Contact Us : 04998-214360      Email Us : info@ananthapuratemple.com

ಚರಿತ್ರೆ

 

 

ಧನ್ಯತೆಯ ಆ ನಿಮಿಷ:

ವಾಸ್ತು ಶಿಲ್ಪಿಗಳಾದ ಶ್ರೀ ಪರಮೇಶ್ವರನ್ ನಂಬೂದಿರಿಯವರಿಂದ ಆಜ್ಞೆಯನ್ನು ಸ್ವೀಕರಿಸಿ, ನಿಯೋಗವು ಬ್ರಹ್ಮಮಂಗಲಕ್ಕೆ ಪಯಣ ಬೆಳೆಸಿತು. ವಯೋವೃದ್ಧರಾದ(83 ವರ್ಷ) ಶ್ರೀ ಸುಬ್ರಹ್ಮಣ್ಯ ಆಚಾರಿಯವರು ಮತ್ತು ಮಕ್ಕಳ ಸಮಕ್ಷಮದಲ್ಲಿ ಬಂದ ಕಾರ್ಯದ ಪೂರ್ಣ ರೂಪವನ್ನು ಅವರ ಮುಂದಿಟ್ಟೆವು. ಧನ್ಯ ಮುಹೂರ್ತಕ್ಕೆ  ನಾಂದಿಯೋ ಎಂಬಂತೆ, ನಮ್ಮ ಅಗತ್ಯಗಳನ್ನು ಕೇಳುತ್ತಾ ಈ ವೃದ್ಧನ ಕಣ್ಣಲ್ಲಿ ನೀರು ತೊಟ್ಟಿಕ್ಕುವುದನ್ನು ಗಮನಿಸಿದೆವು. ಮಕ್ಕಳು ಯಾವುದೋ ಅವ್ಯಕ್ತ ಆನಂದದಿಂದ ತೆಲಾಡುವಂತೆ ನಮಗನಿಸಿತು. ನಮ್ಮ ಬರುವಿಕೆಯ ಉದ್ದೇಶವನ್ನು ವಿವರಿಸಿದ ನಂತರ, ಕೆಲಕಾಲ ಮೌನವನ್ನಾಚರಿಸಿದ ಶ್ರೀ ಸುಬ್ರಹ್ಮಣ್ಯ ಆಚಾರಿಯವರು ಈ ರೀತಿ ಹೇಳಿದರು. “ಇವತ್ತಿಗೆ ಒಂದು ವಾರವಾಗಿರಬಹುದು. ನಾನು ಮತ್ತು ಮಕ್ಕಳು ನಮ್ಮ ಕೆಲಸಕಾರ್ಯಗಳ ಬಗ್ಗೆ ಯಾವಾಗಲೂ ಚರ್ಚಿಸುವುದು ವಾಡಿಕೆ. ಕಳೆದ ಚರ್ಚೆಯಲ್ಲಿ ನಾನು ಇವರಲ್ಲಿ ಒಂದು ವಿಷಯವನ್ನು ತಿಳಿಸಿದ್ದೇನೆ. ಮಕ್ಕಳೇ, ನಾವು ಎಲ್ಲಾ ಬಗೆಯ ಶಿಲ್ಪಗಳನ್ನೂ ಕರಗತ ಮಾಡಿಕೊಂಡಿದ್ದೇವೆ. ಹಲವು ದೇವಸ್ಥಾನಗಳಿಗೆ ವಿಗ್ರಹಗಳನ್ನು ಮಾಡಿಕೊಟ್ಟಿದ್ದೇವೆ. ಲೋಹ, ಶಿಲೆ, ದಾರು, ಮೃತ್ತಿಕಾ ಮೊದಲಾದುವುಗಳಲ್ಲದೆ ಇನ್ನೂ ಬೇರೆ ತರದ ವಿಗ್ರಹಗಳು ನಮ್ಮ ಕಮ್ಮಟದಲ್ಲಿ ರೂಪುಗೊಂಡಿವೆ. ವಿಗ್ರಹಗಳು ಇಷ್ಟಕ್ಕೇ ನಿಲ್ಲುವುದಿಲ್ಲ. ನಮ್ಮ ಪೂರ್ವಿಕರು ಹತ್ತು ತಲೆಮಾರಿನಿಂದೀಚೆಗೆ ‘ಕಡುಶರ್ಕರ ಪಾಕ’ದಿಂದ ವಿಗ್ರಹ ನಿರ್ಮಿಸಿದ್ದಾಗಿ ತಿಳಿದು ಬಂದಿಲ್ಲ. ಆ ಒಂದು ವಿಧಾನವೂ ಶಿಲ್ಪಶಾಸ್ತ್ರದಲ್ಲಿ ಸೇರಿಕೊಂಡಿದೆ. ಯಾರಾದರೂ ಬಂದು ನಮ್ಮ ಸೇವೆಯನ್ನು ಬಯಸಿದ್ದಲ್ಲಿ ನೀವು ಖಂಡಿತವಾಗಿಯೂ ಅದನ್ನು ಮಾಡಿಕೊಡಬೇಕು. ನನಗಂತೂ ಆ ಭಾಗ್ಯ ಸಿಕ್ಕಿಲ್ಲ.” ಈ ಮಾತು ಈಗ ನೆನಪಾಯ್ತು. ನನಗೇ ಆ ಭಾಗ್ಯ ಬಂತಲ್ಲ ಎಂದರಿತು ಭಾವಪರವಶನಾದೆ ಎಂದು ಸಂತೋಷದಿಂದ ಹೇಳಿದರು. ಅಲ್ಲದೆ ಹತ್ತು ತಲೆಮಾರಿನಿಂದಲೂ ಜೋಪಾನವಾಗಿಟ್ಟುಕೊಂಡಿರುವಂತಹ  ‘ಕಡುಶರ್ಕರ ಯೋಗ ವಿಧಿ ವಿಧಾನಂ’ ಎಂಬ ಸಂಸ್ಕೃತದಲ್ಲಿರುವ ಗ್ರಂಥವನ್ನೂ  ತೋರಿಸಿದರು.  ದೇವರ ಲೀಲೆಯ ಪರಾಕಾಷ್ಠೆ! ಧನ್ಯ ನಿಮಿಷದ ಮೌನ! ಒಳ್ಳೆ ಕೆಲಸಕ್ಕೆ ದೈವೀಕ ಚಿಂತನೆ! ಕಾಲಚಕ್ರದ ಉರುಲಾಟಕ್ಕಿರುವ ಅಗೋಚರ ಶಕ್ತಿಯ ಇರವನ್ನು ಅನುಭವಿಸಿದೆವು.

ದೇವರ ಆಟ:

ದೇವಸ್ಥಾನಕ್ಕೆ ಶಿಲ್ಪಿಗಳನ್ನು ಸ್ವಾಗತಿಸಿದೆವು. ವಾಸ್ತುಶಿಲ್ಪಿ ಮತ್ತು ವಿಗ್ರಹ ಶಿಲ್ಪಿಗಳ ಆಗಮನವಾಯ್ತು. ಗರ್ಭಗೃಹದ ವೀಕ್ಷಣೆ, ರಚನೆಯ ವೈಶಿಷ್ಟ್ಯಗಳ ಮನವರಿಕೆ. ಕೊನೆಗೊಂದು ಪ್ರಶ್ನೆ. ‘ಎಷ್ಟು ಎತ್ತರದ, ಗಾತ್ರದ ವಿಗ್ರಹ ಇಲ್ಲಿ ಅಗತ್ಯವಿದೆ?’ ಅಲ್ಲೂ ನಮ್ಮಿಂದ ಉತ್ತರಿಸಲಾಗಲಿಲ್ಲ. ಕಾರಣ, ವಿಗ್ರಹದ ಗಾತ್ರ ಆಕಾರಗಳ ಕಲ್ಪನೆ ಏನೇನೂ ಇರಲಿಲ್ಲ. ನಾವೂ ಕೈ ಮುಗಿದು ಹೇಳಿದೆವು. ‘ನಮಗೆ ಗೊತ್ತಿಲ್ಲ. ಚಿಂತಾಕ್ರಾಂತರಾದ ವಾಸ್ತುಶಿಲ್ಪಿ ಮತ್ತು ವಿಗ್ರಹ ಶಿಲ್ಪಿಗಳು ಪರಸ್ಪರ ಏನೋ ಮಾತನಾಡಿಕೊಂಡರು. ಕೊನೆಗೊಂದು ಪ್ರಶ್ನೆ: ಮೊದಲಿನ ಕದುಶರ್ಕರ ಪಾಕದ ವಿಗ್ರಹವನ್ನು ಏನು ಮಾಡಿದಿರಿ! ಉತ್ತರ:ಜಲಾಧಿವಾಸ ಮಾಡಲಾಗಿದೆ. ಪ್ರಶ್ನೆ: ಎಲ್ಲಿ ? ಜಲಾಧಿವಾಸ ಮಾಡಿದ ಕೆರೆಯ ಭಾಗವನ್ನು ಬೆರಳಿನಿಂದ ತೋರಿಸಿದೆವು. ‘ನೀರಲ್ಲಿ ಮುಳುಗುವವರು ಯಾರಾದರೂ ಇದ್ದಾರೆಯೇ’-ಮರುಪ್ರಶ್ನೆ. ಆದರೆ ಕೆರೆಯಲ್ಲಿ ಮೊಸಳೆ ಇದೆಯಲ್ಲಾ ಎಂದು ಉತ್ತರಿಸಿದಾಗ ಅವರು ದಂಗಾದರು. ಕೆರೆಯಲ್ಲಿ ಮೊಸಳೆ ಇದೆ ಎಂದು ಊಹಿಸಲೂ ಸಾಧ್ಯವಾಗದ ಸಂಗತಿಯನ್ನು ಕೇಳಿ ದಂಗಾಗಿ ಬಿಟ್ಟರು. ಕೊನೆಗೂ ನಿರಾಶರಾಗದೆ ಪ್ರೋತ್ಸಾಹದಾಯಕ ದಾಟಿಯಲ್ಲಿ ಹೇಳಿದರು. ‘ದೇವರ ಮೊಸಲೆಯಲ್ಲವೇ? ದೇವರ ಕೆಲಸಕ್ಕೆ ಅದು ಸಹಕರಿಸೀತು’ ಎಂಬ ಮಾತನ್ನು ಕೇಳಿದಾಕ್ಷಣ ಭಕ್ತರೊಬ್ಬರು ಕೆರೆಗೆ ದುಮುಕಿಯೇ ಬಿಟ್ಟರು. ಮುಳುಗಿದರು. ಅವರು ಮೇಲಕ್ಕೆ ಬಂದಾಗ ಅವರ ಕೈಯಲ್ಲಿ ಉದ್ದದ ಮರದ ಒಂದು ತುಂಡು!

ನೋಡಿದಾಕ್ಷಣ ಶಿಲ್ಪಿಗಳಿಬ್ಬರೂ ‘ಸಾಕು’ ಅದುವೇ ನಮಗೆ ಬೇಕಾದುದು. ಅದುವೇ ‘ಶೂಲ’ ಎಂದೇನೋ ಅವರ ಭಾಷೆಯಲ್ಲಿ ಹೇಳಿದರು. ದಡಕ್ಕೆ ತಲುಪಿದ ಶೂಲವನ್ನು ಪರೀಕ್ಷಿಸಿ ಅದರ ವೈಶಿಷ್ಟ್ಯವನ್ನು ಎಲ್ಲರಿಗೂ ಮನನ ಮಾಡಿಕೊಟ್ಟರು. ಇದು ಸಿಕ್ಕಿದರೆ, ವಿಗ್ರಹದ ತೋರ, ಎತ್ತರ, ಅಗಲಗಳೆಲ್ಲವೂ ಲೆಕ್ಕ ಮಾಡಿ ಪಡೆಯಬಹುದೆಂದರು. ಮತ್ತೊಮ್ಮೆ ‘ಸಂಶಯಕ್ಕೆ ತೆರೆ’. ನಿರರ್ಗಳವಾಗಿ ನಿಟ್ಟುಸಿರುಬಿಟ್ಟ ನಿಮಿಷಗಳು. ಖಂಡಿತಾ ಮುಂದೆ ಏನೋ ಆಗುವುದರ ಶುಭ ಸೂಚನೆ ಎಂದು ಸಮಾಧಾನ ಪಟ್ಟೆವು. ಮುಂದೆ ನಾಲ್ಕು ವರ್ಷಗಳಲ್ಲಿ ವಿಗ್ರಹ ನಿರ್ಮಾಣದ ಕೆಲಸಗಳು ನಡೆದದ್ದು ನಮ್ಮ ಕಣ್ಣ ಮುಂದೆಯೇ.

ಏನಿದು ಕಡುಶರ್ಕರಪಾಕ:

ಮುನಿಶ್ರೇಷ್ಠರ ಸಿದ್ಧಾಂತದ ಆಧಾರದಲ್ಲಿ ರೂಪುಗೊಂಡ ವಿಗ್ರಹ ನಿರ್ಮಾಣ ವಿಧಾನವಿದು. ಜೀವಂತ ಮನುಷ್ಯ ಶರೀರವೇ ವಿಗ್ರಹವೆಂದು ಸಂಕಲ್ಪಿಸಿ, ಮನುಷ್ಯ ಶರೀರದಲ್ಲಿರುವ ಎಲ್ಲಾ ಭಾಗಗಳನ್ನು ಸಾಂಕೇತಿಕವಾಗಿ ಗುರುತಿಸಿ, ಪೂರ್ಣರೂಪವನ್ನು ಕೊಡುವುದೇ ಇದರ ಪ್ರಧಾನ ಆಶಯ. ಜೀವಂತ ಮನುಷ್ಯ ಶರೀರವು ಕಾರ್ಯ ಪ್ರವೃತ್ತವಾಗಬೇಕಾದರೆ ಎಲ್ಲಾ ಅಂಗಾಂಗಗಳೂ ಸರಿಯಾಗಿದ್ದು, ಆರೋಗ್ಯ ಪೂರ್ಣವಾಗಿದ್ದರೆ ಮಾತ್ರ ಸಾಧ್ಯ. ಅಂತೆಯೇ ಈ ವಿಗ್ರಹಗಳು ಕೂಡಾ. ಆರೋಗ್ಯವಂತ ಮನುಷ್ಯ ಶರೀರವೆಂಬ ಭಾವನೆ ಇದರ ನಿರ್ಮಾಣದ ತಳಹದಿ. ಶಾಸ್ತ್ರದಲ್ಲಿ ಇದನ್ನು ‘ವೈದ್ಯೋನಾರಾಯಾಣಃ’ ಎಂದೂ ಕರೆಯುವುದಿದೆ. ತಲೆ, ದೇಹ, ಕೈಕಾಲುಗಲೆಂಬ ಬಾಹ್ಯ ಅಂಗಗಳು ಮಾತ್ರ ಇದ್ದರೆ, ಶರೀರ ಶಾಸ್ತ್ರ ಪೂರ್ಣತೆಗೆ ತಲುಪಲು ಅಸಾಧ್ಯ. ಶರೀರದಲ್ಲಿರುವ ಅಸ್ತಿಪಂಜರ (ಎಲುಬುಗೂಡು), ನರನಾಡಿಗಳ, ಮಾಂಸ, ಆಭರಣಗಳೆಲ್ಲವೂ ಈ ವಿಗ್ರಹದ ಸವಿಶೇಷತೆಗಳು. ಸುಮಾರು ಅರುವತ್ತನಾಲ್ಕು ಆಯುರ್ವೇದ ಔಷಧಿಗಳನ್ನು ಒಟ್ಟು ಸೇರಿಸಿ 108 ವಸ್ತುಗಳ ಉಪಯೋಗದೊಂದಿಗೆ ವಿಗ್ರಹದ ಕೆಲಸವೂ ಪೂರ್ತಿಯಾಗಬೇಕಾಗಿದೆ. ಅರುವತ್ತನಾಲ್ಕು ಸಸ್ಯಜನ್ಯ, ಪ್ರಾಣಿಜನ್ಯ ಔಷಧಿಗಳು, ಉಳಿದವು ನಿರ್ಮಾಣಕ್ಕೆ ಅಗತ್ಯವಿರುವ ಉಪಕರಣಗಳು. ಉಪಕರಣಗಳಲ್ಲಿ ಅಗತ್ಯವಾಗಿರುವವುಗಳಲ್ಲಿ ಮಣ್ಣಿನ ಮಡಕೆ, ಅರೆಯುವ ಕಲ್ಲು, ಕತ್ತಿ, ಕೊಪ್ಪರಿಗೆ, ಲೇಪನಕ್ಕಿರುವ ಸಾಮಗ್ರಿಗಳು, ಪ್ರತ್ಯೇಕ ಒಲೆ, ತಾಮ್ರದ ತಗಡು ಮತ್ತು ಆಣಿ, ಚಿನ್ನ, ಬೆಳ್ಳಿ, ನೂಲು, ಹಗ್ಗ, ಹುಡಿಮಾಡುವ ಪಾತ್ರೆ, ಪಾಕ ಬರಿಸುವ ಪತ್ರೆ, ತೂತಿರುವ ಒರೆಸು ಬಟ್ಟೆ, ಕಲ್ಲುಗಳು, ಮರ ಸೇರಿವೆ. ತಂತ್ರಿಗಳು ನಿಶ್ಚಯಿಸಿದ ಜಾಗದಲ್ಲಿ ತಾಂತ್ರಿಕ ವಿಧಾನಗಳ ಪ್ರಕಾರ ಪ್ರತಿಷ್ಠೆ ಮಾಡುವುದು. ಅಡಿಭಾಗಕ್ಕೆ ಶಂಖದ ಹುಡಿಯನ್ನು ಹರಡಿ, ಗಂಗಾಜಲದಿಂದ ಪ್ರೋಕ್ಷಣೆ ಮಾಡಿ ಈ ಮುರಕಲ್ಲಿನಿಂದ ಮಾಡಿದ ಪೀಠವನ್ನು ಇಡುವುದು. ಪೀಠದ ಕಲ್ಲಿಗೆ ಯಾವುದೇ ರೀತಿಯ ಚಲನೆಯುಂಟಾಗದಂತೆ ಶಂಖದ ಹುಡಿಯನ್ನು ಹರಡುತ್ತಾರೆ. ಇದುವೇ ‘ಪೀಠ ಪ್ರತಿಷ್ಠೆ’.

ಪಾಕಕ್ಕೆ ಉಪಯೋಗಿಸುವ ವಸ್ತುಗಳು:

ತ್ರಿವೇಣಿ ಸಂಗಮದ ಮಣ್ಣು, ಗಂಗಾಮಣ್ಣು, ಗಂಗಾಜಲ, ತ್ರಿವೇಣಿ ಸಂಗಮದಿಂದ ಕೆಂಪುಕಲ್ಲು, ಕಪ್ಪುಕಲ್ಲು, ಕಾವಿಕಲ್ಲು, ಕೋಝಿಪ್ಪರಲ್ (ಭಾರತ ಹೊಳೆಯ ಆಳವಾದ ಪ್ರದೇಶದಲ್ಲಿ ಕಂಡುಬರುವ ಕೆಸರು – ಇದು ಚಿಕ್ಕ ಚಿಕ್ಕ ಸ್ಫಟಿಕದಂತೆ ಗೋಚರಿಸುತ್ತದೆ), ಮುತ್ತು ಚಿಪ್ಪಿ, ಗಾಳಿಸಿದ ಹೊಯ್ಗೆ, ಕಸ್ತೂರಿ ಗೊರೋಚನ – ಇವುಗಳೆಲ್ಲಾ ಹೊರಪ್ರದೇಶಗಳಿಂದ ಸಂಗ್ರಹಿಸಿದವುಗಳು. ಅದೇ ರೀತಿ ಬಿಲ್ವಪತ್ರೆ ಕಾಯಿಯ ಮಯಣ! ಹಲಸಿನ ಮಯಣ, ಗುಲ್ ಗುಲ್, ಕುಂದಿರಿಕಾ ಮೊದಲಾದುವುಗಳು ಪ್ರಕೃತಿಯಿಂದ ಲಭಿಸುವ ಮಯಣ ವಸ್ತುಗಳು. ಚಾಂಚಲ್ಯಂ ಕೊಲರಕ್ಕು, ಯವ, ಗೋಧಿ, ಉದ್ದು, ಇಂಗಿನ ಎಲೆ, ಪೋನ್ನಾರಿತ್ತಾರಂ, ಅಕಿಲ್, ತ್ರಿಪ್ಪಲಿ, ಕರಿಮೆಣಸು, ಅರಸಿನ, ಸಾಸಿವೆ,, ಶ್ರೀ ಗಂಧ, ರಕ್ತ ಚಂದನ, ಶುಂಠಿ, ಮೊದಲಾದ ಔಷಧಿ ಗುಣವುಳ್ಳ ಪ್ರಕೃತಿಯಿಂದ ಲಭಿಸುವ ಮೂಲವಸ್ತುಗಳು. ಪ್ರಾಣಿಜನ್ಯ ವಸ್ತುಗಳು: ದನದ ಹಾಲು, ಹೊಸರು, ತುಪ್ಪ, ಗೊರೋಚನ, ಕಸ್ತೂರಿ, ಶಂಖ ಮತ್ತು ಮುತ್ತು ಚಿಪ್ಪಿ. ಅನೆ ಕುಟ್ಟಿದ ಮಣ್ಣು, ಬಸವ ಕುಟ್ಟಿದ ಮಣ್ಣು, ಏಡಿ ಮಣ್ಣು, ನೇಗಿಲ ಮಣ್ಣು, ಹುತ್ತದ ಮಣ್ಣು, ಸಮುದ್ರ ಮಣ್ಣು, ಗಂಗಾ ಮಣ್ಣು ಮೊದಲಾದ ವಿಶೇಷ ಮಣ್ಣುಗಳೂ ಬೇಕಾಗಿವೆ.

ಈ ಮಣ್ಣಿನ ವಿಶೇಷತೆ ಏನು?:

ಆನೆಗೆ ಮದ ಬಂದಾಗ ತನ್ನ ದಾಡೆಯಿಂದ ನೆಲವನ್ನು ತಿವಿಯುವುದಿದೆ. ಎಲ್ಲಾ ಸ್ಥಳಗಳಲ್ಲಿಯೂ ಆನೆ ದಾಡೆಯಿಂದ ತಿವಿಯಲಾರದು. ಆ ಜಾಗದ ಪ್ರತ್ಯೇಕತೆಯನ್ನು ಆಘ್ರಾಣಿಸಿ ನೋಡಿದಾಕ್ಷಣ ತಿವಿಯಲಿರುವ ಪ್ರೇರಣೆ ಆನೆಗುಂಟಾಗುವುದು. ಆ ವಿಶಿಷ್ಟ ಮಣ್ಣನ್ನು ಸಂಗ್ರಹಿಸಿ ಈ ಪಾಕಕ್ಕೆ ಉಪಯೋಗಿಸುವುದಾಗಿದೆ. ಬಸವ ಕುಟ್ಟಿದ ಮಣ್ಣಿನ ವಿಶೇಷತೆಯೂ ಅದೇ ಆಗಿದೆ. ಸಮುದ್ರ ಕಿನಾರೆಯಲ್ಲಿ ತೆರೆಯೊಂದಿಗೆ ನೆಲಕ್ಕಪ್ಪಳಿಸುವ ಏಡಿಗಳು ನೆಲದಲ್ಲಿಯೇ ಬಾಕಿಯಾಗುವುದುಂಟು. ಆಗ ಪ್ರತ್ಯೇಕ ಪರಿಮಳದ ಜಾಗವನ್ನು ಆರಿಸಿ ಅಲ್ಲಿ ತೂತು ಮಾಡಿ ತನ್ನ ವಾಸವನ್ನಾರಂಬಿಸುವುದು. ಆ ಬಿಳದೊಳಗಿನಿಂದ ಒಂದು ಹಿಡಿ ಮಣ್ಣು ತೆಗೆಯಬೇಕು. ಆ ಮಣ್ಣಿನಲ್ಲೂ ಔಷಧಿ ಗುಣವಿರುವುದು. ಗದ್ದೆಯಲ್ಲಿ ಉಳುವಾಗ ನೇಗಿಲಲ್ಲಿ ಅಂಟಿನಿಲ್ಲುವ ಮಣ್ಣಿಗೂ ಪ್ರತ್ಯೇಕತೆ ಇದೆ. ಈ ಮಣ್ಣಿಗೆ ವಿಶೇಷ ಅಂಟು ಸ್ವಭಾವವಿದ್ದು, ನೇಗಿಲಿನಿಂದ ಕೆರೆದು ಸಂಗ್ರಹಿಸಬೇಕಾಗುವುದು. ಮೇಲೆ ಹೇಳಿದ ವಿಶೇಷ ವಸ್ತುಗಳನ್ನು ಸಂಗ್ರಹಿಸಿ, ಮಣ್ಣಿನ ಮಡಕೆಯಲ್ಲಿ ಶೇಖರಿಸಿಡಲಾಗುವುದು.ಎಲ್ಲಾ ವಸ್ತುಗಳನ್ನೂ ಶುದ್ಧೀಕರಿಸಿ ಹುಡಿ ಮಾಡಬೇಕಾಗುವುದು. ಹುಡಿ ಮಾಡುವ ಅಕಾರ್ಯ ಕೂಡಾ ಬಹಳ ಗೌಪ್ಯವಾಗಿಟ್ಟುಕೊಳ್ಳಬೇಕು. ಕಾರಣ, ಅಶುದ್ಧ ವಸ್ತುಗಳು ಬೆರಕೆಯಾಗದಂತೆಯೂ, ಇನ್ನೊಬ್ಬರು ಅದರ ಬಗ್ಗೆ ಹೆಚ್ಚೇನೂ ಕೇಳದಂತೆಯೂ ಆಗಿದೆ. ಹುಡಿಮಾಡುವ ವ್ಯಕ್ತಿಯು ಮಿಂದು ಶುಚಿರ್ಭೂತನಾಗಿ ಏಕಚಿತ್ತದಿಂದ ಈ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಮಾತು ಸಲ್ಲ. ಬೆವರನ್ನು ಜಾಗ್ರತೆ ವಹಿಸಬೇಕು. ಈ ವಸ್ತುಗಳ ಸಂಗ್ರಹವಾದ ಕೂಡಲೇ ಪಾಕದ ಬಗ್ಗೆ ಮತ್ತು ವಿಗ್ರಹ ನಿರ್ಮಾಣದ ಹತ್ತು ಹಲವು ವಿಧಾನಗಳ ಮೂಲಕ ಮುಂದುವರಿಯಬೇಕು.

ಪೀಠದ ತಯಾರಿ :

ಕೆಂಪುಕಲ್ಲಿನ ಪೀಠವನ್ನು ಉಪಯೋಗಿಸುವುದಾಗಿದೆ. ಯೋಗ್ಯವಾದ ಸ್ಥಳದಿಂದ ನಿಶ್ಚಿತ ಅಳತೆಯ ಕಲ್ಲನ್ನು ಕಡಿದು ತೆಗೆಯಬೇಕು. ಕಲ್ಲನ್ನು ಬಹಳ ದೈವೀಕ ಭಾವನೆಯಿಂದ ಕ್ಷೇತ್ರಾಂಗಣಕ್ಕೆ ತಂದು ಕೆಲಸವನ್ನು ಪ್ರಾರಂಭಿಸುವುದು. ಎಲ್ಲಾ ಬದಿಗಳಿಂದಲೂ ಕೆತ್ತಿ ನಯಗೊಳಿಸಿದ ನಂತರ, ಶೂಲದ ಗಾತ್ರಕ್ಕನುಸರಿಸಿದ ರಂಧ್ರವನ್ನು ಪೀಠದ ಕಲ್ಲಿನ ಮಧ್ಯಭಾಗದಲ್ಲಿ ಕೊರೆಯಬೇಕು. ಈಗ ಪೀಠವು ಪ್ರತಿಷ್ಠೆಗೆ ಯೋಗ್ಯವಾಗುವುದು. ಈ ಕಲ್ಲನ್ನು ಶುಭ ಮುಹೂರ್ತದಲ್ಲಿ ಗರ್ಭಗೃಹದ ಒಳಗೆ, ತಂತ್ರಿಗಳು ನಿಶ್ಚಯಿಸಿದ ಜಾಗದಲ್ಲಿ ತಾಂತ್ರಿಕ ವಿಧಾನಗಳ ಪ್ರಕಾರ ಪ್ರತಿಷ್ಠೆ ಮಾಡುವುದು. ಅಡಿಭಾಗಕ್ಕೆ ಶಂಖದ ಹುಡಿಯನ್ನು ಹರಡಿ, ಗಂಗಾಜಲದ ಪ್ರೋಕ್ಷಣೆ ಮಾಡಿ ಈ ಕಲ್ಲನ್ನು ಇಡುವುದು. ಪೀಠದ ಕಲ್ಲಿಗೆ ಯಾವುದೇ ರೀತಿಯ ಚಲನೆಯುoಟಾಗದಂತೆ ಶಂಖದ ಹುಡಿಯನ್ನು ಹರಡುತ್ತಾರೆ. ಇದುವೇ ‘ಪೀಠ ಪ್ರತಿಷ್ಠೆ’.

ಏನಿದು ಶೂಲ?:

ಕಡುಶರ್ಕರ ಪಾಕದ ವಿಹ್ರಹ ನಿರ್ಮಾಣದಲ್ಲಿ ಶರೀರ ಶಾಸ್ತ್ರದ ತತ್ವಗಳನ್ನು ಪಾಲಿಸಲಾಗುವುದೆಂದು ಮೊದಲೇ ಹೇಳಿಯಾಗಿದೆಯಷ್ಟೇ.? ಮನುಷ್ಯ ಶರೀರದಲ್ಲಿರುವ ಅಸ್ತಿಪಂಜರವನ್ನು ಗಡುಸಾದ ದ್ರವ್ಯದಿಂದ ಮಾಡಬೇಕಾಗಿದೆ. ಇದರಲ್ಲಿ ಸಾಂಕೇತಿಕವಾಗಿ 206 ಎಲುಬುಗಳು ಗುರುತಿಸಿಕೊಳ್ಳಬೇಕು. ತಲೆಬುರುಡೆ, ಕೈಕಾಲುಗಳ ಎಲುಬುಗಳು, ಹೊಟ್ಟೆಯ ಭಾಗದ ಎಲುಬುಗಳು, ತೊಡೆ ಎಲುಬು, ಕಾಲು ಎಲುಬು, ಬೆರಳುಗಳೇ ಮೊದಲಾದ ಭಾಗದಲ್ಲಿ ಎಲುಬುಗಳನ್ನು ಮಾಡಬೇಕಾಗಿದೆ. ಈ ಮರ ಕೂಡಾ ಔಷಧ ಗುಣವುಳ್ಳ ಕದಿರ ಮರ(ಕಾಟಿ ಮರ)ದಿಂದ ತಯಾರಿಸಲಾಗುತ್ತದೆ.

ಕದಿರ ಮರದ ಆಯ್ಕೆ:

ಶ್ರೀ ದೇವರ ವಿಗ್ರಹ ನಿರ್ಮಾಣಕ್ಕೆ ದೊಡ್ಡದಾದ, ಆರೋಗ್ಯವಂತ, ಹಸಿರಾಗಿರುವ ಕದಿರ ಮರವೊಂದು ಬೇಕಾಗಿ ಬರುವುದೆಂದು ವಿಗ್ರಹ ಶಿಲ್ಪಿಗಳು ಹೇಳಿದರು. ಈ ಮರದ ಅನ್ವೇಷಣೆಯಲ್ಲಿ ಕಾರ್ಯಕರ್ತರು ಜಾಗೃತರಾದರು. ಹತ್ತು ಹಲವು ಮರಗಳನ್ನು ನೋಡಿದೆವು. ಒಂದಲ್ಲ ಒಂದು ಕಾರಣಕ್ಕೆ ಮರವನ್ನು ಬಿಡಬೇಕಾಯ್ತು. ಮರವೊಂದಕ್ಕೆ 50 ಸಾವಿರ ರೂ ಕೊಡಬೇಕೆಂದವರೂ ಇದ್ದಾರೆ. ಮರ ಸಿಗದೇ ಇದ್ದು, ಚಿಂತಾಕ್ರಾಂತರಾಗಿ ಕೆಲವು ದಿನಗಳನ್ನು ಸಮಿತಿಯ ಸದಸ್ಯರು ಕಳೆದರು.

ಒಂದು ದಿನ ಪೈವಳಿಕೆ ಭಾಗದಿಂದ ಶ್ರೀ ಮುಂಡ ಎಂಬವರು ದೇವಸ್ಥಾನಕ್ಕೆ ಬಂದಿದ್ದರು. ಬಂದವರೇ, ಕದಿರ ಮರದ ಅಗತ್ಯವನ್ನು ವಿವರವಾಗಿ ಕೇಳಿ ತಿಳಿದುಕೊಂಡರು. ಕೂಡಲೇ ಒಂದು ಮಾತನ್ನು ತಮ್ಮ ತುಳು ಭಾಷೆಯಲ್ಲಿಯೇ ಈ ರೀತಿ ಹೇಳಿದರು -“ಎಂಕ್ಲೆನ ಬಿತ್ತಲ್ ಡ್ ಮಲ್ಲ ಒಂಜಿ ಕಾಚಿ ಮರ ಉಂಡು. ಸುಮಾರ್ ಜನ ಬತ್ತೆರ್. ಕ್ರಯ ಸರಿಯಾತಿಜಿ, ಅಂಚ ಏರೆಗ್ಲಾ ಕೊರ್ತಿಜಿ. ಇತ್ತೆ ದೇವೆರ್ನ ಅಗತ್ಯ ಅತ್ತೋ…ಅಂಚಣೆ ದಾನ್ನೋ ಅವು ಪಿದಾಯಿ ಪೋವಂದೆ…ನಿಕ್ಲು ಬಲ್ಮೆಡ್ ತೂಲೆ… ಆಪುಂಡ ಮರ ಕೊರೋಲಿ” ಎಂದರು. ಕ್ರಯ ಕೇಳಿದಾಗ ಏನೂ ಹೇಳಲಿಲ್ಲ. “ನಿಕ್ಲೆಗ್ ಪಿಂದ್ ದ್ ಕೊರ್ನವ್ ಯಾವು” ಎಂದರು. ಬಹಳ ಉತ್ಸುಕರಾಗಿಯೇ ಪೈವಳಿಕೆಗೆ ಮರ ನೋಡಲು ಹೋದೆವು. ಎಲ್ಲಾ ಲಕ್ಷಣ ಹೊತ್ತ ಆ ಮರವು ನಮ್ಮನ್ನು ನೋಡಿ ಕೈ ಬೀಸಿ ಕರೆಯುವಂತೆ ಭಾಸವಾಯಿತು. ಪ್ರಶ್ನೆಯಲ್ಲಿ ಕೇಳಿದಾಕ್ಷಣ ದೈವಾನುಗ್ರಹ ಪೂರ್ತಿ ಇರುವ ಮರ ಅದು….ಅದನ್ನೇ ಕಡಿಯಿರಿ ಎಂದರು. ಮುಂದೊಂದು ದಿನ ವಿಧಿವತ್ತಾಗಿ ಮರವನ್ನು ಕಡಿದು, ಘೋಷಯಾತ್ರೆಯೊಂದಿಗೆ ಶ್ರೀ ಸನ್ನಿಧಿಗೆ ಕ್ಷೇತ್ರ ತಂತ್ರಿ ಸಮೇತ ಮರವನ್ನು ತರಲಾಯ್ತು. ಮರವು ನೆಲಕ್ಕಪ್ಪಳಿಸಿದ ರೀತಿಯಲ್ಲಿ ಲೆಕ್ಕಾಚಾರವಿರುವುದರಿಂದ ಅದೆಲ್ಲವನ್ನೂ ಬರೆದಿಟ್ಟುಕೊಂಡೆವು. ಪೂರ್ಣಾನುಗ್ರಹದ ದ್ಯೋತಕವಾಗಿ ಎಲ್ಲವೂ ಸಮಾಪ್ತಿಯಾಯಿತು.

            ಈ ಘಟನೆಯಿಂದ ಅಷ್ಟಮಂಗಲದಲ್ಲಿ ಹೇಳಿದ ಒಂದು ಮಾತಿನ ನೆನೆಪಾಯ್ತು.. ” ಈ ವಿಗ್ರಹ ನಿರ್ಮಾಣ ಕಾರ್ಯದಲ್ಲಿ ಚಾಂಡಾಲನಿಂದ ಹಿಡಿದು ಮಹಾ ಬ್ರಾಹ್ಮಣರ ವರೇಗೆ ಇರುವವರೆಲ್ಲರ ಸೇವೆಯು ಅಗತ್ಯವಾಗಿದೆ.” ಕಾಡಿನಲ್ಲಿರುವ ಸಸ್ಯ ವರ್ಗ ವಸ್ತುಗಳನ್ನು ಮುಂದೆ ಪಾಕದ ಸಮಯದಲ್ಲಿ ಸಂಗ್ರಹಿಸುವಾಗಲೂ ಈ ಮಾತಿಗೆ ಪುಷ್ಠೀಕರಣ  ದೊರೆಯುತ್ತದೆ. ಕ್ಷೇತ್ರವನ್ನು ಪ್ರವೇಶಿಸಿದ ಕಾಚಿ ಮರಕ್ಕೆ ವಿಧಿವತ್ತಾಗಿ ಪೂಜಾದಿ ಕರ್ಮಗಳನ್ನು ಮಾಡಿಸಿ, ತಂತ್ರಿವರ್ಯರು ಆಗಮ ಸಿದ್ಧಾಂತಕ್ಕನುಸರಿಸಿ ವಿಗ್ರಹ ನಿರ್ಮಾಣದ ಕಮ್ಮಟ ಶಾಲೆಗೆ ಸಾಗಿಸಲಾಯ್ತು. ವಿಗ್ರಹ ಶಿಲ್ಪಿಗಳಾದ ಶ್ರೀ ಕೈಲಾಸ ಮತ್ತು ಸಹಾಯಕರು ಒಂದು ವಾರಗಳಷ್ಟು ಕಾಲ ಬಡಗಿ ಕೆಲಸವನ್ನು ಮಾಡಿ ‘ಶೂಲ’ವನ್ನು ತಯಾರಿಸಿದರು. ಗರ್ಭಗುಡಿಯಲ್ಲಿ 7 ವಿಗ್ರಹಗಳಿವೆ. ಈ ಎಲ್ಲಾ ವಿಗ್ರಹಗಳು ಕಡುಶರ್ಕರ ಪಾಕದಿಂದಲೇ ನಿರ್ಮಾಣಗೊಂಡಿದೆ. ಎಲ್ಲಾ ಏಳು ವಿಗ್ರಹಗಳಿಗೂ ಶೂಲ ತಯಾರಿಸಲಾಗಿದೆ. ಶ್ರೀ ಅನಂತಪದ್ಮನಾಭ, ಶ್ರೀದೇವಿ, ಭೂದೇವಿ, ಗರುಡ, ಹನುಮ, ನಾಗಕನ್ನಿಕೆಯರು (2) ಎಲ್ಲವೂ ಆರಂಭವಾದುದು ಶೂಲದ ತಯಾರಿಕೆಯಿಂದಲೇ.

ಗರ್ಭಗುಡಿಯೊಳಗೆ ತಂತ್ರಿಗಳು  ನಿರ್ದೇಶಿಸಿದ ಸ್ಥಳದಲ್ಲಿ ಪ್ರತಿಷ್ಠೆ ಮಾಡಿರುವ ಪೀಠದ ಮಧ್ಯಭಾಗದಲ್ಲಿ ಕೊರೆದ ತೂತಿನೊಳಗೆ ಈ ಶೂಲವನ್ನು ಗಟ್ಟಿಯಾಗಿ ಕೂರಿಸಬೇಕು. ತೂತನ್ನು ಕಡುಶರ್ಕರಪಾಕದ ಕೆಲವು ದ್ರವ್ಯಗಳನ್ನೊಳಗೊಂಡ (ಅಷ್ಟ ಬಂದ) ಮಿಶ್ರಣದಿಂದ ಶೂಲವನ್ನು ಗಟ್ಟಿಯಾಗಿ ನಿಲ್ಲಿಸಬೇಕು. ಬಹಳ ಅಂಟು ಇರುವ ಈ ಪದಾರ್ಥದಲ್ಲಿ ಶೂಲಗಳು ಗಟ್ಟಿಯಾಗಿ ನೆಲೆಗೊಂಡುವು. ಈ ಕಾರ್ಯಕ್ರಮಕ್ಕೆ ‘ಶೂಲಪ್ರತಿಷ್ಠೆ’ ಎಂದು ಹೆಸರು. ಕಡುಶರ್ಕರ ಪಾಕದ ವಿಗ್ರಹ ನಿರ್ಮಾಣದಲ್ಲಿ ಶೂಲಪ್ರತಿಷ್ಠೆಗೆ ವಿಶೇಷವಾದ ಸ್ಥಾನವಿದೆ. ಯಾಕೆಂದರೆ, ಮುಂದೆ ಬ್ರಹ್ಮಕಲಶ ಸಮಯದಲ್ಲಿ ವಿಗ್ರಹಗಳ ಪುನರ್ ಪ್ರತಿಷ್ಠೆ ಎಂಬ ಕಾರ್ಯಕ್ರಮ ಇಲ್ಲ. ಆ ಪ್ರತಿಷ್ಠೆಯೇ ಶೂಲಪ್ರತಿಷ್ಠೆ ! ಶುಭ ಮುಹೂರ್ತದಲ್ಲಿ ನಡೆದ ಈ ಅಪೂರ್ವ ನಿಮಿಷಕ್ಕೆ ಸಾಕ್ಷಿಗಳಾದ ಭಕ್ತ ಜನರು ಅದೆಷ್ಟೋ ! ಹೀಗೆ 2001 ನೇ ಇಸವಿಯಲ್ಲಿ ದೇವರ ಪ್ರತಿಷ್ಠಾ ಕಾರ್ಯಕ್ರಮಗಳು ನಡೆದಿವೆ.

ನರವ್ಯೂಹ:

ಮನುಷ್ಯ ಶರೀರದಲ್ಲಿರುವ ಎಲುಬುಗಳಂತೆ ನರಗಳೂ ಇವೆ. ಈ ಭಾಗವನ್ನೂ ವಿಗ್ರಹದಲ್ಲಿ ಇಡಬೇಕು. ಇದಕ್ಕಾಗಿ ಉಪಯೋಗಿಸಿದ ದ್ರವ್ಯ, ‘ಹಸಿ ತೆಂಗಿನಕಾಯಿ ಸಿಪ್ಪೆಯ ನಾರು.’ ಆಗ ತಾನೇ ಕೊಯ್ದ ಹಸಿ ತೆಂಗಿನ ಕಾಯಿಯ ಸಿಪ್ಪೆಯನ್ನು ತೆಗೆದು, ಸಿಪ್ಪೆಯೊಡೆಯುವ ಕಾರ್ಯಕ್ರಮದಿಂದ ನಾರುಗಳಾಗಿ ಎಳೆಯಬೇಕು. ಸುಮಾರು 2000 ಮಂದಿ ಹಗಲಿರುಳು ಶ್ರಮದಾನದ ಮೂಲಕ ಈ ಕೆಲಸವನ್ನು ಮಾಡಿ ನಾರು ತಯಾರಿ ಕೆಲಸದಲ್ಲಿ ಪಾಲ್ಗೊಂಡು ಕೃತಾರ್ಥರಾಗಿದ್ದಾರೆ. ದಿನಕ್ಕೊಂದರಂತೆ ತೆಂಗಿನ ಕಾಯಿಯನ್ನು ಮಾತ್ರ ಒಡೆಯಲು ಸಾಧ್ಯವಾಯ್ತು. ನಾರುಗಳನ್ನು ತೆಗೆಯುವ ಕಾರ್ಯಕ್ರಮ ಕೂಡ ಬಹಳ ಜಾಗರೂಕತೆಯಿಂದ ಮಾಡಬೇಕಾಯ್ತು. ಸಿಪ್ಪೆಗಳನ್ನು ಒಡೆದಾಗ ನಾರುಗಳು ಸಿಗುವುದು. ಒಂದೊಂದು ನಾರನ್ನು ಬೆರಳುಗಳ ಎಡೆಯಿಂದ ಎಳೆದು, ಅದರಲ್ಲಿ ಯಾವುದೇ ಪದಾರ್ಥಗಳು ಇಲ್ಲದಂತೆ ಜಾಗ್ರತೆ ವಹಿಸಿ, ಈ ನಾರಿನಿಂದಲೇ ಹಗ್ಗವನ್ನಾಗಿ ಮಾಡಲಾಯ್ತು. ಕೈಯಿಂದಲೇ ಹುರಿಹಗ್ಗವನ್ನು ಮಾಡಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಚೆರುವತ್ತೂರಿನಿಂದ ಇಬ್ಬರು ಸ್ತ್ರೀಯರು ಬಂದು ಸುಮಾರು 200 ಮೀಟರಿನಷ್ಟು ಉದ್ದದ ಹುರಿಹಗ್ಗವನ್ನು ತಯಾರಿಸಿಕೊಟ್ಟರು. ಈ ನಾರನ್ನು ವಿಗ್ರಹದ ನಾಭಿಯಿಂದ ಪ್ರಾರಂಭಿಸಿ, ದೇಹದ ಎಲ್ಲಾ ಭಾಗಗಳಿಗೂ ಸುತ್ತಿ ಕೊನೆಯಲ್ಲಿ ಮಣಿಶಿರದಲ್ಲಿ ಪರಿಸಮಾಪ್ತಿಯಾಯ್ತು. ರಕ್ತ ಸಂಚಾರದ ಕಾರ್ಯವೆಸಗುವ ಈ ನರಗಳ ಇರುವಿಕೆಯ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.

ಲೇಪನದ ಆರಂಭ:

ನರಗಳನ್ನು ಒಳಗೊಂಡ ಶೂಲಕ್ಕೆ ಮಾಂಸದ ಸಂಕಲ್ಪದಲ್ಲಿ ಹಲವು ‘ಕಡುಶರ್ಕರಪಾಕ’ದ ಮೂಲದ್ರವ್ಯಗಳ ಲೇಪನವಾಗಬೇಕಿದೆ. ಎಲುಬಿಗೆ ತಾಗಿಕೊಂಡಿರುವ ಲೇಪನವೇ ಮಜ್ಜೆ. ಮಜ್ಜೆಯನ್ನು ಕೆಂಪುಕಲ್ಲಿನ ಹುಡಿ, ಗೋಧಿ, ಯವ, ಜಾಂಚಲ್ಯ, ಮಯಣ, ಎಳ್ಳೆಣ್ಣೆ, ಬೆಲ್ಲ ಮೊದಲಾದ ದ್ರವ್ಯಗಳಿಂದ ಪಾಕವನ್ನಾಗಿ ಮಾಡಿ, ಬಿಸಿಯಾಗಿಯೇ ಲೇಪನ ಮಾಡಬೇಕು. ಬಿಸಿಯಾಗಿಯೇ ಲೇಪನ ಮಾಡಬೇಕಾದುದರಿಂದ ಶಿಲ್ಪಿಗಳು ಬಹಳ ಕಷ್ಟಪಟ್ಟು ಈ ಕಾರ್ಯಕ್ರಮವನ್ನು ಮಾಡಿರುತ್ತಾರೆ. ಲೇಪನ ಮಾಡಿ ಕೈ ತೆಗೆಯುವಷ್ಟರಲ್ಲಿ ಪದಾರ್ಥವು ಗಟ್ಟಿಯಾಗಿ ಶಿಲೆಯಂತಾಗುವುದು. ಪದಾರ್ಥಗಳಲ್ಲಿ ಹೆಚ್ಚಿನವು ಅಂಟು ಸ್ವಭಾವದ ಮಾಯಣಗಳೇ ಆಗಿವೆ. ಹಲಸಿನ ಕಾಯಿಯ ಮಯಣವೇ 40 ಕಿಲೋದಷ್ಟು ಈ ವಿಗ್ರಹಗಳಿಗೆ ಬೇಕಾಗಿ ಬಂತು. ಎಲ್ಲಾ ಪ್ರಾಕೃತಿಕ ಮಯಣಗಳು ಇಷ್ಟು ಪ್ರಮಾಣದಲ್ಲಿ ಬೇಕಾಗಿ ಬಂದುವು ಎಂಬುದರಿಂದ ವಿಗ್ರಹ ನಿರ್ಮಾಣದ ಕಾಠಿಣ್ಯ ಅರ್ಥವಾಗಬಹುದು.ಈ ಮಯಣವನ್ನು ಊರಿನ ಪರವೂರಿನ ಭಕ್ತ ಜನರು ದೇವರಿಗೆ ಒಪ್ಪಿಸಿರುತ್ತಾರೆ ಎಂಬುದೇ ಆಶ್ಚರ್ಯದ ಸಂಗತಿ.

 

ಹಿಂದಿನ ಪುಟ…

ಮುಂದಿನ ಪುಟ…