಾಗಿಯೇ ಪೈವಳಿಕೆಗೆ ಮರ ನೋಡಲು ಹೋದೆವು. ಎಲ್ಲಾ ಲಕ್ಷಣ ಹೊತ್ತ ಆ ಮರವು ನಮ್ಮನ್ನು ನೋಡಿ ಕೈ ಬೀಸಿ ಕರೆಯುವಂತೆ ಭಾಸವಾಯಿತು. ಪ್ರಶ್ನೆಯಲ್ಲಿ ಕೇಳಿದಾಕ್ಷಣ ದೈವಾನುಗ್ರಹ ಪೂರ್ತಿ ಇರುವ ಮರ ಅದು….ಅದನ್ನೇ ಕಡಿಯಿರಿ ಎಂದರು. ಮುಂದೊಂದು ದಿನ ವಿಧಿವತ್ತಾಗಿ ಮರವನ್ನು ಕಡಿದು, ಘೋಷಯಾತ್ರೆಯೊಂದಿಗೆ ಶ್ರೀ ಸನ್ನಿಧಿಗೆ ಕ್ಷೇತ್ರ ತಂತ್ರಿ ಸಮೇತ ಮರವನ್ನು ತರಲಾಯ್ತು. ಮರವು ನೆಲಕ್ಕಪ್ಪಳಿಸಿದ ರೀತಿಯಲ್ಲಿ ಲೆಕ್ಕಾಚಾರವಿರುವುದರಿಂದ ಅದೆಲ್ಲವನ್ನೂ ಬರೆದಿಟ್ಟುಕೊಂಡೆವು. ಪೂರ್ಣಾನುಗ್ರಹದ ದ್ಯೋತಕವಾಗಿ ಎಲ್ಲವೂ ಸಮಾಪ್ತಿಯಾಯಿತು.

ಈ ಘಟನೆಯಿಂದ ಅಷ್ಟಮಂಗಲದಲ್ಲಿ ಹೇಳಿದ ಒಂದು ಮಾತಿನ ನೆನೆಪಾಯ್ತು.. ” ಈ ವಿಗ್ರಹ ನಿರ್ಮಾಣ ಕಾರ್ಯದಲ್ಲಿ ಚಾಂಡಾಲನಿಂದ ಹಿಡಿದು ಮಹಾ ಬ್ರಾಹ್ಮಣರ ವರೇಗೆ ಇರುವವರೆಲ್ಲರ ಸೇವೆಯು ಅಗತ್ಯವಾಗಿದೆ.” ಕಾಡಿನಲ್ಲಿರುವ ಸಸ್ಯ ವರ್ಗ ವಸ್ತುಗಳನ್ನು ಮುಂದೆ ಪಾಕದ ಸಮಯದಲ್ಲಿ ಸಂಗ್ರಹಿಸುವಾಗಲೂ ಈ ಮಾತಿಗೆ ಪುಷ್ಠೀಕರಣ  ದೊರೆಯುತ್ತದೆ. ಕ್ಷೇತ್ರವನ್ನು ಪ್ರವೇಶಿಸಿದ ಕಾಚಿ ಮರಕ್ಕೆ ವಿಧಿವತ್ತಾಗಿ ಪೂಜಾದಿ ಕರ್ಮಗಳನ್ನು ಮಾಡಿಸಿ, ತಂತ್ರಿವರ್ಯರು ಆಗಮ ಸಿದ್ಧಾಂತಕ್ಕನುಸರಿಸಿ ವಿಗ್ರಹ ನಿರ್ಮಾಣದ ಕಮ್ಮಟ ಶಾಲೆಗೆ ಸಾಗಿಸಲಾಯ್ತು. ವಿಗ್ರಹ ಶಿಲ್ಪಿಗಳಾದ ಶ್ರೀ ಕೈಲಾಸ ಮತ್ತು ಸಹಾಯಕರು ಒಂದು ವಾರಗಳಷ್ಟು ಕಾಲ ಬಡಗಿ ಕೆಲಸವನ್ನು ಮಾಡಿ ‘ಶೂಲ’ವನ್ನು ತಯಾರಿಸಿದರು. ಗರ್ಭಗುಡಿಯಲ್ಲಿ 7 ವಿಗ್ರಹಗಳಿವೆ. ಈ ಎಲ್ಲಾ ವಿಗ್ರಹಗಳು ಕಡುಶರ್ಕರ ಪಾಕದಿಂದಲೇ ನಿರ್ಮಾಣಗೊಂಡಿದೆ. ಎಲ್ಲಾ ಏಳು ವಿಗ್ರಹಗಳಿಗೂ ಶೂಲ ತಯಾರಿಸಲಾಗಿದೆ. ಶ್ರೀ ಅನಂತಪದ್ಮನಾಭ, ಶ್ರೀದೇವಿ, ಭೂದೇವಿ, ಗರುಡ, ಹನುಮ, ನಾಗಕನ್ನಿಕೆಯರು (2) ಎಲ್ಲವೂ ಆರಂಭವಾದುದು ಶೂಲದ ತಯಾರಿಕೆಯಿಂದಲೇ.

ಗರ್ಭಗುಡಿಯೊಳಗೆ ತಂತ್ರಿಗಳು  ನಿರ್ದೇಶಿಸಿದ ಸ್ಥಳದಲ್ಲಿ ಪ್ರತಿಷ್ಠೆ ಮಾಡಿರುವ ಪೀಠದ ಮಧ್ಯಭಾಗದಲ್ಲಿ ಕೊರೆದ ತೂತಿನೊಳಗೆ ಈ ಶೂಲವನ್ನು ಗಟ್ಟಿಯಾಗಿ ಕೂರಿಸಬೇಕು. ತೂತನ್ನು ಕಡುಶರ್ಕರಪಾಕದ ಕೆಲವು ದ್ರವ್ಯಗಳನ್ನೊಳಗೊಂಡ (ಅಷ್ಟ ಬಂದ) ಮಿಶ್ರಣದಿಂದ ಶೂಲವನ್ನು ಗಟ್ಟಿಯಾಗಿ ನಿಲ್ಲಿಸಬೇಕು. ಬಹಳ ಅಂಟು ಇರುವ ಈ ಪದಾರ್ಥದಲ್ಲಿ ಶೂಲಗಳು ಗಟ್ಟಿಯಾಗಿ ನೆಲೆಗೊಂಡುವು. ಈ ಕಾರ್ಯಕ್ರಮಕ್ಕೆ ‘ಶೂಲಪ್ರತಿಷ್ಠೆ’ ಎಂದು ಹೆಸರು. ಕಡುಶರ್ಕರ ಪಾಕದ ವಿಗ್ರಹ ನಿರ್ಮಾಣದಲ್ಲಿ ಶೂಲಪ್ರತಿಷ್ಠೆಗೆ ವಿಶೇಷವಾದ ಸ್ಥಾನವಿದೆ. ಯಾಕೆಂದರೆ, ಮುಂದೆ ಬ್ರಹ್ಮಕಲಶ ಸಮಯದಲ್ಲಿ ವಿಗ್ರಹಗಳ ಪುನರ್ ಪ್ರತಿಷ್ಠೆ ಎಂಬ ಕಾರ್ಯಕ್ರಮ ಇಲ್ಲ. ಆ ಪ್ರತಿಷ್ಠೆಯೇ ಶೂಲಪ್ರತಿಷ್ಠೆ ! ಶುಭ ಮುಹೂರ್ತದಲ್ಲಿ ನಡೆದ ಈ ಅಪೂರ್ವ ನಿಮಿಷಕ್ಕೆ ಸಾಕ್ಷಿಗಳಾದ ಭಕ್ತ ಜನರು ಅದೆಷ್ಟೋ ! ಹೀಗೆ 2001 ನೇ ಇಸವಿಯಲ್ಲಿ ದೇವರ ಪ್ರತಿಷ್ಠಾ ಕಾರ್ಯಕ್ರಮಗಳು ನಡೆದಿವೆ.

ನರವ್ಯೂಹ:

ಮನುಷ್ಯ ಶರೀರದಲ್ಲಿರುವ ಎಲುಬುಗಳಂತೆ ನರಗಳೂ ಇವೆ. ಈ ಭಾಗವನ್ನೂ ವಿಗ್ರಹದಲ್ಲಿ ಇಡಬೇಕು. ಇದಕ್ಕಾಗಿ ಉಪಯೋಗಿಸಿದ ದ್ರವ್ಯ, ‘ಹಸಿ ತೆಂಗಿನಕಾಯಿ ಸಿಪ್ಪೆಯ ನಾರು.’ ಆಗ ತಾನೇ ಕೊಯ್ದ ಹಸಿ ತೆಂಗಿನ ಕಾಯಿಯ ಸಿಪ್ಪೆಯನ್ನು ತೆಗೆದು, ಸಿಪ್ಪೆಯೊಡೆಯುವ ಕಾರ್ಯಕ್ರಮದಿಂದ ನಾರುಗಳಾಗಿ ಎಳೆಯಬೇಕು. ಸುಮಾರು 2000 ಮಂದಿ ಹಗಲಿರುಳು ಶ್ರಮದಾನದ ಮೂಲಕ ಈ ಕೆಲಸವನ್ನು ಮಾಡಿ ನಾರು ತಯಾರಿ ಕೆಲಸದಲ್ಲಿ ಪಾಲ್ಗೊಂಡು ಕೃತಾರ್ಥರಾಗಿದ್ದಾರೆ. ದಿನಕ್ಕೊಂದರಂತೆ ತೆಂಗಿನ ಕಾಯಿಯನ್ನು ಮಾತ್ರ ಒಡೆಯಲು ಸಾಧ್ಯವಾಯ್ತು. ನಾರುಗಳನ್ನು ತೆಗೆಯುವ ಕಾರ್ಯಕ್ರಮ ಕೂಡ ಬಹಳ ಜಾಗರೂಕತೆಯಿಂದ ಮಾಡಬೇಕಾಯ್ತು. ಸಿಪ್ಪೆಗಳನ್ನು ಒಡೆದಾಗ ನಾರುಗಳು ಸಿಗುವುದು. ಒಂದೊಂದು ನಾರನ್ನು ಬೆರಳುಗಳ ಎಡೆಯಿಂದ ಎಳೆದು, ಅದರಲ್ಲಿ ಯಾವುದೇ ಪದಾರ್ಥಗಳು ಇಲ್ಲದಂತೆ ಜಾಗ್ರತೆ ವಹಿಸಿ, ಈ ನಾರಿನಿಂದಲೇ ಹಗ್ಗವನ್ನಾಗಿ ಮಾಡಲಾಯ್ತು. ಕೈಯಿಂದಲೇ ಹುರಿಹಗ್ಗವನ್ನು ಮಾಡಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಚೆರುವತ್ತೂರಿನಿಂದ ಇಬ್ಬರು ಸ್ತ್ರೀಯರು ಬಂದು ಸುಮಾರು 200 ಮೀಟರಿನಷ್ಟು ಉದ್ದದ ಹುರಿಹಗ್ಗವನ್ನು ತಯಾರಿಸಿಕೊಟ್ಟರು. ಈ ನಾರನ್ನು ವಿಗ್ರಹದ ನಾಭಿಯಿಂದ ಪ್ರಾರಂಭಿಸಿ, ದೇಹದ ಎಲ್ಲಾ ಭಾಗಗಳಿಗೂ ಸುತ್ತಿ ಕೊನೆಯಲ್ಲಿ ಮಣಿಶಿರದಲ್ಲಿ ಪರಿಸಮಾಪ್ತಿಯಾಯ್ತು. ರಕ್ತ ಸಂಚಾರದ ಕಾರ್ಯವೆಸಗುವ ಈ ನರಗಳ ಇರುವಿಕೆಯ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.

ಲೇಪನದ ಆರಂಭ:

ನರಗಳನ್ನು ಒಳಗೊಂಡ ಶೂಲಕ್ಕೆ ಮಾಂಸದ ಸಂಕಲ್ಪದಲ್ಲಿ ಹಲವು ‘ಕಡುಶರ್ಕರಪಾಕ’ದ ಮೂಲದ್ರವ್ಯಗಳ ಲೇಪನವಾಗಬೇಕಿದೆ. ಎಲುಬಿಗೆ ತಾಗಿಕೊಂಡಿರುವ ಲೇಪನವೇ ಮಜ್ಜೆ. ಮಜ್ಜೆಯನ್ನು ಕೆಂಪುಕಲ್ಲಿನ ಹುಡಿ, ಗೋಧಿ, ಯವ, ಜಾಂಚಲ್ಯ, ಮಯಣ, ಎಳ್ಳೆಣ್ಣೆ, ಬೆಲ್ಲ ಮೊದಲಾದ ದ್ರವ್ಯಗಳಿಂದ ಪಾಕವನ್ನಾಗಿ ಮಾಡಿ, ಬಿಸಿಯಾಗಿಯೇ ಲೇಪನ ಮಾಡಬೇಕು. ಬಿಸಿಯಾಗಿಯೇ ಲೇಪನ ಮಾಡಬೇಕಾದುದರಿಂದ ಶಿಲ್ಪಿಗಳು ಬಹಳ ಕಷ್ಟಪಟ್ಟು ಈ ಕಾರ್ಯಕ್ರಮವನ್ನು ಮಾಡಿರುತ್ತಾರೆ. ಲೇಪನ ಮಾಡಿ ಕೈ ತೆಗೆಯುವಷ್ಟರಲ್ಲಿ ಪದಾರ್ಥವು ಗಟ್ಟಿಯಾಗಿ ಶಿಲೆಯಂತಾಗುವುದು. ಪದಾರ್ಥಗಳಲ್ಲಿ ಹೆಚ್ಚಿನವು ಅಂಟು ಸ್ವಭಾವದ ಮಾಯಣಗಳೇ ಆಗಿವೆ. ಹಲಸಿನ ಕಾಯಿಯ ಮಯಣವೇ 40 ಕಿಲೋದಷ್ಟು ಈ ವಿಗ್ರಹಗಳಿಗೆ ಬೇಕಾಗಿ ಬಂತು. ಎಲ್ಲಾ ಪ್ರಾಕೃತಿಕ ಮಯಣಗಳು ಇಷ್ಟು ಪ್ರಮಾಣದಲ್ಲಿ ಬೇಕಾಗಿ ಬಂದುವು ಎಂಬುದರಿಂದ ವಿಗ್ರಹ ನಿರ್ಮಾಣದ ಕಾಠಿಣ್ಯ ಅರ್ಥವಾಗಬಹುದು.ಈ ಮಯಣವನ್ನು ಊರಿನ ಪರವೂರಿನ ಭಕ್ತ ಜನರು ದೇವರಿಗೆ ಒಪ್ಪಿಸಿರುತ್ತಾರೆ ಎಂಬುದೇ ಆಶ್ಚರ್ಯದ ಸಂಗತಿ.

ಮಣ್ಣಿನ ಶುದ್ಧೀಕರಣ:

ತ್ರಿವೇಣಿ ಸಂಗಮದಿಂದ ತಂದ ಒಂದು ಲೋಡು ಮಣ್ಣು ಈ ನಿರ್ಮಾಣ ಕಾರ್ಯದಲ್ಲಿ ಪ್ರಧಾನವಾದ ದ್ರವ್ಯ. ಮಣ್ಣನ್ನು ತಂದ ಕೂಡಲೇ ಉರಿಬಿಸಿಲಿನಲ್ಲಿ ಹರಡಿ, ಐದು ದಿವಸಗಳಷ್ಟು ಕಾಲ ಒಣಗಿಸಬೇಕು. ಒಣಗಿದ ಮಣ್ಣನ್ನು ಅರೆಯುವ ಕಲ್ಲಿನಲ್ಲಿ ಹಾಕಿ ಒನಕೆಯಿಂದ ಕುಟ್ಟಿ ಪುಡಿ ಮಾಡುವುದು. ಮಣ್ಣಿನ ಹುಡಿಯನ್ನು ಶೇಖರಿಸಿಟ್ಟ ನಂತರ ಅಗತ್ಯಕ್ಕನುಸರಿಸಿ, ಪ್ರಮಾಣಕ್ಕನುಸರಿಸಿ ವಿವಿಧ ಕಷಾಯಗಳಲ್ಲಿ ಹಾಕಿ ಔಷಧಿಯ ಗುಣವನ್ನು ಕೊಡಬೇಕು. ಪ್ರಾರಂಭದಲ್ಲಿ ಮರದ ಕೆತ್ತೆಯ ಕಷಾಯದಲ್ಲಿ ಈ ಮಣ್ಣಿನ ಹುಡಿಯನ್ನು 10 ದಿನಗಳಷ್ಟು ಕಾಲ ಇಡಬೇಕು. ಇದರ ಅವಧಿ ಮುಗಿದಾಕ್ಷಣ ಮತ್ತೆ 10 ದಿನಗಳಷ್ಟು ಕಾಲ ನಾಲ್ಪಾಮರ (ಅತ್ತಿ, ಇತ್ತಿ, ಅಶ್ವತ್ಥ, ಗೋಳಿ) ಕೆತ್ತೆಯ ಕಷಾಯದಲ್ಲಿ ಹಾಕಿಡಬೇಕು. ನಾಲ್ಪಾಮರ ಕಷಾಯದಲ್ಲಿ ಹಾಕಿದ ಮಣ್ಣನ್ನು ಕೊನೆಯದಾಗಿ ‘ಎಳನೀರು’ ಕಷಾಯದಲ್ಲಿ 10 ದಿನಗಳಷ್ಟು ಕಾಲ ಹಾಕಿ ಶುದ್ಧಗೊಳಿಸಬೇಕು. ಈ ಮಣ್ಣಿನ ಹುಡಿಯನ್ನು ಪ್ರಮಾಣಕ್ಕನುಸರಿಸಿ ಒಣಗಿಸಿ ತೆಗೆದು ಕಡೆಯುವ ಕಲ್ಲಿನಲ್ಲಿ ಹಾಕಿ ಅರೆಯಬೇಕು. ಅರೆಯುವಾಗ ಗಂಗಾಜಲವನ್ನೇ ಉಪಯೋಗಿಸಬೇಕಾದುದು ಮತ್ತೊಂದು ವೈಶಿಷ್ಟ್ಯ! ಈ ಮಣ್ಣಿನೊಂದಿಗೆ ಲೇಪನದ ಸಂಖ್ಯೆಗನುಸರಿಸಿ ಮಿಶ್ರಮಾಡಿ ಅರೆಯಬೇಕು. ಎಲ್ಲಾ ವಸ್ತುಗಳನ್ನೂ ಸೇರಿಸಿ ಅರೆದು ತೆಗೆಯುವ ಪದಾರ್ಥವು ಬೆಣ್ಣೆಯಂತಿದ್ದು, ಲೇಪನಕ್ಕೆ ಯೋಗ್ಯವಾಗಿರುವವುಗಳು. ಅರೆಯುತ್ತಿರುವಾಗ ಮತ್ತು ಲೇಪನದ ಸಂದರ್ಭ ಇಡೀ ದೇವಾಲಯದ ಪರಿಸರ ಆನಂದಕರ ಪರಿಮಳದ ತಾಣವಾಗಿ ಮಾರ್ಪಟ್ಟ ಅನುಭವ ನಮಗೆ ಆಯ್ತು. ಆರೋಗ್ಯಕ್ಕೆ ಯೋಗ್ಯವಾದ ಈ ಪರಿಮಳವನ್ನು ಆಘ್ರಾಣಿಸಿದವರು ಆ ಅನುಭೂತಿಯನ್ನು ಪಡೆದರು. ಲೇಪನಗಳು ಮುಂದುವರಿದುವು. ಬೇರೆ ಬೇರೆ ದ್ರವ್ಯಗಳನ್ನೊಳಗೊಂಡ ಒಂದೊಂದು ಲೇಪನವಾಗುತ್ತಿರುವಾಗಲೂ ವ್ಯತ್ಯಸ್ತ ಪರಿಮಳವನ್ನು ಆಘ್ರಾಣಿಸಲು ನಮಗೆ ಸಾಧ್ಯವಾಯ್ತು.ಈ ಎಲ್ಲಾ ಲೇಪನಗಳನ್ನೂ ಒಟ್ಟಾಗಿ ಮಾಡುವಂತಿಲ್ಲ. ಒಂದು ಲೇಪನ ಆದ ಕೂಡಲೇ ಅದು ನೈಸರ್ಗಿಕ ವಿಧಾನಗಳ ಮೂಲಕವೇ ದೇವರ ಶರೀರದಲ್ಲಿ ಒಣಗಬೇಕು. ಅಂದರೆ, ಬಿಸಿ ಮಾಡಿಯೋ, ಗಾಳಿ ಬೀಸಿಯೋ ಅದನ್ನು ಬೇಗ ಒಣಗಿಸುವಂತಿಲ್ಲ. ಹಾಗೆಯೇ ಒಂದು ಲೇಪನ ಒಣಗಲು ಸುಮಾರು ಒಂದು ತಿಂಗಳಷ್ಟು ಕಾಲ ತೆಗೆದುಕೊಂಡಿತ್ತು. ಅಲ್ಲದೆ ಮಳೆಗಾಳದಲ್ಲಿಯೋ, ಬಿಸಿಲು ಕಡಿಮೆ ಇರುವ ಸಮಯದಲ್ಲೋ ಲೇಪನ ಮಾಡುವಹಾಗಿಲ್ಲ. ಗಾಳಿಯಲ್ಲಿ ನೀರಾವಿ ಹೆಚ್ಚಿರುವ ಕಾರಣದಿಂದಾಗಿ ಲೇಪನ ಅಸಾಧ್ಯವಾಗುವುದು. ಹತ್ತು ಲೇಪನಗಳು ಕಳೆದ ಕೂಡಲೇ ಶರೀರದ ಭಾಗಗಳನ್ನು ಗುರುತಿಸಲು ತೊಡಗಿದರು. ಅಂದರೆ, ಎದೆಗೂಡು, ಉಗುರುಗಳು, ಆಭರಣಗಳು ಮೊದಲಾದುವುಗಳನ್ನು ಶರೀರದ ಭಾಗಗಳನ್ನು ಉಬ್ಬು ಕಾಣುವಂತೆ ಜಾಗ್ರತೆ ವಹಿಸಿದರು. ವಿಗ್ರಹದ ಆಕಾರ, ಅಲಂಕಾರಗಳನ್ನು ಗಮನಿಸಿಯೇ ಲೇಪನ ಕಾರ್ಯ ಮುಂದುವರಿಯಿತು. ಅದರೊಂದಿಗೆ 5 ಹೆಡೆಯ ಸರ್ಪವನ್ನೂ ಇದೇ ಪಾಕದಿಂದ ಮಾಡಬೇಕಾಯ್ತು. ಸರ್ಪಕ್ಕೆ ಕೊನೆಯದಾಗಿ ಬೆಳ್ಳಿಯ ನಾಲಗೆಯನ್ನು ಇಟ್ಟಾಗ, ಕೆಲಸವೂ ಪೂರ್ತಿಗೊಳ್ಳುವುದು. ಶ್ರೀ ದೇವರಲ್ಲಿ ರೋಗ ನಿವಾರಕವಾದ ಔಷಧಿಗಳು ಧಾರಾಳ ಇವೆ. ಪ್ರತಿಯೊಬ್ಬ ಭಕ್ತನೂ ಆರೋಗ್ಯವಂತನಾಗಿರಲು ಶ್ರೀ ದೇವರ ಸನ್ನಿಧಿಗೆ ಬಂದು ಪ್ರಾರ್ಥಿಸಬೇಕು. ಶಂಖ, ಚಕ್ರ, ಅಭಯ, ವರದನಾಗಿ, ಸರ್ಪದ ಮೇಲೆ ಕುಳಿತಿರುವ ಸಾಕ್ಷಾತ್ ಶ್ರೀಮನ್ನಾರಾಯಣನು ಶ್ರೀ ಅನಂಥಪದ್ಮನಾಭನಾಗಿ ಸಕಲ ಭಕ್ತ ಜನರಿಗೂ ಆರೋಗ್ಯ ಭಾಗ್ಯಗಳನ್ನು ಕೊಡಲು ಸಜ್ಜಾಗುತ್ತಿದ್ದಾನೆ.

ಕೊನೆಯ ಲೇಪನ:

“ಕಡುಶರ್ಕರಪಾಕ” ಎಂಬ ವಿಗ್ರಹ ನಿರ್ಮಾಣ ವಿಧಾನವು ಮುನಿಶ್ರೇಷ್ಠರ ಕಾಲದಲ್ಲಿ ಮೂರ್ತರೂಪವನ್ನು ತಾಳಿದ್ದು ಎಂದು ಮೊದಲೇ ಹೇಳಲಾಗಿದೆ. ಪ್ರಕೃತಿಯಲ್ಲಿ ಲಭಿಸುವ ಎಲ್ಲಾ ನೈಸರ್ಗಿಕ ವಸ್ತುಗಳೂ ಔಷಧಿಗಳೇ. ಈ ವಸ್ತುಗಳೆಲ್ಲವನ್ನೂ ವಿಗ್ರಹದಲ್ಲಿಟ್ಟು ದೇವಾರಾಧನೆ ಮಾಡುವ ಸಂಪ್ರದಾಯವು ಆ ಕಾಲದಿಂದಲೇ ಪ್ರಾರಂಭವಾಗಿರುವುದು. ಭಕ್ತರು ಆರೋಗ್ಯವನ್ನು ಮಾತ್ರ ದೇವರಲ್ಲಿ ಕೇಳುವುದಿಲ್ಲ. ಅದರೊಂದಿಗೆ ಐಶ್ವರ್ಯವನ್ನೂ ಕೇಳುತ್ತಾರೆ. ಈ ಕೇಳಿಕೆಗಳನ್ನು ಅನುಗ್ರಹಿಸಲು ದೇವರಲ್ಲಿಯೇ ಐಶ್ವರ್ಯ ಕೂಡಿರಬೇಕು. ಆ ತತ್ವಕ್ಕನುಸರಿಸಿ ಕೊನೆಯ ಲೇಪನದಲ್ಲಿ ಚಿನ್ನ ಮತ್ತು ಬೆಳ್ಳಿ ಗಳನ್ನು (24ಕ್ಯಾರೆಟ್) ಪಲ್ಲೆಗಳಾಗಿ ಮಾಡಿ ಗಂಧ ತೇಯುವಂತೆ ತೇದು ಚಿನ್ನ, ಬೆಳ್ಳಿ ಮಿಶ್ರಣವನ್ನು ದ್ರವರೂಪದಲ್ಲಿ ತಯಾರಿಸುತ್ತಾರೆ. ಇದರೊಂದಿಗೆ ಗೊರೋಚನ, ಕಸ್ತೂರಿ, ಶ್ರೀಗಂಧ, ರಕ್ತಚಂದನ, ಆನೆಕುಟ್ಟಿದ ಮಣ್ಣು, ನೇಗಿಲ ಮಣ್ಣು, ಬಸವ ಕುಟ್ಟಿದ ಮಣ್ಣು, ಹುತ್ತದ ಮಣ್ಣು, ಏಡಿಮಣ್ಣು ಮೊದಲಾದ ವಿಶಿಷ್ಟ ರೀತಿಯ ಮಣ್ಣುಗಳ ಮಿಶ್ರಣದಿಂದ ಲೇಪನ ಮಾಡಬೇಕಾಗಿದೆ.

ಕಸ್ತೂರಿ ಸಿಕ್ಕಿದ ಬಗೆ:

ವಿಗ್ರಹ ಶಿಲ್ಪಿಗಳಿಗೆ ಎಲ್ಲಾ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಲು ಸಮಿತಿ ಸದಸ್ಯರು ಜಾಗ್ರತೆ ವಹಿಸಿದ್ದರು. ಹೆಚ್ಚೇಕೆ, ರಾಮೇಶ್ವರದಿಂದ 75 ಕಿಲೋ ಮುತ್ತುಚಿಪ್ಪಿಯನ್ನೂ, ಉತ್ತರ ಪ್ರದೇಶದಿಂದ ಗಂಗಾಜಲವನ್ನೂ, ಮೃತ್ತಿಕೆಯನ್ನೂ ಸನ್ನಿಧಾನಕ್ಕೆ ತರಲಾಯ್ತು. ಗೊರೋಚನವನ್ನು ಓರ್ವ ಕ್ರಿಶ್ಚನ್ ಭಕ್ತನು ತಂದೊಪ್ಪಿಸಿರುವರು. ಬಹಳ ಬೆಲೆಬಾಳುವ ಈ ದ್ರವ್ಯಗಳನ್ನು ಯಥಾ ಸಮಯ ತಲುಪಿಸಲಿರುವ ದೇವಪ್ರೇರಣೆಯನ್ನು ಮನಸಾ ನೆನೆದು ಧನ್ಯರಾಗುತ್ತೇವೆ. ಆದರೆ ಕಸ್ತೂರಿ ಮಾತ್ರ ಕಷ್ಟವೆನಿಸಿತು. ಔಷಧಿ ಅಂಗಡಿಗಳಲ್ಲಿ ವಿಚಾರಿಸಿದಾಗಲೂ ಶುದ್ಧ ಕಸ್ತೂರಿ ಸಿಗಲಾರದೆಂದೂ, ಕಲಬೆರಕೆಯಿರುವ ಕಸ್ತೂರಿ ಬೇಕಾದರೆ ಕೊಡಬಹುದೆಂದೂ ಎಲ್ಲಾ ಮಾಲೀಕರು ಹೇಳಿದರು. ಇದನ್ನು ಕೇಳಿ ಕಂಗೆಟ್ಟೆವು. ಕಸ್ತೂರಿಯ ಅನ್ವೇಷಣೆಯಲ್ಲಿ ತಿಂಗಳುಗಳನ್ನು ಕಳೆದಿದ್ದೆವು. ಆದರೆ ಆ ಒಂದು ಶುಭಮುಹೂರ್ತ ಅನಿರೀಕ್ಷಿತವಾಗಿ ಬಂದೇ ಬಿಟ್ಟಿತು. ಸಮಿತಿಯ ಸದಸ್ಯರೆಲ್ಲರೂ ದೇವಾಲಯದಲ್ಲಿ ಸೇರಿದ್ದರು. ರಾತ್ರಿಕಾಲದಲ್ಲಿ ಸಭೆಯಲ್ಲಿ ತೀರ್ಮಾನ ಕೈಗೊಂಡು ಕಾರ್ಯಪ್ರವೃತ್ತರಾಗುವುದು ನಮ್ಮ ಶೈಲಿಯಾಗಿತ್ತು. ಆ ಒಂದು ದಿನವೂ ನಾವು ಸೇರಿದ್ದೆವು. ಫಕ್ಕನೆ ಒಂದು ಕಾರು ಬಂದು ದೇವಾಲಯದ ಗೇಟಿನ ಸಮೀಪ ನಿಂತಿತು. ಗಂಟೆ ರಾತ್ರಿ 8 ! ಬಂದವರು ಬೇರಾರೂ ಆಗಿರಲಿಲ್ಲ. ನೇಪಾಳದ ಶ್ರೀ ಪಶುಪತಿ ದೇವಸ್ಥಾನದ ಪ್ರಧಾನ ಅರ್ಚಕರು! ದೇವರನ್ನೂ, ದೇವಾಲಯವನ್ನೂ ನೋಡಿದವರು ದೇವಳದ ಆಫೀಸಿಗೆ ಬಂದು ನಮ್ಮ ಮುಂದಿನ ಕಾರ್ಯಕ್ರಮವನ್ನು ಕೇಳಿದರು. ಕಸ್ತೂರಿಯ ಬಗ್ಗೆ ನಮಗಿರುವ ಗೊಂದಲವನ್ನು ಮಾತಿನ ಮಧ್ಯೆ ಹೇಳಿದೆವು. ಇದನ್ನು ಕೇಳಿದಾಕ್ಷಣ ಅರ್ಚಕರ ಕಿವಿಗಳು ನೆಟ್ಟಗಾದವು. “ನೇಪಾಳದಲ್ಲಿ ಶುದ್ಧವಾದ ಕಸ್ತೂರಿ ಯಥೇಚ್ಛ ಲಭಿಸುತ್ತದೆ. ಆದರೆ ಕ್ರಯಮಾತ್ರ 1 ಗ್ರಾಂಗೆ ಹದಿನೈದು ಸಾವಿರ ರೂಪಾಯಿ!” ಎಂದರು. “ಆದರೆ ಈ ವಸ್ತುವನ್ನು ಹೊರದೇಶಗಳಿಗೆ ಕೊಂಡುಹೊಗುವುದನ್ನು ನಿಷೇಧಿಸಲಾಗಿದೆ” ಎಂದರು. ನಮ್ಮ ಅಸಹಾಯಕತೆಯನ್ನು ತಿಳಿದ ಅರ್ಚಕರು ಸಮಾಧಾನಕರ ಉತ್ತರವನ್ನಿತ್ತರು. “ತಾನೇ ಮುತುವರ್ಜಿವಹಿಸಿ ನಿಮಗೆ ಕಸ್ತೂರಿ ಕಳುಹಿಸಿ ಕೊಡುತ್ತೇನೆ – ಅದಕ್ಕಾಗಿ ಯಾವುದೇ ಮೌಲ್ಯವನ್ನು ಕೊಡಬೇಕಾಗಿಲ್ಲ ” ಎಂದರು. ಈ ಮಾತನ್ನು ಕೇಳಿದ ಸಮಿತಿಯ ಸದಸ್ಯರೆಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟರು . ಒಂದು ತಿಂಗಳೊಳಗೆ ವಿಗ್ರಹ ನಿರ್ಮಾಣಕ್ಕೆ ಅಗತ್ಯವಿರುವ ಕಸ್ತೂರಿಯೂ ಕೈ ಸೇರಿತು.

ಎಡನಾಳಿಯಲ್ಲಿ:

ಗರ್ಭಗುಡಿಯ ಹೊರಗೋಡೆಯಲ್ಲಿ ಸುಂದರವಾದ ಮೂರು ವಿಗ್ರಹಗಳನ್ನು ತಯಾರಿಸಲಾಗಿದೆ. ಸಂಕರ್ಷಣ, ಅನಿರುದ್ಧ, ಪ್ರದ್ಯುಮ್ನರ ವಿಗ್ರಹಗಳು. ತೆಂಕುಗೋಡೆಯಲ್ಲಿ ಸಂಕರ್ಷಣ, ಪಡುಗೋಡೆಯಲ್ಲಿ ಅನಿರುದ್ಧ ಮತ್ತು ಬಡಗುಗೋಡೆಯಲ್ಲಿ ಪ್ರದ್ಯುಮ್ನ. ಮೂಡುಭಾಗದಲ್ಲಿ ಸಾಕ್ಷಾತ್ ವಾಸುದೇವ ! ಮಹಾವಿಷ್ಣುವಿನ ವಿವಿಧ ಭಾವರೂಪಗಳಿವು. ಈ ವಿಗ್ರಹಗಳನ್ನೂ ಇದೆ ರೀತಿಯ ಪಾಕದಿಂದ ತಯಾರಿಸಾಗಿದೆ. ಆದರೆ ಕಡುಶರ್ಕರಪಾಕದ ಎಲ್ಲಾ ಮಿಶ್ರಣಗಳು ಇವುಗಳಲ್ಲಿಲ್ಲ. ಜಯವಿಜಯರು ದ್ವಾರಪಾಲಕರಾಗಿ ಗರ್ಭಗೃಹದ ಮುಂಭಾಗದಲ್ಲಿದ್ದಾರೆ.

ಭಿತ್ತಿ ಚಿತ್ರಗಳು:

ಶ್ರೀ ಗರ್ಭಗುಡಿಯ ಹೊರಗಿನ ಗೋಡೆಯಲ್ಲಿ ಅಜಂತ ಎಲ್ಲೋರವನ್ನು ನೆನೆಪಿಸುವ ಭಿತ್ತಿಚಿತ್ರಗಳು ಭಕ್ತರ ಮನಸ್ಸಿಗೆ ಮುದವನ್ನು ಕೊಡುತ್ತವೆ. ಉಗ್ರನರಸಿಂಹ, ನಟರಾಜ, ಅನತಪದ್ಮನಾಭ, ಮಹಾಕಾಳಿ, ಸೂರ್ಯದೇವ, ಶಿವಲಿಂಗ, ಊರಜಾತ್ರೆಯ ವೈಭವಗಳೇ ಮೊದಲಾದ ಆಕರ್ಷಕ ಚಿತ್ರಗಳು ಈ ಗೋಡೆಯ ಮೇಲೆ ಜೀವಂತವಾಗಿವೆ. ಕಣ್ಣಿಗೆ ಹಬ್ಬವನ್ನೀಯುತ್ತವೆ. ಈ ಚಿತ್ರಗಳನ್ನು ಯಾವುದೇ ಪೈಂಟ್ ನಿಂದ ಮಾಡಿದ್ದಲ್ಲ. ಸಾವಿರ ವರ್ಷಗಳ ಹಿಂದೆಯೇ ಪ್ರಕೃತಿದತ್ತವಾದ ಜೈವಿಕ ಬಣ್ಣಗಳ ಸಂಯೋಜನೆಯಿಂದ ಇದನ್ನು ಬಿಡಿಸಿರುವರು. ಪ್ರಾಕೃತಿಕವಾದ ಬಣ್ಣಗಳಿಂದ ಬಿಡಿಸಿರುವುದರಿಂದ ಇನ್ನೂ ಹೊಸತಾಗಿಯೇ ಉಳಿದಿದೆ. ಗೋಡೆಗೆ ಸೀಮೆಸುಣ್ಣದ ಲೇಪನ ಹಿಂದೆ ಮಾಡಿದ್ದರಿಂದ, ಇದು ಜರಿದು ಹೋಗಿದ್ದುವು. 2003 ರಲ್ಲಿ ಪ್ರಾಚ್ಯವಸ್ತು ವಿಭಾಗದವರು ಒಂದು ಲಕ್ಷ ರೂಪಾಯಿ ವ್ಯಾಯಮಾಡಿ ಇದನ್ನು ಸಂರಕ್ಷಿಸಿರುತ್ತಾರೆ.

ದೇವಳದ ಮಾಡು:

ಪ್ರಧಾನ ದೇವಾಲಯಕ್ಕೆ ‘ಹೃಸ್ವ ಪ್ರದಕ್ಷಿಣೆ’ ವ್ಯವಸ್ಥೆ ಪುರಾತನ ಕಾಲದಿಂದಲೇ ಇಲ್ಲ. ದೇವರಿಗೆ ಪ್ರದಕ್ಷಿಣೆ ಬರಬೇಕಾದರೆ ಕೆರೆಗೆ ಸುತ್ತ ಬರುವ ಪ್ರದಕ್ಷಿಣೆಯೇ ಆಗಿದೆ. ಮಾಡನ್ನು ಕೂಡಾ ಆ ರೀತಿಗೆ ಪರಿವರ್ತಿಸುವುದರಲ್ಲೂ ಅನೇಕ ಜನರ ಶ್ರಮ ಅಗತ್ಯವಾಗಿ ಬಂತು. ಸುತ್ತಲೂ ಮರದ ದರಿಯನ್ನು ಕುಳ್ಳಿರಿಸಲಾಯ್ತು. ಮುಖಮಂಟಪದ ವ್ಯವಸ್ಥೆ ಬದಲಾವಣೆಗೊಂಡಿತು. ಮುಖಮಂಟಪದ ಮೇಲ್ಚಾವನಿಯಲ್ಲಿ ಸುಂದರವಾದ ನವಗ್ರಹಗಳು ಮರದಿಂದ ಕೆತ್ತಿ ಇಡಲ್ಪಟ್ಟಿವೆ. ನಾಲ್ಕು ಕಗ್ಗಲ್ಲಿನ ಸ್ತಂಭಗಳಿಂದ ಈ ಮಾಡು ಆಧರಿಸಲ್ಪಟ್ಟಿದೆ.

ದೇವರ ಮೊಸಳೆ:

ಇಪ್ಪತ್ತನೇ ಶತಮಾನವು ವಿಜ್ಞಾನ ಯುಗವಾಗಿದೆ. ವಿಜ್ಞಾನದ ಸತ್ಯಶೋಧನೆ ಪ್ರಕ್ರಿಯೆಗಳು ಅದರ ಉತ್ಕೃಷ್ಟ ಸ್ಥಿತಿಗೆ ಬಂದ ಕಾಲ. ಧಾರ್ಮಿಕ ವಿಶ್ವಾಸಗಳಿಗೂ ವೈಜ್ಞಾನಿಕ ಉತ್ಪನ್ನಗಳಿಗೂ ಏನು ಸಂಬಂಧ ಎಂದೂ ಕೇಳಬಹುದು. ಮೂಢನಂಬಿಕೆಗಳೆಂದು ಅಲ್ಲಗಳೆಯುವ ಧಾರ್ಮಿಕ ಭಾವನೆಗಳಿಗೂ ಆಚಾರ ಅನುಷ್ಟಾನಗಳಿಗೂ ಕೆಲವೊಂದು ` ಪ್ರಶ್ನೆ’ ಗಳು ಮಾತ್ರ ಉಳಿದುಕೊಂಡಿವೆ. ಕೆಲವೊಂದು ದೇವಾಲಯ ಮತ್ತು ದೇವರುಗಳಿಗೆ ಮೃಗ ಪಕ್ಷಿಗಳೊಂದಿಗೆ ನಿಕಟವಾದ ಸಂಬಂಧವನ್ನು ಕಾಣುತ್ತೇವೆ. ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿಯ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ದಿನದಂದು ಪ್ರದಕ್ಷಿಣೆ ಬರುವ ಗಿಡುಗನು ಇನ್ನೂ ಒಂದು ನಿಗೂಢ ರಹಸ್ಯವಾಗಿಯೇ ಉಳಿದಿದೆ. ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯವು ವಿಶಾಲವಾದ ಒಂದು ಕೆರೆಯ ಮಧ್ಯದಲ್ಲಿದೆ ಎಂದು ಹೇಳಿಲ್ಲವೇ? ಈ ಕೆರೆಯಲ್ಲಿ ವರ್ಷದ ಎಲ್ಲ ದಿನಗಳಲ್ಲೂ ನೀರು ತುಂಬಿಕೊಂಡಿರುತ್ತದೆ. ಕೆರೆಯಲ್ಲೊಂದು ಮೊಸಳೆ! ದೇವರ ಮೊಸಳೆ! ಕೆರೆಯ ಬಡಗು ಭಾಗದಲ್ಲಿ ಇದರ ವಾಸಸ್ಥಳವಾದ ಎರಡು ಗುಹೆಗಳಿವೆ. ಕೆರೆಯಲ್ಲಿ ಸಂಚರಿಸದೇ ಇರುವಾಗ, ಮೊಸಳೆಯು ಈ ಗುಹೆಗಳಲ್ಲಿ ವಿಶ್ರಾಂತಿಯನ್ನು ಪಡೆಯುತ್ತದೆ. ಭಕ್ತಜನರಿಗೆ ಕಂಡರೂ ಕಾಣಬಹುದು. ಬಹಳ ಸುಲಭದಲ್ಲಿ ಕಂಡು ಸಂತೋಷಗೊಂಡ ಬಹಳಷ್ಟು ಯಾತ್ರಿಕರೂ ಇದ್ದಾರೆ. ಅದೇ ರೀತಿ ಬಹಳಷ್ಟು ಪ್ರಯತ್ನಪಟ್ಟು, ಹಗಲಿಡೀ ಕಾದು ನಿಂತು, ಮೊಸಳೆಯನ್ನು ಕಾಣದೆ ಹಿಂತಿರುಗಿದವರೂ ಬಹಳಷ್ಟು ಜನರು ಇದ್ದಾರೆ. ಈ ಮೊಸಳೆಗೆ ಮೊದಲು ಇನ್ನೊಂದು ಮೊಸಳೆ ಕೆರೆಯಲ್ಲಿ ಇದ್ದುದಾಗಿ ಹಿರಿಯರು ಹೇಳುತ್ತಾರೆ. ಇದು `ಬಬಿಯಾ’ ಎಂದು ಕೆರೆಯ ದಡದಲ್ಲಿ ನಿಂತು ಗಟ್ಟಿಯಾಗಿ ಕೂಗಿದರೆ, ಶರವೇಗದಲ್ಲಿ ಕರೆದವರ ಸನಿಹಕ್ಕೆ ಬರುತ್ತಿತ್ತು. ಬಂದಾಗ ಎನಾದರೂ ತಿನ್ನಲು ಸಿಗುತ್ತಿತ್ತು. ಎಷ್ಟೋ ಜನರು ಕೈಯಲ್ಲಿಯೇ ಆಹಾರವನ್ನು ಕೊಟ್ಟವರೂ ಇದ್ದಾರೆ ಎಂದು ಸುಮಾರು ಎಪ್ಪತ್ತು ವರ್ಷ ಪ್ರಾಯದ ಸ್ಥಳವಾಸಿಯೊಬ್ಬರು ಹೇಳಿದರು. ಈ ಘಟನೆ ನಡೆದಿದ್ದು 1945 ರಲ್ಲಿ. ಆಗ ಆ ಪ್ರದೇಶವು ಬ್ರಿಟಿಷ್ ಸೈನಿಕರ ತಾಣವಾಗಿತ್ತು. ಕೆರೆಯಲ್ಲಿ ಕರೆಯುವಾಗ ಬರುವ ಮೊಸಳೆಯೊಂದಿಗೆ ಎಂಬ ಸಂಗತಿಯನ್ನು ಕೇಳಿ ಅವರಿಗೆ ತುಂಬಾ ತಮಾಷೆಯಾಯಿತು.ಪರೀಕ್ಷೆ ಮಾಡಬೇಕೆಂದು ತೀರ್ಮಾನಿಸಿ ಮೊಸಳೆಯನ್ನು ‘ಬಬಿಯಾ’ ಎಂದು ಗಟ್ಟಿಯಾಗಿ ಕರೆದರು. ಅಭ್ಯಾಸದಂತೆ ಬಬಿಯಾ ಈಜುತ್ತಾ ಅವರ ಸನಿಹಕ್ಕೆ ಬಂತು. ಈ ವಿಚಿತ್ರ ಅನುಭವವನ್ನು ಸಹಿಸಲಾರದೆ ಅದರಲ್ಲೊಬ್ಬನು ತನ್ನ ಪಿಸ್ತೂಲಿನಿಂದ ಗುಂಡನ್ನು ಹಾರಿಸಿಯೇ ಬಿಟ್ಟ. ಮೊಸಳೆಯು ಸತ್ತಿತು. ಆದರೆ ಚರಿತ್ರೆಗೆ ಪೂರ್ಣತೆ ಬರಲು ಇನ್ನೊಂದು ಘಟನೆಯು ಅದರೊಂದಿಗೇ ಸಂಭವಿಸಿತು. ಪಿಸ್ತೂಲಿನಿಂದ ಕೈ ತೆಗೆಯುವಷ್ಟರಲ್ಲಿ ದೇವಾಂಗಣದಲ್ಲಿರುವ ದೊಡ್ಡ ಒಂದು ಅಶ್ವತ್ಥ ಮರದಿಂದ ವಿಷಜಂತುವೊಂದು ಇವನ ಮೇಲೆರಗಿತು. ತನ್ನ ಹಲ್ಲು ಉಗುರುಗಳಿಂದ ಆತನನ್ನು ಘಾಸಿಗೊಳಿಸಿತು. ವೈದ್ಯರಲ್ಲಿಗೆ ಕೊಂಡು ಹೋಗುವ ಮಧ್ಯೆ ಆತನೂ ಸಾವನ್ನಪ್ಪಿದನು. ಘಟನೆಯನ್ನು ನೋಡಿದವರೂ ಈ ಪರಿಸರದಲ್ಲಿ ಇದ್ದರು. ಮೊಸಳೆಯ ದೇಹವನ್ನು ಮನುಷ್ಯನನ್ನು ಸಂಸ್ಕರಿಸುವ ರೀತಿಯಲ್ಲೇ ಆ ಮೇಲೆ ಸಂಸ್ಕರಿಸಲಾಯಿತು. ದೇವಾಲಯದ ಹೊರಗೆ ಆಗ್ನೇಯ ಮೂಲೆಯಲ್ಲಿ ‘ಕುತ್ತಿಕಾಡು’ ಎಂಬ ಸ್ಥಳದಲ್ಲಿ ಮೊಸಳೆಯನ್ನು ದಹಿಸಲಾಯ್ತು ಎಂದೂ ಹೇಳಿದರು. ದಿನಗಳು ತುಂಬಾ ಕಳೆಯಲಿಲ್ಲ ಮರಿಮೊಸಳೆಯು ಪ್ರತ್ಯಕ್ಷವಾಯ್ತು. ಅದೇ ಮೊಸಳೆಯು ಈಗ ಕೆರೆಯಲ್ಲಿರುವುದು. ಹಿಂದಿನವನ ಹೆಸರನ್ನೇ ಇದಕ್ಕೂ ಇಡಲಾಗಿದೆ. ‘ಬಬಿಯಾ’ ಹೆಣ್ಣೋ ಗಂಡೋ ಎಂದೂ ತಿಳಿಯಲಾಗಲಿಲ್ಲ. 60 ವರ್ಷದ ವಯೋವೃದ್ಧ ! 8 ಅಡಿ ಉದ್ದವಿದೆ. ಕಳೆದ 60 ವರ್ಷಗಳಿಂದ ಇದರ ಆಹಾರ ಏನು ? ಒಂಟಿಯಾಗೆ ಹೇಗೆ ಜೀವಿಸುತ್ತಿದೆ? ಕ್ರೂರ ಪ್ರಾಣಿಯಾಗಿರುವುದರಿಂದ ‘ಆಕ್ರಮಣ ಪ್ರವೃತ್ತಿ’ ತೋರಿಸದಿರುವುದು ಯಾಕಾಗಿ? ಎಂಬಿತ್ಯಾಗಿ ಪ್ರಶ್ನೆಗಳಿಗೆ ವಿಜ್ಞಾನವು ಮೌನವಾಗುವುದು. ಮಾಂಸಾಹಾರಿಯಾದ ಮೊಸಳೆಯು ಸಣ್ಣ ಸಣ್ಣ ಮೀನುಗಳನ್ನು ತಿಂದರೂ ಅದಕ್ಕೆ ಸಾಕೇ? ನೈವೇದ್ಯ ಅನ್ನವನ್ನು ಮಧ್ಯಾಹ್ನ ಪೂಜೆಯ ನಂತರ ಅರ್ಚಕರು ಮೊಸಳೆಗೆ ಕೊಡುವುದಿದೆ. ಮನುಷ್ಯರಿಗೆ ಉಪದ್ರವ ಕೊಟ್ಟ ಘಟನೆಗಳು ಕಳೆದ 60 ವರ್ಷಗಳಲ್ಲಿ ಸಂಭವಿಸಿಲ್ಲ. ಕ್ಷೇತ್ರದ ಅರ್ಚಕರು ಈ ಕೆರೆಯಲ್ಲಿ ಮುಳುಗಿ ಸ್ನಾನ ಮಾಡುತ್ತಾರೆ. ಒಂದೊಂದು ದಿನ ಬೆಳಗ್ಗೆ 5 ಗಂಟೆಗೆ ಸ್ನಾನಕ್ಕಾಗಿ ಬಂದ ಅರ್ಚಕರು ಮೊಸಳೆಯ ಮೇಲೆ ಕಾಲಿಟ್ಟ ಘಟನೆಗಳೂ ಬೇಕಾದಷ್ಟಿವೆ. ಆಗಲೇ ಅದಕ್ಕೂ ಎಚ್ಚರವಾಗುವುದು. ಫಕ್ಕನೆ ಬದಿಗೆ ಸರಿದು, ಕೆರೆಗೆ ಹಾರಿ ತನ್ನ ಗುಹೆಯೊಳಗೆ ಹೋಗುವುದು. ಕ್ಷೇತ್ರದ ನೌಕರರೊಬ್ಬರು ದೇವಸ್ಥಾನದ ಗೋಪುರದಲ್ಲಿ ಮಲಗುತ್ತಿದ್ದರು. ಗೋಪುರವನ್ನು ಏರಲು ಮೆಟ್ಟಿಲು ಇರುವ ಅಗಲವಾದ ಒಂದು ಏಣಿಯನ್ನು ಇಡಲಾಗಿದೆ. ಒಂದು ದಿನ ನೌಕರನು ಒಬ್ಬಂಟಿಗನಾಗಿ ಗೋಪುರದಲ್ಲಿ ಮಲಗಿ ನಿದ್ರಿಸುತ್ತಿದ್ದನು. ನಿದ್ದೆಯ ಅಮಲಿನಲ್ಲಿ ಮಗ್ಗುಲು ಬದಲಿಸಿದಾಗ ಫಕ್ಕದಲ್ಲೇ ಮೊಸಳೆಯೂ ಮಲಗಿತ್ತು! ಆ ಮೇಲೆ ಯಾರೂ ಇಲ್ಲಿ ಮಲಗುವಾಗಲೂ ಏಣಿಯನ್ನು ದೂರಕ್ಕೆ ಇಟ್ಟೇ ಮಲಗುವುದು ಕ್ರಮವಾಗಿತ್ತು. ಮೊಸಳೆಯು ಬೇರೆಯೂ ಕೆಲವು ಚೇಷ್ಟೆಗಳನ್ನೂ ಮಾಡಿದ್ದುಂಟು. ಒಂದು ದಿನ ಐದು ಜನ ಒಳಗೊಳ್ಳುವ ಒಂದು ತಂದ ಕೊಲ್ಲೂರಿಗೆ ಪಯಣ ಮಾಡುತ್ತಿದ್ದರು. ದೇವಸ್ಥಾನದ ಕುರಿತು ಕೇಳಿದ ಇವರು ಶ್ರೀ ಕ್ಷೇತ್ರಕ್ಕೂ ಆಗಮಿಸಿದ್ದರು. ಇವರೆಲ್ಲರೂ ತಮಿಳರಾಗಿದ್ದರು. ಸಾಯಂಕಾಲ 5 ಗಂಟೆಯ ಹೊತ್ತು! ವಿಜ್ಞಾನಿಗಳೂ, ಬುದ್ಧಿಶಾಲಿಗಳೂ ಸೇರಿದ್ದ ತಂಡವಾಗಿತ್ತು. ದೇವಾಲಯದ ಬಗ್ಗೆ ವಿವರಣೆಯನ್ನು ಕೊಟ್ಟಮೇಲೆ ಕೆರೆಯಲ್ಲಿರುವ ಮೊಸಳೆಯ ಬಗ್ಗೆ ಹೇಳಿದೆವು. ಅದರಲ್ಲೊಬ್ಬರು ಈ ರೀತಿ ಪ್ರಶ್ನಿಸಿದರು ‘ಸಮೀಪದಲ್ಲಿ ಹೊಳೆಯೋ ಸಮುದ್ರವೋ ಇದೆಯೇ?’ ನಾವು ‘ಇಲ್ಲ’ ಎಂದು ಉತ್ತರ ಕೊಟ್ಟೆವು. ಎಷ್ಟು ಮೊಸಳೆಗಳಿವೆ ಎಂದು ಪ್ರಶ್ನಿಸಿದ್ದಕ್ಕೆ ‘ಒಂದೇ ಇರುವುದು’ ಎಂದೆವು. ನಮ್ಮ ಉತ್ತರವನ್ನು ಕೇಳಿದಾಕ್ಷಣ ಆ ವಿದ್ವಾಂಸ ಗಕ್ಕನೆ ನಕ್ಕು ಬಿಟ್ಟ. ಅವನು ಹೇಳಿದ, ‘ನೋಡೀ, ಮೊಸಳೆ ಒಂದು ಕ್ರೂರ ಪ್ರಾಣಿ, ಅದು ಒಂದು ಮಾಂಸಾಹಾರಿ, ಅದೂ ಅಲ್ಲದೆ ಯಾವುದೇ ಪ್ರಾಣಿಯು ಒಂಟಿಯಾಗಿ ಜೀವಿಸಲಾರದು. ನೀವು ಜನರನ್ನು ಆಕರ್ಷಿಸುವುದಕ್ಕೆ ಬೇರೆ ಏನಾದರೂ ವಿಷಯಗಳನ್ನು ಹೇಳಿ, ಅವರನ್ನು ನಂಬಿಸಿ, ಆದರೆ ಇದು ಸರಿಯಲ್ಲ’ ಎಂದು ಬಿಟ್ಟ. ಮೊಸಳೆಯ ಫೋಟೋವನ್ನು ತಂದು ತೋರಿಸಿದೆವು. ಅದಕ್ಕೆ ಅವನು “ಇಂತಹ ಫೋಟೋ ಎಷ್ಟು ಬೇಕಾದರೂ ನಾನು ತೋರಿಸುತ್ತೇನೆ ” ಎಂದ. ನಮಗೆ ಉತ್ತರ ಇರಲಿಲ್ಲ. ಮುಖಭಂಗವಾಯಿತು. ಇನ್ನೇನು ಮಾಡುವುದೆಂದು ಯೋಚಿಸುತ್ತಾ ಇದ್ದಾಗ, ದೇವಸ್ಥಾನದ ಅರ್ಚಕರು, ‘ಅದೋ ಮೊಸಳೆ’ ಎಂದು ಬೆರಳು ತೋರಿಸಿ, ಬಂದವರ ಗಮನವನ್ನು ಅತ್ತ ಸೆಳೆದರು. ಬಹಳ ರಭಸದಿಂದಲೇ ಬಂದ ಮೊಸಳೆಯು ದೇವಸ್ಥಾನದ ಬಡಗು ಬದಿಯಲ್ಲಿ ಬಂದು ನಿಂತಿತು. ಆಮೇಲೆ ಐದು ನಿಮಿಷಗಳ ಕಾಲ ಅದರ ಕಸರತ್ತಾಗಿತ್ತು. ನೀರಿನ ಮೇಲೆ ನಿಲ್ಲುವುದು, ಬೀಳುವುದು, ಹೊರಳಾಡುವುದು ಇತ್ಯಾದಿ. ನಾವೆಂದೂ ಮೊಸಳೆಯನ್ನು ಈ ಸ್ಥಿತಿಯಲ್ಲಿ ಕಂಡಿರಲಿಲ್ಲ. ತನ್ನ ಕಸರತ್ತನ್ನು ನಿಲ್ಲಿಸಿ ನೇರವಾಗಿ ಗುಹೆಯೊಳಗೆ ಹೋಯ್ತು.

ಮೊಸಳೆಯ ಕಸರತ್ತನ್ನು ಕಂಡು ತಮಿಳರ ತಂಡವು ದಂಗಾಗಿ ಬಿಟ್ಟಿತು. ಮಾತುಗಳನ್ನಾಡಲೂ ಅವರಿಂದ ಆಗಲಿಲ್ಲ. ನೇರವಾಗಿ ಶ್ರೀ ನಡೆಯಲ್ಲಿ ಕಣ್ಣೀರು ಸುರಿಸಿ ಪ್ರಾರ್ಥಿಸಿದರು. ‘ತಪ್ಪಾಯ್ತು, ಕ್ಷಮಿಸು’ ಎಂದು ಪದೇ ಪದೇ ಆ ವಿದ್ವಾಂಸನು ದೇವರಿಗೆ ಅಡ್ಡಬಿದ್ದು ಗೊಣಗುತ್ತಿದ್ದನು. ಮಳೆಗಾಲದ ಒಂದು ದಿನ ಸುತ್ತಲೂ ಜಾರುತ್ತಿತ್ತು. ಯಾತ್ರಿಕರ ತಂಡವು ಆ ದಿನಗಳಲ್ಲಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿತು. ಕೆರೆಯ ಬಡಗು ಬದಿಯಲ್ಲಿ ಮೊಸಳೆಯ ಗುಹೆಯ ಸಮೀಪಕ್ಕೆ ತಂಡವು ಬಂದಿತ್ತು. ಮಧ್ಯಾಹ್ನ ಪೂಜೆಯ ಸಮಯ. ಅಲ್ಲಿ ಬಗ್ಗಿ ನೋಡಿದವರಿಗೆಲ್ಲಾ ಮೊಸಳೆಯ ದರ್ಶನವಾಗುತ್ತಿತ್ತು. ತಂಡದಲ್ಲಿದ್ದ ಚಿಕ್ಕ ಮಗುವೊಂದು ಕೂಡಾ ಈ ಪ್ರಯತ್ನ ಮಾಡಿತು. ಬಗ್ಗಿ ನೋಡುತ್ತಿರುವಂತೆಯೇ ‘ಗುಳುಂ’ ಎಂದು ನೀರಿಗೆ ಬಿದ್ದೇ ಬಿಟ್ಟಿತು! ಮೊಸಳೆಯು ಗುಹೆಯೊಳಗೇ ಇತ್ತು. ಮಗು ಬಿದ್ದದ್ದೂ ಮೊಸಳೆಯ ಗುಹೆಯ ಸಮೀಪಕ್ಕೆ! ನಾವೆಲ್ಲರೂ ನೋಡುತ್ತಿದ್ದೆವು. ಏನು ಮಾಡುವುದೆಂದು ತೋಚದೆ ಕೈ ಕೈ ಹಿಚುಕಿಕೊಳ್ಳುತ್ತಿದ್ದೆವು. ಚರಿತ್ರೆಯೊಂದು ಉದ್ಭವಿಸುತ್ತದೆ ಎಂದೆಣಿಸುವಷ್ಟರಲ್ಲಿ ಮೊಸಳೆಯು ರಭಸವಾಗಿ ಗುಹೆಯಿಂದ ಹೊರಕ್ಕೆ ಬಂತು. ಮಗುವನ್ನು ಮೂಸಿತು. ಕೂಡಲೇ ಹಿಂದಕ್ಕೆ ಹೋಗಿ ತನ್ನ ಯಥಾಸ್ಥಾನವನ್ನು ಸೇರಿತು. ಆ ಮೇಲೆ ಮಗುವಿನೊಂದಿಗೆ ಬಂದವರೊಬ್ಬರು ನೀರಿಗೆ ಧುಮುಕಿ ಮಗುವನ್ನು ಎತ್ತಿಕೊಂಡು ಬಂದರು.

ಈಗಿರುವ ಮೊಸಳೆಯು ಮೊದಲಿನ ಮೊಸಳೆಯಂತೆ ಮನುಷ್ಯರೊಂದಿಗೆ ಬೇಗನೆ ಬೆರೆಯುವುದಿಲ್ಲ. ತನ್ನ ಹಿಂದಿನವನನ್ನು ಮೋಸದಿಂದ ಕೊಂದವರಲ್ಲವೇ? ವಿಶ್ವಾಸದ ಕೊರತೆ ಇದ್ದರೂ ಇರಬಹುದು. ಮನುಷ್ಯರಿಗೆ ಇಚ್ಚೆ ಬಂದಾಗ ನನ್ನನ್ನು ನೋಡದಿರಲಿ. ನನಗೆ ಇಚ್ಚೆ ಬಂದಾಗ ಅವರು ನೋಡಲಿ ಎಂಬ ಭಾವನೆ ಇದ್ದ ಹಾಗೆ ಇದೆ. ಇದಕ್ಕೆ ದೈವೇಚ್ಹೆಯೇ ಪ್ರೇರಣೆ ಯಾಗಿರಲೂಬಹುದು. ತನ್ನ ಬುದ್ದಿಗೆ ನಿಲುಕದ್ದನ್ನು ‘ಮೂಡನಂಬಿಕೆ’ಯ ಪಟ್ಟಿಗೆ ಸೇರಿಸಿ ತಾನು ನಿಶ್ಚಿಂತನಾಗುವ ಈ ಮನುಷ್ಯ ಯಾಂತ್ರಿಕಯುಗದ ಯಂತ್ರದಂತೆ ವರ್ತಿಸುವ ಕಾಲವಿದು.

ಕೆಲವು ದೇವಾಲಯಗಳಿಗೂ ಕೆಲವು ವಿಶಿಷ್ಟ ಜೀವಿಗಳಿಗೂ ಪರಸ್ಪರ ಅವಿನಾಭಾವ ಸಂಬಂಧವಿರುವುದನ್ನು ನಮಗೆ ಕಾಣಬಹುದು. ಉದಾಹರಣೆಗೆ, ತಮಿಳು ನಾಡಿನಲ್ಲಿ ‘ತಿರುಕ್ಕುಳುಕ್ಕುಂಡ್ರಂ’ ಶಿವಕ್ಷೇತ್ರದಲ್ಲಿ ಇಂತಹ ಒಂದು ದೃಶ್ಯ ವನ್ನು ಈ ಇಪ್ಪತ್ತನೇ ಶತಮಾನದಲ್ಲೂ ಕಾಣಬಹುದು. ಮಧ್ಯಾಹ್ನ ಪೂಜೆಯ ನಂತರ ಅರ್ಚಕರ ಕೈಯಿಂದಲೇ ಪಾಯಸವನ್ನು ಕುಕ್ಕಿ ತಿನ್ನುವ ಎರಡು ಬಿಳಿ ರಣ ಹದ್ದುಗಳು ತಮ್ಮ ಸಮಯ ಪಾಲನೆಯನ್ನು ಬದಲಾಯಿಸದೇ ಇರುವುದು ವೈಶಿಷ್ಟ್ಯ ಜನಸಾಗರವು ಈ ದೃಶ್ಯ ವನ್ನು ನೋಡಲು ಬಂದು ಸೇರಿದ್ದರೂ, ಯಾವುದೇ ಭಯವಿಲ್ಲದೆ ಈ ಹದ್ದುಗಳೆರಡು ಬಂದು ಪಾಯಸವನ್ನು ಕುಕ್ಕಿ ತಿಂದು, ಆಕಾಶದ ಗರ್ಭದಲ್ಲಿ ಮಾಯವಾಗುವ ದೃಶ್ಯವನ್ನು ವಿಜ್ಞಾನವೂ ವಿಸ್ಮಯದಿಂದಲೇ ನೋಡುವುದು. ಈ ಹದ್ದುಗಳೂ ಮಾಂಸಾಹಾರಿಗಳು, ಹಲವು ಪಕ್ಷಿ ವಿಜ್ಞಾನಿಗಳೂ ಈ ವಿದ್ಯಮಾನವನ್ನು ‘ಅದ್ಬುತವೆಂದೇ ಪರಿಗಣಿಸುವರು. ವೈವಿಧ್ಯಮಯವಾದ ಪ್ರಾಪಂಚಿಕ ವಿದ್ಯಮಾನಗಳ ಹಿಂದಿರುವ ಅನಂತವಾದ ಆತ್ಮೀಯ ಚೈತನ್ಯ ಮಾತ್ರವೆಂದು ಹೇಳಿ ಸಮಾಧಾನಪಟ್ಟುಕೊಳ್ಳೋ ಣವೇ? ಅಥವಾ ಋಷಿ ಶ್ರೇಷ್ಟರ ಯಾಗ, ತಪಸ್ಸುಗಳ ಪರಿಣಾಮವೆಂದು ಇದನ್ನು ಪರಿಗಣಿಸುವುದೇ? ನ್ಯೂಟ್ರೋನ್ ನಿಂದ ಸರ್ವನಾಶ ಮಾಡಬಹುದಾದ ‘ಅತಿ ಬುದ್ಧಿ ಗೂ ನಿಲುಕದ ಇಂತಹ ಅನುಭವಗಳ ಮೂಲ ಕಾರಣ ವನ್ನು ಅಧ್ಯಾತ್ಮಿಕವಾಗಿ ಚಿತ್ರಿಸಬಹುದೇ ? ಅನಂತಪುರ ಸರೋವರ ಕ್ಷೇತ್ರದಲ್ಲಿರುವ ಈ ಮೊಸಳೆಯ ಇರುವಿಕೆಯನ್ನು ಅಧ್ಯಾತ್ಮಿಕ ವಿಧ್ಯಮಾನ ಎಂದುಸಮಾಧಾನಪಟ್ಟುಕೊಳ್ಳೋ ಣವೇ?

2001 ರಿಂದ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ನಿರಂತರವಾಗಿ ನಡೆದು ಬರುತ್ತಿರುವುದರಿಂದ ಕೆರೆಯ ನೀರನ್ನು ಕಟ್ಟಿ ನಿಲ್ಲಿಸಲಾಗಲಿಲ್ಲ. ನೀರು ಬಹಳ ಕಡಿಮೆಯಾಗಿರುವ ಸಂದರ್ಭಗಳಲ್ಲೆಲ್ಲ ಈ ದೇವರ ಮೊಸಳೆಯು ತೋರಿಸಿದ ಇನ್ನೊಂದು ಕೃತ್ಯವನ್ನು ಗಮನಿಸಿರಿ. ಈ ಕೆರೆಗೆ ಸಮೀಪದಲ್ಲಿ ಹೊಳೆಯೋ ಸರೋವರವೋ ಇಲ್ಲ. ಆದರೆ ಕೆರೆಯ ತೆಂಕು ಭಾಗದಲ್ಲಿ ಪ್ರಾಕಾರದ ಹೊರಗೆ ಸುಮಾರು 100ಮೀ. ದೂರದಲ್ಲಿ ‘ಹೊರಗಿನ ಕೆರೆ’ ಎಂದೇ ಕರೆಯಲ್ಪಡುವ ಇನ್ನೊಂದು ಸಣ್ಣ ಕೆರೆ ಇದೆ. ಶ್ರೀ ವನಶಾಸ್ತಾರ ಬನದ ಸಮೀಪ ಇದೆ. ದೇವರ ಕೆರೆಯಿಂದ ಸುಮಾರು 20 ಮೆಟ್ಟಲುಗಳನ್ನು ಹತ್ತಿ, ದಕ್ಷಿಣ ಪಾಶ್ವದ ಗೇಟನ್ನು ತೆರೆದು, 100 ಮೀ. ನಷ್ಟು ದೂರವನ್ನು ತೆವಳಿಕೊಂಡೇ ಬಂದು ಈ ಮೊಸಳೆಯು ಎರಡು ಸಲ ‘ಹೊರಗಿನ ಕೆರೆ’ ಯನ್ನು ಆಶ್ರಯಿಸಿದೆ. ದೇವರ ಕೆರೆಯಲ್ಲಿ ನೀರು ತುಂಬುವಾಗ ಈ ಕ್ಷುದ್ರ ಪ್ರಾಣಿಗೆ ಹೇಗೋ ತಿಳಿಯುತ್ತದೆ. ಪುನಃ ಯಥಾ ಸ್ಥಾನಕ್ಕೆ ಬರುತ್ತದೆ. ರಾತ್ರಿ ಕಾಲದಲ್ಲೇ ಇದರ ಸಂಚಾರ. ಮಾರ್ಗ ಮಧ್ಯೆ ದನಕರುಗಳು ಧಾರಾಳ ಮಲಗಿಕೊಂಡಿರುತ್ತವೆ. ಆದರೂ ಯಾವುದೇ ಮೃಗೀಯ ಸ್ವಭಾವವನ್ನು ತೋರಿಸದೆ ಈ ದೇವರ ಮೊಸಳೆಯು ಸಾತ್ವಿಕ ಸ್ವಭಾವದ ಹರಿಕಾರನಾಗುತ್ತದೆ ಎಂಬುದು ನಮ್ಮೆಲ್ಲರ ಅನುಭವ. ವನಶಾಸ್ತಾರ ಪೂರ್ಣವಾಗಿ ಜೀರ್ಣಾವಸ್ಥೆ ಯಲ್ಲಿದ್ದ ಈ ಸಾನಿಧ್ಯವು ಇತ್ತೀಚೆಗಿನ ನವೀಕರಣ ಕಾರ್ಯಕ್ರಮದಲ್ಲಿ ಪುನರ್ಜೀವನಗೊಂಡಿದೆ. ವೀಶಾಲವಾದ ಕಟ್ಟೆಯೊಂದರ ಮೇಲೆ ಕಗ್ಗಲಿನ ಮೂರು ಮೂರ್ತಿಗಳನ್ನೂ ಪ್ರತಿಷ್ಠೆ ಮಾಡಲಾಗಿದೆ. ಎದುರು ಬದಿಯಲ್ಲಿ ಗೋಪುರದ ರಚನೆಯು ಕಾಣುವುದು. ಸುತ್ತಲೂ ಆವರಣಗೂಡೆಯಿಂದ ಇಲ್ಲಿನ ಪಾವಿತ್ರವನ್ನು ಜೋಪಾನವಾಗಿ ಇಡಲಾಗಿದೆ.

ಈ ವನಶಾಸ್ತಾರನ ಸನ್ನಿಧಿಯ ಬಲ ಭಾಗದಲ್ಲಾಗಿ ವೇಟ್ಟುಕ್ಕುರುವನ್ ಎಂಬ ಸಾನಿಧ್ಯವೂ ಇದ್ದು. ಪ್ರತ್ಯೇಕ ಕಟ್ಟೆಯಲ್ಲಿ ಇದಕ್ಕೆ ಸ್ಥಾನವನ್ನು ಕಲ್ಪಿಸಲಾಗಿದೆ. ಶಿವಶಕ್ತಿಯಾದ ಈ ಸಾನ್ನಿದ್ಯವೂ ದೇವಾಲಾಯದ ಎಲ್ಲಾ ಆಗುಹೋಗುಗಳ ಪ್ರಾಧಾನ ಕೇಂದ್ರಬಿಂದುವಾಗಿದೆಯೆಂದು ಪ್ರೆಶ್ನೆ ಚಿಂತನೆಯ ಮೂಲಕ ತಿಳಿದು ಬಂದಿದೆ. ಶಬರಿಮಲೆ ಶ್ರೀ ಅಯ್ಯಪ್ಪನ ದರ್ಶನಕ್ಕಾಗಿ ಮಲೆ ಏರಲು ಸಿದ್ಧರಾದ ಭಕ್ತರು ಧ್ಯಾನ ಜಪ ಭಜನೆಗಳನ್ನು ಮಾಡಿ, ಇರುಮುಡಿ ಕಟ್ಟವನ್ನು ಕಟ್ಟಿ ವನಶಾಸ್ತಾರ ಮತ್ತು ವೇಟ್ಟುಕ್ಕುರುವನ್ ಸಾನಿಧ್ಯದಿಂದ ಯಾತ್ರೆ ಪ್ರಾರಂಭಿಸುವುದು ವಿಶೇಷವಾದ ಅನುಭವವೆಂದು ಜನರು ಆಡಿಕೊಳ್ಳುತ್ತಿದ್ದಾರೆ. ಶ್ರೀವನಶಾಸತ್ತಾರ ಸನ್ನಿಧಿಯಿಂದ ಸುಮಾರು ನಲವತ್ತು ವರ್ಷಗಳ ಹಿಂದೆ ಇರುಮುಡಿ ಕಟ್ಟವನ್ನು ಹೊತ್ತುಕೊಂಡು ಶ್ರೀ ಅಯ್ಯಪ್ಪನ ದರ್ಶನ ಮಾಡಿ ಬಂದ ವಯೋವೃದ್ಧ ಸಿದ್ದಿ ಬೈಲು ಶ್ರೀ ಕೃಷ್ಣ ಗಟ್ಟಿಯವರು ಮೊದಲಿನ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ.

ಶ್ರೀ ವನಶಾಸ್ತಾರನ ಪಶ್ಚಿಮ ಭಾಗದಲ್ಲಿ ಒಂದು ಕೊಳವಿದೆ. ಆ ಸನ್ನಿದಿಯಲ್ಲಿ ಪೂಜಾದಿ ಕರ್ಮಗಳಿಗೆ ತೀರ್ಥವಾಗಿ ಇದರ ಜಲವನ್ನು ಪುರಾತನ ಕಾಲದಿಂದಲೂ ಊಪಯೋಗಿಸುತ್ತಿದ್ದರು ಎಂಬುದು ಪ್ರೆಶ್ನೆ ಚಿಂತನೆ. ಆದುದರಿಂದ ಇದು ಕೂಡಾ ಒಂದು ತೀರ್ಥಕೂಳವೇ ಆಗಿದೆ. ಮೈದಾನದಲ್ಲಿ ಮೇಯುತ್ತಿರುವ ಜಾನುವಾರುಗಳಿಗೆ ಬೇಕಾದಸ್ಟು ನೀರು ಕುಡಿಯುವ ಸೌಕರ್ಯ್ಯವು ಈ ಕೊಳದಲ್ಲಿದೆ.

ಗಣಪತಿ ಗುಡಿಯ ಭಾಗದಲ್ಲಿ ಒಂದು ಶಿಲಾಲೇಖನವಿದೆ. ಆದರೆ ಈ ಶಿಲೆಯಲ್ಲಿ ಬರೆದುದನ್ನು ಓದಿ ಅರ್ಥೈಸಿಕೊಳ್ಳಲು ಈವರೆಗೆ ಆಗಲಿಲ್ಲ. ಪುರಾತನ ದ್ರಾವಿಡ ಭಾಷೆಗಳನ್ನೆಲ್ಲಾ ಮಿಶ್ರಮಾಡಿ ಶಿಲೆಯಲ್ಲಿ ಬರೆದಿರುತ್ತಾರೆ. ಹೆಚ್ಚಾಗಿ ಆ ಕಾಲದಲ್ಲಿ ಪ್ರಚಲಿತವಾಗಿದ್ದ ತುಳು ಲಿಪಿಯನ್ನು ಬಳಸುತ್ತಿದ್ದರು ಎಂದು ವಿದ್ವಾಂಸರ ಅನಿಸಿಕೆ. ದೇವಾಲಯದ ನಿಯಮ ನಿಯತ್ತುಗಳನ್ನು ಆರ್ಥಿಕ ಮೂಲಗಳನ್ನೂ ಇದರಲ್ಲಿ ಬರೆದಿರಬಹುದು. ಪ್ರಯತ್ನಪಟ್ಟು ಈ ಲೇಖನವನ್ನು ಓದಲು ಸಾದ್ಯವಾದರೆ, ರಹಸ್ಯವಾಗಿಯೇ ಇರುವ ಹಲವಾರು ವಿಷಯಗಳನ್ನು ಬೆಳಕು ಕಾಣುವುದರಲ್ಲಿ ಸಂಶಯವಿಲ್ಲ.

ಶ್ರೀ ಮಹಾ ಗಣಪತಿ ದೇವಾಲಯ

ದೇವಾಲಯದ ಈಶಾನ್ಯ ಭಾಗದಲ್ಲಿ ಗುಹೆಯ ಮೇಲಾಗಿ ಗಣಪತಿ ಗುಡಿಯಿದೆ. ಸಾಮಾನ್ಯವಾಗಿ ಈಶಾನ್ಯ ಭಾಗದಲ್ಲಿ ಪ್ರಧಾನ ದೇವಾಲಯದ ಮುಂಭಾಗದಲ್ಲಿ ಗಣಪತಿ ಗುಡಿಯನ್ನು ಕಾಣಲು ಅಸಾಧ್ಯ. ಆದರೆ ಅನಂತಪುರದ ದೈವೀಕವಾದ ವೈಶಿಷ್ಟ್ಯಗಳನ್ನು ಪುಷ್ಟೀಕರಿಸುವ ಒಂದು ವಿಷಯವು ಇದಾಗಿದೆ. ಪುರಾತನ ಕಾಲದಲ್ಲಿ ಇಲ್ಲಿ ಕಡುಶರ್ಕರ ಪಾಕದ ಗಣಪತಿ ವಿಗ್ರಹವಿತೆಂದು ಅಭಿಷೇಕಾದಿ ಕರ್ಮಗಳಿಂದ ಅದು ವಿರೂಪವಾಗಿತ್ತೆಂದೂ ತಿಳಿದುಬಂದಿದೆ. ಈಗ ಇರುವ ಶಿಲೆಯ ಗಣಪತಿ ವಿಗ್ರಹಕ್ಕಿಂತ ಮೊದಲಿನ ವಿಗ್ರಹವನ್ನು ತೆಗೆದು ಜಲಧಿವಾಸ ಮಾಡಿದ್ದರು. ಶಿಲ್ಪಿಗಳ ಆದೇಶ ಮೇರೆಗೆ ಈ ವಿಗ್ರಹವನ್ನು ಮೇಲಕ್ಕೆತ್ತಿ ಸಂಗ್ರಹ ಕೋಣೆ ಯಲ್ಲಿ ಇಟ್ಟಿರುತ್ತಾರೆ. ಗಣಪತಿ ಗುಡಿಯ ಮುಂಭಾಗದಲ್ಲಿ ಮಾಡಿಲ್ಲದ ನಮಸ್ಕಾರ ಮಂಟಪದ ಸ್ಥಾನವಿದೆ. ಗಣಪತಿ ಹೋಮಗಳನ್ನು ಬಹಳ ಹಿಂದಿನಿಂದಲೇ ಈ ಪಂಚಾಂಗದ ಮೇಲೆಯೇ ಮಾಡುತ್ತಿದ್ದರು ಎಂದು ತಿಳಿದು ಬರುತ್ತದೆ.

ಗಣಪತಿ ಗುಡಿಯ ಬಲಭಾಗದಲ್ಲಿ ಒಂದು ಶಿಲಾಲೇಖನವಿದೆ. ಆದರೆ ಈ ಶಿಲೆಯಲ್ಲಿ ಬರೆದುದನ್ನು ಓದಿ ಅರ್ಥೈಸಿಕೊಳ್ಳಲು ಈವರೆಗೂ ಆಗಲಿಲ್ಲ. ಪುರಾತನ ದ್ರಾವಿಡ ಭಾಷೆಗಳನ್ನೆಲ್ಲಾ ಮಿಶ್ರಮಾಡಿ ಶಿಲೆಯಲ್ಲಿ ಬರೆದಿರುತ್ತಾರೆ. ಹೆಚ್ಚಾಗಿ ಆ ಕಾಲದಲ್ಲಿ ಪ್ರಚಲಿತವಾಗಿದ್ದ ತುಳು ಲಿಪಿಯನ್ನು ಬಳಸುತ್ತಿದ್ದರು ಎಂದು ವಿದ್ವಾಂಸರ ಅನಿಸಿಕೆ. ದೇವಾಲಯದ ನಿಯಮ ನಿಯತ್ತುಗಳನ್ನು ಆರ್ಥಿಕ ಮೂಲಗಳನ್ನೂ ಇದರಲ್ಲಿ ಬರೆದಿರಬಹುದು. ಪ್ರಯತ್ನಪಟ್ಟು ಈ ಲೇಖನವನ್ನು ಓದಲು ಸಾದ್ಯವಾದರೆ, ರಹಸ್ಯವಾಗಿಯೇ ಇರುವ ಹಲವಾರು ವಿಷಯಗಳನ್ನು ಬೆಳಕು ಕಾಣುವುದರಲ್ಲಿ ಸಂಶಯವಿಲ್ಲ.

ಗಣಪತಿಗುಡಿಯ ಎಡಬದಿಯಲ್ಲಿ ರಕ್ತೇಶ್ವರಿ ಕಟ್ಟಿದೆ. ಬಹಳ ಹಳೆಯದಾದ ದೊಡ್ಡ ಒಂದು ಅಶ್ವತ್ಥ ಮರದ ಕಟ್ಟೆಯೂ ಇದಕ್ಕೆ ತಾಕಿಕೊಂಡು ಇದೆ. ಹಲವು ತರದ ಸರ್ಪಗಳ ಆವಾಸ ಸ್ಥಾನವು ಈ ಮರವಾಗಿದೆ. ಎಸ್ಟೋ ಸಲ ಈ ಪರಿಸರದಲ್ಲಿ ಹಾವುಗಳನ್ನು ಕಂಡವರು ಇದ್ದಾರೆ. ಹಿಂದೆ ತಂತ್ರಿ ಮನೆಯವರು ಈ ಊರಿನಿಂದ ವಲಸೆ ಹೋದಾಗ ಅವರ ಆರಾಧ್ಯ ದೈವವಾದ ರಕ್ತೇಶ್ವರಿ ದೈವವನ್ನು ಇಲ್ಲಿ ಪ್ರತಿಷ್ಟಾಪಿಸಿ, ಹೊರಟು ಹೋದರು ಎಂದು ಪ್ರೆಶ್ನೆ ಮೂಲಕ ತಿಳಿದುಬಂದಿದೆ. ಎಲ್ಲಾ ಮಂಗಳವಾರ ಮತ್ತು ಸಂಕ್ರಮಣ ದಿನದಂದು ರಕ್ತೇಶ್ವರಿಗೆ ‘ತಂಬಿಲ’ ಸೇವೆಯ ನಡೆಯುತ್ತಿರುತ್ತದೆ. ಬೆಳ್ತಿಗೆ ಅಕ್ಕಿ ಮತ್ತು ತೆಂಗಿನಕಾಯನ್ನು ನೈವೇದ್ಯ ಮಾಡುವುದೇ ಈ ತಂಬಿಲ ಸೇವೆ. ಇದರ ಎಡಬದಿಯಲ್ಲಿ ಯಕ್ಷಿಯ ಕಲ್ಲು ಇದೆ. ದೇವಸ್ಥಾನದ ರಕ್ಷಾ ದೇವತೆಯಾಗಿ ಯಕ್ಷಿಯನ್ನು ಇಲ್ಲಿ ಆರಾದಿಸುತ್ತಾರೆ. ಸರಾಗವಾದ ಮೂರು ದಿನಗಳಲ್ಲಿ ರಕ್ತೇಶ್ವರಿಗೆ ತಂಬಿಲ ಕೂಡುವ ಹಾಗಿಲ್ಲ. ಹಾಗೇನಾದರು ಕೊಟ್ಟಲ್ಲಿ ನಾಲ್ಕನೆಯ ದಿನ ರಕ್ತೇಶ್ವರಿಯ ಭೂತಕೂಲವು ನಡೆಯಬೇಕೆಂಬುದು ಇಲ್ಲಿನ ಕ್ರಮ.

ತಂಬಿಲ ನಡೆಯುವ ಹೊತ್ತಿಗೆ ಸ್ತ್ರೀಯರು ಪ್ರಾಕಾರದ ಒಳಗೆ ಇರಬಾರದೆಂದು ಹಿಂದಿನಿಂದಲೇ ಆಚರಿಸಿಕೊಂಡು ಬಂದಿರುವಂತಹ ಆಚಾರ. ಯಕ್ಷಿಯೂ ಘೋರ ಸ್ತ್ರೀಯ ರೂಪದಲ್ಲಿ ಇಲ್ಲೆಲ್ಲಾ ಅಲೆಯುತ್ತಿರುವ ಸಮಯವಾದುದರಿಂದ, ಸ್ತ್ರೀ ರೂಪದ ಭಯವನ್ನು ನಿವಾರಿಸಲೋಸುಗ ಈ ಕ್ರಮ ಬಂದಿರಲೂ ಬಹುದು. ಈಗ ನಡೆಯುತ್ತಿರುವ ಜೀರ್ಣೋದ್ಧಾರದ ಭಾಗವಾಗಿ ರಕ್ತೇಶ್ವರಿ ಮತ್ತು ಯಕ್ಷಿಯ ಸ್ಥಾನಗಳು ಬದಲಾಗುವುದು.

ವೇದಾವತಿ ಸಾನ್ನಿಧ್ಯ:

ಶ್ರೀ ಅನಂತಪದ್ಮನಾಭ ಸ್ವಾಮಿಯ ಸಂಪತ್ತಿನ ಪ್ರತಿರೂಪಗಳಾದ ಶ್ರೀದೇವಿ ಮತ್ತು ಭೂದೇವಿ ಸಮೇತವಾಗಿ ವೈಕುಂಠದಲ್ಲಿ ಆಸೀನರಾಗಿರುವಂತಹ ದೃಶ್ಯವನ್ನು ಗರ್ಭಗುಡಿಯಲ್ಲಿ ಕಾಣುತ್ತೇವೆ. ತ್ರೇತ್ರಾಯುಗದಲ್ಲಿ ಸೀತಾದೇವಿಯು ತನ್ನ ಪೂರ್ವಕಾಲದ ಪುಣ್ಯದಿಂದ ಶ್ರೀಮನ್ನಾರಾಯಣನ ಅವತಾರ ರೂಪನಾದ ಶ್ರೀ ರಾಮನನ್ನು ವರಿಸಿದಳು. ಸೀತಾದೇವಿಯ ಹಿಂದಿನ ಜಲ್ಮವೇ ವೇದಾವತಿ. ವೇದಾವತಿ ಕೂಡಾ ಶ್ರೀ ಮನ್ನರಾಯಣನನ್ನು ಪತಿಯಾಗಿ ಸ್ವಿಕರಿಸಬೇಕೆಂಬ ಉತ್ಕಟೇಚ್ಛೆಯಿಂದ ಘೋರ ತಪಸ್ಸು ಮಾಡಿದಳು. ಶ್ರದ್ದಾ ಭಕ್ತಿಗಳಿಂದ ಏಕಮನಸ್ಸಿನಿಂದ ಶ್ರೀ ಮನ್ನಾರಾಯಣನನ್ನು ಭಜಿಸಿದಳು. ವೆದಾವತಿಯ ಭಕ್ತಿಗೆ ಮೆಚ್ಚಿದ ಶ್ರೀ ಮನ್ನಾರಾಯಣನು, ತನ್ನ ಈಗಿನ ಅವಸ್ಥೆಯನ್ನು ನೆನಪಿಸಿ (ದ್ವಿಪತ್ನಿತ್ವ) ಮಂದಸ್ಮಿತ ವದನನಾಗಿ ಅರ್ಧನಿಲ್ಮೀಲಿತನಾಗಿ ವೆದಾವತಿಯನ್ನು ನೋಡುವ ಭಾವವು ಅನಂತಪದ್ಮನಾಭಸ್ವಾಮಿಯ ಶ್ರೀಮುಖದಲ್ಲಿ ಕಾಣುತ್ತೇವೆ. ದ್ವಿಪತ್ನೀ ಸಮೇತನಾದ ಶ್ರೀ ಅನಂತಪದ್ಮನಾಭ ಸ್ವಾಮಿಯು, ಪದ್ಮಾವತಿಯನ್ನು ಪತ್ನಿಯಾಗಿ ಸ್ವೀಕರಿಸಲು ಒಪ್ಪಲಿಲ್ಲ. ಬದಲಾಗಿ ಕಠೋರ ತಪಸ್ಸನ್ನಾಚರಿಸಿದ ವೇದಾವತಿಯ ನಿಸ್ಟೆಯನ್ನು ಮನಸ್ಸಾರೆ ಪ್ರಶಂಸಿಸಿ, ವೆದಾವತಿಗೆ ಒಂದು ಸ್ಥಾನವನ್ನು ತನ್ನ ಕಣ್ಣಮುಂದೆಯೇ ಕೊಡುತ್ತಾನೆ. ಆ ಘಟನೆಯ ಪ್ರತಿಕವಾಗಿಯೇ ‘ವೇದಾವತಿ ಸಾನ್ನಿಧ್ಯ’ ಇಲ್ಲುಂಟಾಯ್ತು. ಪ್ರಾಕಾರದ ಹೊರೆಗೆ ಮೆಶರಾಶಿಯಲ್ಲಿ ಈ ನೂತನ ಸಾನ್ನಿಧ್ಯವನ್ನು ಕಲ್ಪಿಸಲಾಗಿದೆ.

 ಶ್ರೀ ಜಲದುರ್ಗೆ

ದೇವಾಲಯದ ಈಶಾನ್ಯ ಮೂಲೆಯಲ್ಲಿ ಕೆರೆಯಲ್ಲಿ ಇರುವ ಸಾನಿಧ್ಯವು ಶ್ರೀ ಜಲದುರ್ಗೆಯದ್ದು. ಮಹಾದುರ್ಗೆಯು ಜಲದಲ್ಲಿಯೇ ಪ್ರತಿಷ್ಠಾಪಿಸಲ್ಪಟ್ಟಳು. ಸಿಂಹವಾಹಿನಿಯಾದ ಜಲದುರ್ಗೆಯ ವಿಗ್ರಹವನ್ನು ಚಂದ್ರಕಾಂತ ಶಿಲೆಯಿಂದ ಮಾಡಿರುತ್ತಾರೆ. ಕೆಲೆವೂಂದು ಊನಗಳು ವಿಗ್ರಹಕ್ಕೆ ಇರುವುದರಿಂದಲೂ, ಪುರಾತನದಲ್ಲಿ ಈ ಸಾನ್ನಿಧ್ಯವು ಇಲ್ಲಿ ಇರದೇ ಇರುವುದರಿಂದಲೂ ಇದರ ಸ್ಥಾನವನ್ನು ಬದಲಾಹಿಸಬೀಕಾಗಿದೆ. ಜೀರ್ಣೋದ್ದಾರ ಕಾರ್ಯಗಳು ಪೂರ್ತಿಗೊಂಡಾಗ ಜಲದುರ್ಗೆಯು ಸ್ಥಾನವೂ ಬದಲಾಗಬೇಕಾಗುವುದು. ಕರ್ಕಟಕ ಮಾಸದ ದಿನಗಳಲ್ಲೂ ಶ್ರೀಜಲದುರ್ಗೆಗೆ ಬಕ್ತರಿಂದ ‘ಶ್ರೀ ದುರ್ಗಾನಮಸ್ಕಾರ ಪೂಜೆ’ ನಡೆಯುವುದು.

ವೀರಭದ್ರ ಮತ್ತು ಉಳ್ಳಾಕುಳು ದ್ಯೆವಗಳು

ಈ ಪ್ರದೇಶವೆಲ್ಲಾ ಭಾತಾರಾಧನೆಗೆ ಹೆಸರುವಾಸಿಯಾದ ಭೂಪ್ರದೇಶ. ‘ರಾಜಂ ದ್ಯೆವ’ ಎಂದು ಕರೆಯಲ್ಪಡುವ ‘ಪೊಮಾಣಿ ಕಿನ್ನಿಮಾಣಿ’ ದ್ಯೆವಗಳನ್ನು ಉಳ್ಳಾಕುಳು ಸಂಕಲ್ಪದಲ್ಲಿ ಆರಾಧಿಸುತ್ತಾರೆ. ಆ ಉಳ್ಳಾಕುಳು ದೈವಗಳು ಇಲ್ಲಿ ನೆಲೆಯೂರಿವೆ. ಪುರಾತನದಲ್ಲಿ ಜಾತ್ರೆಯ ಮರುದಿನ ಈ ದ್ಯೆವಗಳಿಗೆ ಕೋಲವನ್ನು ಕೂಡುತ್ತಿದ್ದರು ಎಂಬುದು ಪ್ರೆಶ್ನೆ ಚಿಂತನೆ. ಬಂಡಿಯಲ್ಲಿ ಕುಳಿತು ದೈವಾಂಗಣಕ್ಕೆ ಬರುವ ಈ ಕೋಲಗಳ ಪ್ರಾರಂಭ ಈಗ ‘ಬಂಡಿಯಡ್ಕ’ ಎಂದು ಕರೆಯಲ್ಪಡುವ ದೊಡ್ಡದಾದ ಕೋಟೆಯಾಗಿದೆ. ಇಲ್ಲಿಯೇ ಬಂಡಿಗಳನ್ನು ತೊಳೆಯುವ ಎರಡು ಕೊಳಗಳು ಇವೆ. ಅಕ್ಕಪಕ್ಕಗಳಲ್ಲಿ ಬಂಡಿಯ ಚಕ್ರಗಳು ಹೂತುಹೋದಂತೆ ಭಾಸವಾಗುವ ಈ ಕೊಳಗಳನ್ನು ನೋಡಿದಾಗ, ದ್ಯೆವೀಕ ಮತ್ತು ಪ್ರಾಕೃತಿಕ ಸನ್ನಿವೇಶಗಳು ಪರಸ್ಪರ ಮೇಳೈಸಿದಂತೆ ಭಾಸವಾಗುವುದು. ಉಳ್ಳಾಕುಳು ದ್ಯೆವದ ಆಯುಧಗಳಾಗಿ ಸಂಕಲ್ಪಿಸಿದ ಆಯುಧಗಳು ಈಗ ಗೋಪುರದ ತೆಂಕುಮೂಲೆಯಲ್ಲಿ ಇಡಲ್ಪಟ್ಟಿದೆ. ಇದರೊಂದಿಗೆ ವೀರಭದ್ರ ದ್ಯೆವದ ಗದೆಯೂ ಇದೆ. ಎಲ್ಲಾ ಸಂಕ್ರಮಣ ದಿನದಂದು ತಂಬಿಲ ಇಲ್ಲಿಯೂ ಜರಗಬೇಕಾಗಿದೆ. ಪ್ರೆಶ್ನೆಯಲ್ಲಿ ಕಂಡಂತೆ ಮುಂದೆ ಇವುಗಳು ಸ್ಥಾನವನ್ನು ಈಗಿನ ರಕ್ತೆಶ್ವರಿ ಕಟ್ಟೆಯ ಎದುರು – ಎಡಭಾಗದಲ್ಲಿ ಪ್ರತಿಷ್ಠೆ ಮಾಡಬೇಕಾಗಿದೆ.

ವಾರ್ಷಿಕ ಉತ್ಸವ

ಶ್ರೀ ಕ್ಷೇತ್ರದಲ್ಲಿ ದ್ವಜಸ್ಥಂಭವಿಲ್ಲ. ಪುರಾತನ ಕಾಲದಿಂದಲೇ ಈ ವ್ಯವಸ್ತೆ ಇದ್ದುದಾಗಿ ತಿಳಿದುಬಂದಿಲ್ಲ. ಆದುದರಿಂದ ಬಲಿಕಲ್ಲನ್ನು ಮಾತ್ರ ಆಧಾರವಾಗಿರಿಸಿ ಒಂದು ದಿನದ ಉತ್ಸಸವವನ್ನು ಆಚರಿಸುವುದುಂಟು, ಇಲ್ಲಿನ ಉತ್ಸವ ಮೂರ್ತಿಯನ್ನು ಅಲಂಕರಿಸಿ ಕೆರೆಯ ಹೊರಭಾಗದಲ್ಲಿ ‘ನೃತ್ಯಬಲಿ’ ನಡೆಯಬೇಕು. ಶ್ರೀ ದೇವರ ಉತ್ಸವದಲ್ಲಿ ಪ್ರಧಾನವೂ ಆಕರ್ಷಣೀಯವೂ ಆದ ಒಂದು ನೋಟವೇ ‘ತೆಪ್ಪೋತ್ಸವ’. ಎರಡು ದೋಣಿಗಳನ್ನುಪರಸ್ಪರ ಜೋಡಿಸಿ, ವಿದ್ಯುದ್ದೀಪಗಳಿಂದ ಅಲಂಕರಿಸಿ ಕೆರೆಯಲ್ಲಿ ಪ್ರದಕ್ಷಿಣೆ ಬರುವುದೇ ತೆಪ್ಪೋತ್ಸವ. ಉತ್ಸ್ಸವ ಮೂರ್ತಿಯನ್ನು ಅಲಂಕರಿಸಿ ಈ ದೋಣಿಗಳಲ್ಲಿಟ್ಟು ದೇವರನ್ನು ಹೊರುವವರ ಸಮೇತ ಶ್ರೀ ಕ್ಷೇತ್ರಕ್ಕೆ ಪ್ರದಕ್ಷಿಣೆ ಬರುವ ನೋಟ ಎಂಥಹವರನ್ನೂ ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಊರಿನ ನಾನಾ ಭಾಗಗಳಿಂದ ಈ ತೆಪ್ಪೋತ್ಸವವನ್ನು ನೋಡಲೆಂದೇ ಜನರು ಅ ಮಂಗಳ ಮುಹೂರ್ತ ಅವಿಸ್ಮರಣೀಯ ಅನುಭವವಾಗುತ್ತದೆ. ಈಗಿನ ಜೀರ್ಣೋದ್ಧಾರ ಕಾರ್ಯಗಳ ನಂತರ ಹೊಸದಾಗಿ ಜಾತ್ರೆಯ ದಿನವನ್ನು ನಿಗದಿಪದಿಸಬೇಕಾಗಿದೆ.

ಹಿನ್ನೆಲೆ

ವೈಕುಂಠಸದೃಶವಾದ ದೇವಾಲಯ. ವೈಕುಂಠದಲ್ಲಿ ಶ್ರೀಮನ್ನಾರಾಯಣನು ಶ್ರೀದೇವಿ ಭೂದೇವಿಯರ ಜೂತೆಯಾಗಿ ಆದಿಶೇಷನ ಮೇಲೆ ಕುಳಿತಿದ್ದಾನೆ. ಸುತ್ತಲೂ ಕ್ಷೀರಸಾಗರ. ಕ್ಷೀರಸಾಗರದಲ್ಲಿ ಯಕ್ಷರೂ ಗಂಧರ್ವರೂ ವಾಸವಾಗಿದ್ದಾರೆ. ವರುಣನೆ ಈ ಮೊಸಳೆ! ಕ್ಷೀರಸಾಗರದಲ್ಲಿ ವಾಸವಾಗಿದ್ದು ವೈಕುಂಠದ ಕಾವಲುಗಾರ. ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದ ಕಾವಲುಗಾರನು ಈ ವರುಣನಾದ ಮೊಸಳೆಯೆಂದು ಪುರಾಣತಜ್ಞರ ಅಭಿಮತ.

ಗೋಶಾಲೆ ಕೃಷ್ಣ

ಕೆರೆಯ ನೈಋತ್ಯ ಮೂಲೆಯಲ್ಲಿ ಪುರಾತನ ಮಠವನ್ನು ನೆನಪಿಗೆ ತರುವ ಗೋಶಾಲೆ ಕೃಷ್ಣನ ದೇವಾಲಯವಿದೆ. ಬಿಲ್ವಮಂಗಲ ಸ್ವಾಮಿಗಳ ಆರಾಧ್ಯದೈವವು ಗೋಶಾಲೆ ಕೃಷ್ಣನಾಗಿದ್ದು, ಸ್ವಾಮಿಗಳ ವಾಸಸ್ಥಾನವೂ ಇದಾಗಿತ್ತೆಂದು ಪ್ರಶ್ನೆ ಮುಖೇನ ತಿಳಿದು ಬಂದ ಅಂಶ. ಅನಂತಪದ್ಮನಾಭ ಸ್ವಾಮಿ ದೇವಾಲಯದ ನಿರ್ಮಾಣಕ್ಕೆ ಮೊದಲೇ ಈ ದೇವಾಲಯವಿತ್ತೆಂದು, ಪ್ರಧಾನ ಪ್ರತಿಷ್ಠೆಯು ಗೋಶಾಲೆ ಕೃಷ್ಣನೆಂದೂ ತಿಳಿದುಬಂದಿದೆ. ಕೈಯಲ್ಲಿ ಚಾಚಿಹಿಡಿದಿರುವ ಕಪ್ಪು ಶಿಲೆಯ ಸುಂದರ ಮೂರ್ತಿಯೇ ಈ ಗೋಶಾಲೆ ಕೃಷ್ಣ. ದನಗಳನ್ನು ಹಟ್ಟಿಯಿಂದ ಮೇಯಲು ಆಟ್ಟುವ ಸ್ಥಿತಿಯಲ್ಲಿ ಈ ವಿಗ್ರಹವಿದೆ. ಸರ್ವಾಭಿಷ್ಟನಾದ ಈ ವಿಗ್ರಹವು ಯಾವುದೇ ಭಿನ್ನವಿಲ್ಲದೆ ಪುರಾತನ ಕಾಲದಿಂದಲೇ ಈ ದೇವಾಲಯದಲ್ಲಿ ಗೋಶಾಲೆಕೃಷ್ಣನಾಗಿ ಅಭಯವನ್ನು ಕೂಡುತ್ತಾ ಬರುತ್ತಿದೆ. ಸುತ್ತಲೂ ಗೋಪುರಗಳಿಂದ ಕೂಡಿದ ಈ ದೇವಾಲಯದಲ್ಲಿ, ತುಳಸಿ ಕಟ್ಟೆಯೊಂದಿದ್ದು, ಮಠದ ಕಾರ್ಯಗಳು ಇಲ್ಲಿ ನೆಡೆದಿತ್ತು ಎಂಬುದಕ್ಕೆ ಸಾಕ್ಷಿಯಾಗುತ್ತದೆ. ಸ್ವಾಮಿಗಳ ಸ್ನಾನ ಕೆರೆಯನ್ನು ಈ ದೇವಾಲಯದ ನೈಋತ್ಯ ಭಾಗದಲ್ಲಿ ಈಗಲೂ ಕಾಣಬಹುದು. ಕಲ್ಲಿನಿದಲೇ ಮಾಡನ್ನು ಮಾಡಲಾಗಿದೆ. ಅಷ್ಟಮಿ ದಿನದಿಂದ ಚಂದ್ರೋದಯವರೆಗೆ ಭಜನಾ ಕಾರ್ಯಕ್ರಮ ನಡೆದುಕೊಂಡು ಬರುತ್ತದೆ. ಇದು ಬಹಳ ವೈಭವದಿಂದಲೇ ನಡೆದು ಬರಲಿ ಎಂದು ಆಶಿಸೋಣ.

ಶ್ರೀ ವನಶಾಸ್ತಾರ

ಪ್ರಧಾನ ದೇವಾಲಯದ ತೆಂಕುಭಾಗದಲ್ಲಿ ಪ್ರಾಕಾರದ ಹೊರಗೆ ಪುರಾತನ ವನಶಾಸ್ತಾರ ವನವಿದೆ. ಈ ಸ್ಥಳದ ಆದಿಚೈತನ್ಯವು ಇದೇ ಆಗಿತ್ತು ಎಂಬುದು ಪ್ರಶ್ನೆಚಿಂತನೆ. ಉತ್ಸವದ ದಿನದಂದು ಇಲ್ಲಿ ಭಜನೆ ನಡೆಯಬೇಕು.

ಶೃಂಗೇರಿ ಜಗದ್ಗುರುಗಳ ಕ್ಷೇತ್ರ ಸಂದರ್ಶನ:

ಶ್ರೀ ಕ್ಷೇತ್ರದ ವಾರ್ಷಿಕ ಮಹೋತ್ಸವ ದಿನವನ್ನು ಎಲ್ಲಾ ವರ್ಷಗಳ ಎಪ್ರಿಲ್ ತಿಂಗಳ ಹದಿನೆಂಟನೆ ತಾರೀಕಿನಂದು ವಿಶೇಷಪೂಜೆ, ಬಲಿವಾದು ಕೂಟ ಮತ್ತು ವಿಶೇಷ ಸಾಮೂಹಿಕ ಪ್ರಾರ್ಥನೆಯೊಂದಿಗೆ ಆಚರಿಸುತ್ತಾ ಬರುತ್ತಿದೆ. 2006 ನೇ ವರ್ಷದ ವಾರ್ಷಿಕ ಮಹೋತ್ಸವದ ದಿನವನ್ನು ಬಹಳ ಅದ್ದೂರಿಯಾಗಿಯೇ ನಡೆಸಬೇಕಾಯ್ತು. ಕಾರಣ, ಶೃಂಗೇರಿ ಜಗದ್ಗುರುಗಳು ಆ ದಿನ ಕ್ಷೇತ್ರಕ್ಕೆ ಆಗಮಿಸಿದ್ದರು. ಕಡುಶರ್ಕರಪಾಕದ ವಿಗ್ರಹಗಳಿಗೆ ಕೊನೆಯ ಲೇಪನವಾದ ಕನಕ ರಜತ ಮಿಶ್ರಣಗಳ ಪ್ರಾರಂಭವನ್ನು ಓರ್ವ ಯತಿವರ್ಯರ ಅನುಗ್ರಹಾಶೀರ್ವಾದಗಳೊಂದಿಗೆ ಮಾಡಬೇಕೆಂದು ನಮ್ಮ ಬಯಕೆಯಾಗಿತ್ತು. ಅದರಂತೆ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳಲ್ಲಿ ಭಿನ್ನವಿಸಿಕೊಂಡಾಗ ಬಹಳ ಸಂತೋಷದಿಂದ ಒಪ್ಪಿಕೊಂಡರು. ಅದರಂತೆ ಜಾತ್ರಾದಿನಾಚರಣೆಯ ಎಪ್ರಿಲ್ 18 ನೇ ತಾರೀಕಿನಂದು ಕ್ಷೇತ್ರ ಸಂದರ್ಶನ ಮಾಡುವುದಾಗಿಯೂ ಒಪ್ಪಿಗೆ ಕೊಟ್ಟರು. ಕನ್ನಡ ಗಡಿನಾಡ ಘಟಕದ ಅಧ್ಯಕ್ಷರಾದ ಶ್ರೀ ಐ.ವಿ. ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಜಗದ್ಗುರುಗಳು ಅಶೀರ್ವಚನವಿತ್ತರು. ವಾಸ್ತು ಶಿಲ್ಪಿಗಳಾದ ವೆಲಾಪ್ಪರಂಬಿಲ್ ಶ್ರೀ ಪರಮೇಶ್ವರನ್ ನಂಬೂದಿರಿ ಮತ್ತು ವಿಗ್ರಹಶಿಲ್ಪಿಗಳಾದ ಬ್ರಹ್ಮಮಂಗಲ ಶ್ರೀ ಕೈಲಾಸರವರಿಗೆ ಚಿನ್ನ ಮತ್ತು ಬೆಳ್ಳಿಯ ಆಶೀರ್ವಾದದೊಂದಿಗೆ ಹಸ್ತಾಂತರಿಸಿ, ಲೇಪನಕ್ಕೆ ಬೇಕಾದ ತಯಾರಿ ಮಾಡುವುದಾಗಿ ಸೂಚನೆಯಿತ್ತರು. ಊರಿನ ಮತ್ತು ಪರವೂರಿನ ಸಹಸ್ರ ಸಂಖ್ಯೆಯಲ್ಲಿ ಸೇರಿದ ಭಕ್ತ ಜನರನ್ನು ಸಾಕ್ಷ್ಯವನ್ನಾಗಿಸಿ ಶಿಲ್ಪಿಗಳು ಶ್ರೀಗಳಿಂದ ದ್ರವ್ಯಗಳನ್ನು ಸ್ವೀಕರಿಸಿದರು. ತಮ್ಮ ಕಾಲದಲ್ಲಿ ಇಂತಹ ಒಂದು ಅಪರೂಪದ ದೃಶ್ಯವನ್ನು ಕಂಡು ಭಕ್ತ ಮನಸ್ಸು ಪುಳಕಿತಗೊಂಡಿತು. ಶೃಂಗೇರಿ ಸಂಸ್ಥಾನದಿಂದ ವಿಶೇಷವಾಗಿ 32 ಗ್ರಾಂ. ಚಿನ್ನವನ್ನೂ ಕೊಡಮಾಡಿದರು.

ಒಂದು ಕಾಲದ ಮಹಾದೇವಾಲಯ

ಪ್ರಶಾಂತವಾದ ಪ್ರಾಕೃತಿಕ ಹಿನ್ನಲೆಯಲ್ಲಿ ನೆಲೆಗೊಂಡಿರುವ ಈ ಕ್ಷೇತ್ರವು ಗತಕಾಲದ ಕೆಲವು ಘಟನೆಗಳಿಗೆ ಸಾಕ್ಷಿಯಾಗಿದ್ದಿರಬೇಕು. ಇದು ಒಂದು ಮಹಾಕ್ಷೇತ್ರವಾಗಿರುವುದೆಂದೂ, ಒಂದು ಮಹಾ ಸಾಂಸ್ಕೃತಿಕ ಬೆಳವಣಿಗೆಗೆ ಮೂಲಸ್ಥಾನವೆಂದೂ ತಿಳಿಯಲು ಹಲವು ಪುರಾವೆಗಳಿವೆ. ಸುತ್ತಲೂ ಇರುವ ‘ಸರ್ಪಕಟ್ಟು’ ಆವರಣ ಗೋಡೆಯು ಈ ನಿಗಮನವನ್ನು ಪುಷ್ಟೀಕರಿಸುತ್ತದೆ. ಉದಾತ್ತವಾದ ವೈಷ್ಣವೀ ಚೈತನ್ಯವನ್ನು ಅನುಭವಿಸಲಿರುವ ಒಂದು ಅಪೂರ್ವ ಪುಣ್ಯ ಕ್ಷೇತ್ರವಾಗಿದೆ. ಶುಕ್ಲಪಕ್ಷದ ರಾತ್ರಿಗಳಲ್ಲಿ ಏಕಾಂಗಿಯಾಗಿ ಕುಳಿತು ಧ್ಯಾನಿಸುವ ಪ್ರೇರಣೆಯನ್ನು ಇಲ್ಲಿನ ಪರಿಸರವು ಕೊಡುತ್ತದೆ. ಏಕಾಗ್ರತೆಯಿಂದಲೂ ದೇವಸ್ಮರಣೆಯಿಂದಲೂ ಕಳೆಯುವ ಆ ಅನರ್ಘ್ಯ ನಿಮಿಷವು ವ್ಯಾವಹಾರಿಕ ಜೀವನದ ತುಮುಲವನ್ನು ಕಡಿಮೆ ಮಾಡುವುದರಲ್ಲಿ ಸಂಶಯವಿಲ್ಲ. ಮಾನಸಿಕ ಒತ್ತಡದಿಂದ ಮುಕ್ತನಾಗಲು ಬಯಸುವ ಓರ್ವ ವ್ಯಕ್ತಿಯು ಇಲ್ಲಿ ಬಂದು ಧ್ಯಾನ, ಭಜನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡರೆ, ಸಮಾಧಾನವೆಂಬ ಅಮೂಲ್ಯ ಸಂಪತ್ತನ್ನು ತನ್ನದಾಗಿಸಿಕೊಳ್ಳುತ್ತಾರೆ. ಅದೆಷ್ಟೋ ಮಂದಿ ತಮ್ಮ ಅನುಭವಗಳನ್ನು ನಮ್ಮಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಯೋಗ್ಯವಾದ ಸೌಕರ್ಯಗಳನ್ನೂ ಇಲ್ಲಿ ಮಾಡಬೇಕಾಗಿದೆ. ಕಾರಣ, ಯತಿಶ್ರೇಷ್ಠರಿಂದ ತಮ್ಮ ತಪೋಬಲದ ವರ್ಚಸ್ಸಿನಿಂದ ದೈವೀಕ ಚೈತನ್ಯಕ್ಕೆ ರೂಪುಕೊಟ್ಟ ಹಿರಿಮೆಯು ಈ ವಾತಾವರಣದಲ್ಲಿ ಸೇರಿಕೊಂಡಿದೆ. ಆರೋಗ್ಯಕ್ಕೆ ಬಹಳ ಯೋಗ್ಯವಾದ ಕೆರೆಯ ತೀರ್ಥವು ಹಲವು ರೋಗ ಶಮನಿಯಾಗಿದೆಯೆಂದೂ ಹಲವರ ಅಭಿಮತ.

ಕೊನೆಯ ಮಾತು:

ಆತ್ಮ ಸೌಂದರ್ಯವನ್ನೂ ಪಾವಿತ್ರ್ಯವನ್ನೂ ಕಡೆಗಣಿಸಿ ಕಡಿವಾಣ ಇಲ್ಲದ ಕುದುರೆಯಂತೆ ಎತ್ತಲೋ ಓಡುತ್ತಿರುವ ಈಗಿನ ವಿಜ್ಞಾನ ಯುಗದಲ್ಲಿ ದುರಂತಗಳ ಸರಮಾಲೆಯನ್ನು ನಾವು ಅನುಭವಿಸುತ್ತಿದ್ದೇವೆ. ಮನುಷ್ಯ ಮನಸ್ಸಿನ ಅಂಧಕಾರವನ್ನು ಆಧ್ಯಾತ್ಮಿಕ ಚಿಂತನೆಯ ಮೂಲಕ ದೈವೀಕ ಅನುಷ್ಠಾನಗಳ ಮೂಲಕ ತಯಾರಿಸಿದ ಆಯುಧಗಳಿಂದ ನಿವಾರಣೆ ಮಾಡಬೇಕಾಗಿದೆ. ಮೋಕ್ಷವೆಂಬ ಜೀವನದ ಪರಮಲಕ್ಷ್ಯದ ಕಡೆಗೆ ಮನುಷ್ಯನು ಕಾರ್ಯಪ್ರವೃತ್ತನಾಗಬೇಕಿದೆ. ಪರಸ್ಪರ ಸ್ನೇಹ, ಸೌಹಾರ್ದ, ತಿಳುವಳಿಕೆಗಳಿಂದ ಮಾತ್ರವೇ ಈ ಲಕ್ಷ್ಯ ಪ್ರಾಪ್ತಿಯಾಗಲು ಸಾಧ್ಯ. ಅಂತಹ ಮನೋಭಾವ ರೂಪುಗೊಳ್ಳಬೇಕಾಗಿದೆ. ಇಂತಹ ದಿವ್ಯ ಸಾನ್ನಿಧ್ಯಗಳು ಪೂರಕವಾಗಿ ನಿಲ್ಲಬೇಕಾಗಿವೆ. ಅಂತಹ ಅನುಭವ ನಮ್ಮದಾಗಬೇಕಾದರೆ ಆಧ್ಯಾತ್ಮಿಕ ಚಿಂತನೆಯೂ ಸಂಶೋಧನೆಯೂ ನಡೆಯಬೇಕು.

ಲೋಕಾಃ ಸಮಸ್ತಾ ಸುಖಿನೋ ಭವಂತು

ಭದ್ರಂ ಶುಭಂ ಮಂಗಳಂ