Contact Us : 04998-214360      Email Us : info@ananthapuratemple.com

ಚರಿತ್ರೆ

 

ಮಣ್ಣಿನ ಶುದ್ಧೀಕರಣ:

ತ್ರಿವೇಣಿ ಸಂಗಮದಿಂದ ತಂದ ಒಂದು ಲೋಡು ಮಣ್ಣು ಈ ನಿರ್ಮಾಣ ಕಾರ್ಯದಲ್ಲಿ ಪ್ರಧಾನವಾದ ದ್ರವ್ಯ. ಮಣ್ಣನ್ನು ತಂದ ಕೂಡಲೇ ಉರಿಬಿಸಿಲಿನಲ್ಲಿ ಹರಡಿ, ಐದು ದಿವಸಗಳಷ್ಟು ಕಾಲ ಒಣಗಿಸಬೇಕು. ಒಣಗಿದ ಮಣ್ಣನ್ನು ಅರೆಯುವ ಕಲ್ಲಿನಲ್ಲಿ ಹಾಕಿ ಒನಕೆಯಿಂದ ಕುಟ್ಟಿ ಪುಡಿ ಮಾಡುವುದು. ಮಣ್ಣಿನ ಹುಡಿಯನ್ನು ಶೇಖರಿಸಿಟ್ಟ ನಂತರ ಅಗತ್ಯಕ್ಕನುಸರಿಸಿ, ಪ್ರಮಾಣಕ್ಕನುಸರಿಸಿ ವಿವಿಧ ಕಷಾಯಗಳಲ್ಲಿ ಹಾಕಿ ಔಷಧಿಯ ಗುಣವನ್ನು ಕೊಡಬೇಕು. ಪ್ರಾರಂಭದಲ್ಲಿ ಮರದ ಕೆತ್ತೆಯ ಕಷಾಯದಲ್ಲಿ ಈ ಮಣ್ಣಿನ ಹುಡಿಯನ್ನು 10 ದಿನಗಳಷ್ಟು ಕಾಲ ಇಡಬೇಕು. ಇದರ ಅವಧಿ ಮುಗಿದಾಕ್ಷಣ ಮತ್ತೆ 10 ದಿನಗಳಷ್ಟು ಕಾಲ ನಾಲ್ಪಾಮರ (ಅತ್ತಿ, ಇತ್ತಿ, ಅಶ್ವತ್ಥ, ಗೋಳಿ) ಕೆತ್ತೆಯ ಕಷಾಯದಲ್ಲಿ ಹಾಕಿಡಬೇಕು. ನಾಲ್ಪಾಮರ ಕಷಾಯದಲ್ಲಿ ಹಾಕಿದ ಮಣ್ಣನ್ನು ಕೊನೆಯದಾಗಿ ‘ಎಳನೀರು’ ಕಷಾಯದಲ್ಲಿ 10 ದಿನಗಳಷ್ಟು ಕಾಲ ಹಾಕಿ ಶುದ್ಧಗೊಳಿಸಬೇಕು. ಈ ಮಣ್ಣಿನ ಹುಡಿಯನ್ನು ಪ್ರಮಾಣಕ್ಕನುಸರಿಸಿ ಒಣಗಿಸಿ ತೆಗೆದು ಕಡೆಯುವ ಕಲ್ಲಿನಲ್ಲಿ ಹಾಕಿ ಅರೆಯಬೇಕು. ಅರೆಯುವಾಗ ಗಂಗಾಜಲವನ್ನೇ ಉಪಯೋಗಿಸಬೇಕಾದುದು ಮತ್ತೊಂದು ವೈಶಿಷ್ಟ್ಯ! ಈ ಮಣ್ಣಿನೊಂದಿಗೆ ಲೇಪನದ ಸಂಖ್ಯೆಗನುಸರಿಸಿ ಮಿಶ್ರಮಾಡಿ ಅರೆಯಬೇಕು. ಎಲ್ಲಾ ವಸ್ತುಗಳನ್ನೂ ಸೇರಿಸಿ ಅರೆದು ತೆಗೆಯುವ ಪದಾರ್ಥವು ಬೆಣ್ಣೆಯಂತಿದ್ದು, ಲೇಪನಕ್ಕೆ ಯೋಗ್ಯವಾಗಿರುವವುಗಳು. ಅರೆಯುತ್ತಿರುವಾಗ ಮತ್ತು ಲೇಪನದ ಸಂದರ್ಭ ಇಡೀ ದೇವಾಲಯದ ಪರಿಸರ ಆನಂದಕರ ಪರಿಮಳದ ತಾಣವಾಗಿ ಮಾರ್ಪಟ್ಟ ಅನುಭವ ನಮಗೆ ಆಯ್ತು. ಆರೋಗ್ಯಕ್ಕೆ ಯೋಗ್ಯವಾದ ಈ ಪರಿಮಳವನ್ನು ಆಘ್ರಾಣಿಸಿದವರು ಆ ಅನುಭೂತಿಯನ್ನು ಪಡೆದರು. ಲೇಪನಗಳು ಮುಂದುವರಿದುವು. ಬೇರೆ ಬೇರೆ ದ್ರವ್ಯಗಳನ್ನೊಳಗೊಂಡ ಒಂದೊಂದು ಲೇಪನವಾಗುತ್ತಿರುವಾಗಲೂ ವ್ಯತ್ಯಸ್ತ ಪರಿಮಳವನ್ನು ಆಘ್ರಾಣಿಸಲು ನಮಗೆ ಸಾಧ್ಯವಾಯ್ತು.ಈ ಎಲ್ಲಾ ಲೇಪನಗಳನ್ನೂ ಒಟ್ಟಾಗಿ ಮಾಡುವಂತಿಲ್ಲ. ಒಂದು ಲೇಪನ ಆದ ಕೂಡಲೇ ಅದು ನೈಸರ್ಗಿಕ ವಿಧಾನಗಳ ಮೂಲಕವೇ ದೇವರ ಶರೀರದಲ್ಲಿ ಒಣಗಬೇಕು. ಅಂದರೆ, ಬಿಸಿ ಮಾಡಿಯೋ, ಗಾಳಿ ಬೀಸಿಯೋ ಅದನ್ನು ಬೇಗ ಒಣಗಿಸುವಂತಿಲ್ಲ. ಹಾಗೆಯೇ ಒಂದು ಲೇಪನ ಒಣಗಲು ಸುಮಾರು ಒಂದು ತಿಂಗಳಷ್ಟು ಕಾಲ ತೆಗೆದುಕೊಂಡಿತ್ತು. ಅಲ್ಲದೆ ಮಳೆಗಾಳದಲ್ಲಿಯೋ, ಬಿಸಿಲು ಕಡಿಮೆ ಇರುವ ಸಮಯದಲ್ಲೋ ಲೇಪನ ಮಾಡುವಹಾಗಿಲ್ಲ. ಗಾಳಿಯಲ್ಲಿ ನೀರಾವಿ ಹೆಚ್ಚಿರುವ ಕಾರಣದಿಂದಾಗಿ ಲೇಪನ ಅಸಾಧ್ಯವಾಗುವುದು. ಹತ್ತು ಲೇಪನಗಳು ಕಳೆದ ಕೂಡಲೇ ಶರೀರದ ಭಾಗಗಳನ್ನು ಗುರುತಿಸಲು ತೊಡಗಿದರು. ಅಂದರೆ, ಎದೆಗೂಡು, ಉಗುರುಗಳು, ಆಭರಣಗಳು ಮೊದಲಾದುವುಗಳನ್ನು ಶರೀರದ ಭಾಗಗಳನ್ನು ಉಬ್ಬು ಕಾಣುವಂತೆ ಜಾಗ್ರತೆ ವಹಿಸಿದರು. ವಿಗ್ರಹದ ಆಕಾರ, ಅಲಂಕಾರಗಳನ್ನು ಗಮನಿಸಿಯೇ ಲೇಪನ ಕಾರ್ಯ ಮುಂದುವರಿಯಿತು. ಅದರೊಂದಿಗೆ 5 ಹೆಡೆಯ ಸರ್ಪವನ್ನೂ ಇದೇ ಪಾಕದಿಂದ ಮಾಡಬೇಕಾಯ್ತು. ಸರ್ಪಕ್ಕೆ ಕೊನೆಯದಾಗಿ ಬೆಳ್ಳಿಯ ನಾಲಗೆಯನ್ನು ಇಟ್ಟಾಗ, ಕೆಲಸವೂ ಪೂರ್ತಿಗೊಳ್ಳುವುದು. ಶ್ರೀ ದೇವರಲ್ಲಿ ರೋಗ ನಿವಾರಕವಾದ ಔಷಧಿಗಳು ಧಾರಾಳ ಇವೆ. ಪ್ರತಿಯೊಬ್ಬ ಭಕ್ತನೂ ಆರೋಗ್ಯವಂತನಾಗಿರಲು ಶ್ರೀ ದೇವರ ಸನ್ನಿಧಿಗೆ ಬಂದು ಪ್ರಾರ್ಥಿಸಬೇಕು. ಶಂಖ, ಚಕ್ರ, ಅಭಯ, ವರದನಾಗಿ, ಸರ್ಪದ ಮೇಲೆ ಕುಳಿತಿರುವ ಸಾಕ್ಷಾತ್ ಶ್ರೀಮನ್ನಾರಾಯಣನು ಶ್ರೀ ಅನಂಥಪದ್ಮನಾಭನಾಗಿ ಸಕಲ ಭಕ್ತ ಜನರಿಗೂ ಆರೋಗ್ಯ ಭಾಗ್ಯಗಳನ್ನು ಕೊಡಲು ಸಜ್ಜಾಗುತ್ತಿದ್ದಾನೆ.

ಕೊನೆಯ ಲೇಪನ:

“ಕಡುಶರ್ಕರಪಾಕ” ಎಂಬ ವಿಗ್ರಹ ನಿರ್ಮಾಣ ವಿಧಾನವು ಮುನಿಶ್ರೇಷ್ಠರ ಕಾಲದಲ್ಲಿ ಮೂರ್ತರೂಪವನ್ನು ತಾಳಿದ್ದು ಎಂದು ಮೊದಲೇ ಹೇಳಲಾಗಿದೆ. ಪ್ರಕೃತಿಯಲ್ಲಿ ಲಭಿಸುವ ಎಲ್ಲಾ ನೈಸರ್ಗಿಕ ವಸ್ತುಗಳೂ ಔಷಧಿಗಳೇ. ಈ ವಸ್ತುಗಳೆಲ್ಲವನ್ನೂ ವಿಗ್ರಹದಲ್ಲಿಟ್ಟು ದೇವಾರಾಧನೆ ಮಾಡುವ ಸಂಪ್ರದಾಯವು ಆ ಕಾಲದಿಂದಲೇ ಪ್ರಾರಂಭವಾಗಿರುವುದು. ಭಕ್ತರು ಆರೋಗ್ಯವನ್ನು ಮಾತ್ರ ದೇವರಲ್ಲಿ ಕೇಳುವುದಿಲ್ಲ. ಅದರೊಂದಿಗೆ ಐಶ್ವರ್ಯವನ್ನೂ ಕೇಳುತ್ತಾರೆ. ಈ ಕೇಳಿಕೆಗಳನ್ನು ಅನುಗ್ರಹಿಸಲು ದೇವರಲ್ಲಿಯೇ ಐಶ್ವರ್ಯ ಕೂಡಿರಬೇಕು. ಆ ತತ್ವಕ್ಕನುಸರಿಸಿ ಕೊನೆಯ ಲೇಪನದಲ್ಲಿ ಚಿನ್ನ ಮತ್ತು ಬೆಳ್ಳಿ ಗಳನ್ನು (24ಕ್ಯಾರೆಟ್) ಪಲ್ಲೆಗಳಾಗಿ ಮಾಡಿ ಗಂಧ ತೇಯುವಂತೆ ತೇದು ಚಿನ್ನ, ಬೆಳ್ಳಿ ಮಿಶ್ರಣವನ್ನು ದ್ರವರೂಪದಲ್ಲಿ ತಯಾರಿಸುತ್ತಾರೆ. ಇದರೊಂದಿಗೆ ಗೊರೋಚನ, ಕಸ್ತೂರಿ, ಶ್ರೀಗಂಧ, ರಕ್ತಚಂದನ, ಆನೆಕುಟ್ಟಿದ ಮಣ್ಣು, ನೇಗಿಲ ಮಣ್ಣು, ಬಸವ ಕುಟ್ಟಿದ ಮಣ್ಣು, ಹುತ್ತದ ಮಣ್ಣು, ಏಡಿಮಣ್ಣು ಮೊದಲಾದ ವಿಶಿಷ್ಟ ರೀತಿಯ ಮಣ್ಣುಗಳ ಮಿಶ್ರಣದಿಂದ ಲೇಪನ ಮಾಡಬೇಕಾಗಿದೆ.

ಕಸ್ತೂರಿ ಸಿಕ್ಕಿದ ಬಗೆ:

ವಿಗ್ರಹ ಶಿಲ್ಪಿಗಳಿಗೆ ಎಲ್ಲಾ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಲು ಸಮಿತಿ ಸದಸ್ಯರು ಜಾಗ್ರತೆ ವಹಿಸಿದ್ದರು. ಹೆಚ್ಚೇಕೆ, ರಾಮೇಶ್ವರದಿಂದ 75 ಕಿಲೋ ಮುತ್ತುಚಿಪ್ಪಿಯನ್ನೂ, ಉತ್ತರ ಪ್ರದೇಶದಿಂದ ಗಂಗಾಜಲವನ್ನೂ, ಮೃತ್ತಿಕೆಯನ್ನೂ ಸನ್ನಿಧಾನಕ್ಕೆ ತರಲಾಯ್ತು. ಗೊರೋಚನವನ್ನು ಓರ್ವ ಕ್ರಿಶ್ಚನ್ ಭಕ್ತನು ತಂದೊಪ್ಪಿಸಿರುವರು. ಬಹಳ ಬೆಲೆಬಾಳುವ ಈ ದ್ರವ್ಯಗಳನ್ನು ಯಥಾ ಸಮಯ ತಲುಪಿಸಲಿರುವ ದೇವಪ್ರೇರಣೆಯನ್ನು ಮನಸಾ ನೆನೆದು ಧನ್ಯರಾಗುತ್ತೇವೆ. ಆದರೆ ಕಸ್ತೂರಿ ಮಾತ್ರ ಕಷ್ಟವೆನಿಸಿತು. ಔಷಧಿ ಅಂಗಡಿಗಳಲ್ಲಿ ವಿಚಾರಿಸಿದಾಗಲೂ ಶುದ್ಧ ಕಸ್ತೂರಿ ಸಿಗಲಾರದೆಂದೂ, ಕಲಬೆರಕೆಯಿರುವ ಕಸ್ತೂರಿ ಬೇಕಾದರೆ ಕೊಡಬಹುದೆಂದೂ ಎಲ್ಲಾ ಮಾಲೀಕರು ಹೇಳಿದರು. ಇದನ್ನು ಕೇಳಿ ಕಂಗೆಟ್ಟೆವು. ಕಸ್ತೂರಿಯ ಅನ್ವೇಷಣೆಯಲ್ಲಿ ತಿಂಗಳುಗಳನ್ನು ಕಳೆದಿದ್ದೆವು. ಆದರೆ ಆ ಒಂದು ಶುಭಮುಹೂರ್ತ ಅನಿರೀಕ್ಷಿತವಾಗಿ ಬಂದೇ ಬಿಟ್ಟಿತು. ಸಮಿತಿಯ ಸದಸ್ಯರೆಲ್ಲರೂ ದೇವಾಲಯದಲ್ಲಿ ಸೇರಿದ್ದರು. ರಾತ್ರಿಕಾಲದಲ್ಲಿ ಸಭೆಯಲ್ಲಿ ತೀರ್ಮಾನ ಕೈಗೊಂಡು ಕಾರ್ಯಪ್ರವೃತ್ತರಾಗುವುದು ನಮ್ಮ ಶೈಲಿಯಾಗಿತ್ತು. ಆ ಒಂದು ದಿನವೂ ನಾವು ಸೇರಿದ್ದೆವು. ಫಕ್ಕನೆ ಒಂದು ಕಾರು ಬಂದು ದೇವಾಲಯದ ಗೇಟಿನ ಸಮೀಪ ನಿಂತಿತು. ಗಂಟೆ ರಾತ್ರಿ 8 ! ಬಂದವರು ಬೇರಾರೂ ಆಗಿರಲಿಲ್ಲ. ನೇಪಾಳದ ಶ್ರೀ ಪಶುಪತಿ ದೇವಸ್ಥಾನದ ಪ್ರಧಾನ ಅರ್ಚಕರು! ದೇವರನ್ನೂ, ದೇವಾಲಯವನ್ನೂ ನೋಡಿದವರು ದೇವಳದ ಆಫೀಸಿಗೆ ಬಂದು ನಮ್ಮ ಮುಂದಿನ ಕಾರ್ಯಕ್ರಮವನ್ನು ಕೇಳಿದರು. ಕಸ್ತೂರಿಯ ಬಗ್ಗೆ ನಮಗಿರುವ ಗೊಂದಲವನ್ನು ಮಾತಿನ ಮಧ್ಯೆ ಹೇಳಿದೆವು. ಇದನ್ನು ಕೇಳಿದಾಕ್ಷಣ ಅರ್ಚಕರ ಕಿವಿಗಳು ನೆಟ್ಟಗಾದವು. “ನೇಪಾಳದಲ್ಲಿ ಶುದ್ಧವಾದ ಕಸ್ತೂರಿ ಯಥೇಚ್ಛ ಲಭಿಸುತ್ತದೆ. ಆದರೆ ಕ್ರಯಮಾತ್ರ 1 ಗ್ರಾಂಗೆ ಹದಿನೈದು ಸಾವಿರ ರೂಪಾಯಿ!” ಎಂದರು. “ಆದರೆ ಈ ವಸ್ತುವನ್ನು ಹೊರದೇಶಗಳಿಗೆ ಕೊಂಡುಹೊಗುವುದನ್ನು ನಿಷೇಧಿಸಲಾಗಿದೆ” ಎಂದರು. ನಮ್ಮ ಅಸಹಾಯಕತೆಯನ್ನು ತಿಳಿದ ಅರ್ಚಕರು ಸಮಾಧಾನಕರ ಉತ್ತರವನ್ನಿತ್ತರು. “ತಾನೇ ಮುತುವರ್ಜಿವಹಿಸಿ ನಿಮಗೆ ಕಸ್ತೂರಿ ಕಳುಹಿಸಿ ಕೊಡುತ್ತೇನೆ – ಅದಕ್ಕಾಗಿ ಯಾವುದೇ ಮೌಲ್ಯವನ್ನು ಕೊಡಬೇಕಾಗಿಲ್ಲ ” ಎಂದರು. ಈ ಮಾತನ್ನು ಕೇಳಿದ ಸಮಿತಿಯ ಸದಸ್ಯರೆಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟರು . ಒಂದು ತಿಂಗಳೊಳಗೆ ವಿಗ್ರಹ ನಿರ್ಮಾಣಕ್ಕೆ ಅಗತ್ಯವಿರುವ ಕಸ್ತೂರಿಯೂ ಕೈ ಸೇರಿತು.

ಎಡನಾಳಿಯಲ್ಲಿ:

ಗರ್ಭಗುಡಿಯ ಹೊರಗೋಡೆಯಲ್ಲಿ ಸುಂದರವಾದ ಮೂರು ವಿಗ್ರಹಗಳನ್ನು ತಯಾರಿಸಲಾಗಿದೆ. ಸಂಕರ್ಷಣ, ಅನಿರುದ್ಧ, ಪ್ರದ್ಯುಮ್ನರ ವಿಗ್ರಹಗಳು. ತೆಂಕುಗೋಡೆಯಲ್ಲಿ ಸಂಕರ್ಷಣ, ಪಡುಗೋಡೆಯಲ್ಲಿ ಅನಿರುದ್ಧ ಮತ್ತು ಬಡಗುಗೋಡೆಯಲ್ಲಿ ಪ್ರದ್ಯುಮ್ನ. ಮೂಡುಭಾಗದಲ್ಲಿ ಸಾಕ್ಷಾತ್ ವಾಸುದೇವ ! ಮಹಾವಿಷ್ಣುವಿನ ವಿವಿಧ ಭಾವರೂಪಗಳಿವು. ಈ ವಿಗ್ರಹಗಳನ್ನೂ ಇದೆ ರೀತಿಯ ಪಾಕದಿಂದ ತಯಾರಿಸಾಗಿದೆ. ಆದರೆ ಕಡುಶರ್ಕರಪಾಕದ ಎಲ್ಲಾ ಮಿಶ್ರಣಗಳು ಇವುಗಳಲ್ಲಿಲ್ಲ. ಜಯವಿಜಯರು ದ್ವಾರಪಾಲಕರಾಗಿ ಗರ್ಭಗೃಹದ ಮುಂಭಾಗದಲ್ಲಿದ್ದಾರೆ.

ಭಿತ್ತಿ ಚಿತ್ರಗಳು:

ಶ್ರೀ ಗರ್ಭಗುಡಿಯ ಹೊರಗಿನ ಗೋಡೆಯಲ್ಲಿ ಅಜಂತ ಎಲ್ಲೋರವನ್ನು ನೆನೆಪಿಸುವ ಭಿತ್ತಿಚಿತ್ರಗಳು ಭಕ್ತರ ಮನಸ್ಸಿಗೆ ಮುದವನ್ನು ಕೊಡುತ್ತವೆ. ಉಗ್ರನರಸಿಂಹ, ನಟರಾಜ, ಅನತಪದ್ಮನಾಭ, ಮಹಾಕಾಳಿ, ಸೂರ್ಯದೇವ, ಶಿವಲಿಂಗ, ಊರಜಾತ್ರೆಯ ವೈಭವಗಳೇ ಮೊದಲಾದ ಆಕರ್ಷಕ ಚಿತ್ರಗಳು ಈ ಗೋಡೆಯ ಮೇಲೆ ಜೀವಂತವಾಗಿವೆ. ಕಣ್ಣಿಗೆ ಹಬ್ಬವನ್ನೀಯುತ್ತವೆ. ಈ ಚಿತ್ರಗಳನ್ನು ಯಾವುದೇ ಪೈಂಟ್ ನಿಂದ ಮಾಡಿದ್ದಲ್ಲ. ಸಾವಿರ ವರ್ಷಗಳ ಹಿಂದೆಯೇ ಪ್ರಕೃತಿದತ್ತವಾದ ಜೈವಿಕ ಬಣ್ಣಗಳ ಸಂಯೋಜನೆಯಿಂದ ಇದನ್ನು ಬಿಡಿಸಿರುವರು. ಪ್ರಾಕೃತಿಕವಾದ ಬಣ್ಣಗಳಿಂದ ಬಿಡಿಸಿರುವುದರಿಂದ ಇನ್ನೂ ಹೊಸತಾಗಿಯೇ ಉಳಿದಿದೆ. ಗೋಡೆಗೆ ಸೀಮೆಸುಣ್ಣದ ಲೇಪನ ಹಿಂದೆ ಮಾಡಿದ್ದರಿಂದ, ಇದು ಜರಿದು ಹೋಗಿದ್ದುವು. 2003 ರಲ್ಲಿ ಪ್ರಾಚ್ಯವಸ್ತು ವಿಭಾಗದವರು ಒಂದು ಲಕ್ಷ ರೂಪಾಯಿ ವ್ಯಾಯಮಾಡಿ ಇದನ್ನು ಸಂರಕ್ಷಿಸಿರುತ್ತಾರೆ.

ದೇವಳದ ಮಾಡು:

ಪ್ರಧಾನ ದೇವಾಲಯಕ್ಕೆ ‘ಹೃಸ್ವ ಪ್ರದಕ್ಷಿಣೆ’ ವ್ಯವಸ್ಥೆ ಪುರಾತನ ಕಾಲದಿಂದಲೇ ಇಲ್ಲ. ದೇವರಿಗೆ ಪ್ರದಕ್ಷಿಣೆ ಬರಬೇಕಾದರೆ ಕೆರೆಗೆ ಸುತ್ತ ಬರುವ ಪ್ರದಕ್ಷಿಣೆಯೇ ಆಗಿದೆ. ಮಾಡನ್ನು ಕೂಡಾ ಆ ರೀತಿಗೆ ಪರಿವರ್ತಿಸುವುದರಲ್ಲೂ ಅನೇಕ ಜನರ ಶ್ರಮ ಅಗತ್ಯವಾಗಿ ಬಂತು. ಸುತ್ತಲೂ ಮರದ ದರಿಯನ್ನು ಕುಳ್ಳಿರಿಸಲಾಯ್ತು. ಮುಖಮಂಟಪದ ವ್ಯವಸ್ಥೆ ಬದಲಾವಣೆಗೊಂಡಿತು. ಮುಖಮಂಟಪದ ಮೇಲ್ಚಾವನಿಯಲ್ಲಿ ಸುಂದರವಾದ ನವಗ್ರಹಗಳು ಮರದಿಂದ ಕೆತ್ತಿ ಇಡಲ್ಪಟ್ಟಿವೆ. ನಾಲ್ಕು ಕಗ್ಗಲ್ಲಿನ ಸ್ತಂಭಗಳಿಂದ ಈ ಮಾಡು ಆಧರಿಸಲ್ಪಟ್ಟಿದೆ.

ದೇವರ ಮೊಸಳೆ:

ಇಪ್ಪತ್ತನೇ ಶತಮಾನವು ವಿಜ್ಞಾನ ಯುಗವಾಗಿದೆ. ವಿಜ್ಞಾನದ ಸತ್ಯಶೋಧನೆ ಪ್ರಕ್ರಿಯೆಗಳು ಅದರ ಉತ್ಕೃಷ್ಟ ಸ್ಥಿತಿಗೆ ಬಂದ ಕಾಲ. ಧಾರ್ಮಿಕ ವಿಶ್ವಾಸಗಳಿಗೂ ವೈಜ್ಞಾನಿಕ ಉತ್ಪನ್ನಗಳಿಗೂ ಏನು ಸಂಬಂಧ ಎಂದೂ ಕೇಳಬಹುದು. ಮೂಢನಂಬಿಕೆಗಳೆಂದು ಅಲ್ಲಗಳೆಯುವ ಧಾರ್ಮಿಕ ಭಾವನೆಗಳಿಗೂ ಆಚಾರ ಅನುಷ್ಟಾನಗಳಿಗೂ ಕೆಲವೊಂದು ` ಪ್ರಶ್ನೆ’ ಗಳು ಮಾತ್ರ ಉಳಿದುಕೊಂಡಿವೆ. ಕೆಲವೊಂದು ದೇವಾಲಯ ಮತ್ತು ದೇವರುಗಳಿಗೆ ಮೃಗ ಪಕ್ಷಿಗಳೊಂದಿಗೆ ನಿಕಟವಾದ ಸಂಬಂಧವನ್ನು ಕಾಣುತ್ತೇವೆ. ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿಯ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ದಿನದಂದು ಪ್ರದಕ್ಷಿಣೆ ಬರುವ ಗಿಡುಗನು ಇನ್ನೂ ಒಂದು ನಿಗೂಢ ರಹಸ್ಯವಾಗಿಯೇ ಉಳಿದಿದೆ. ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯವು ವಿಶಾಲವಾದ ಒಂದು ಕೆರೆಯ ಮಧ್ಯದಲ್ಲಿದೆ ಎಂದು ಹೇಳಿಲ್ಲವೇ? ಈ ಕೆರೆಯಲ್ಲಿ ವರ್ಷದ ಎಲ್ಲ ದಿನಗಳಲ್ಲೂ ನೀರು ತುಂಬಿಕೊಂಡಿರುತ್ತದೆ. ಕೆರೆಯಲ್ಲೊಂದು ಮೊಸಳೆ! ದೇವರ ಮೊಸಳೆ! ಕೆರೆಯ ಬಡಗು ಭಾಗದಲ್ಲಿ ಇದರ ವಾಸಸ್ಥಳವಾದ ಎರಡು ಗುಹೆಗಳಿವೆ. ಕೆರೆಯಲ್ಲಿ ಸಂಚರಿಸದೇ ಇರುವಾಗ, ಮೊಸಳೆಯು ಈ ಗುಹೆಗಳಲ್ಲಿ ವಿಶ್ರಾಂತಿಯನ್ನು ಪಡೆಯುತ್ತದೆ. ಭಕ್ತಜನರಿಗೆ ಕಂಡರೂ ಕಾಣಬಹುದು. ಬಹಳ ಸುಲಭದಲ್ಲಿ ಕಂಡು ಸಂತೋಷಗೊಂಡ ಬಹಳಷ್ಟು ಯಾತ್ರಿಕರೂ ಇದ್ದಾರೆ. ಅದೇ ರೀತಿ ಬಹಳಷ್ಟು ಪ್ರಯತ್ನಪಟ್ಟು, ಹಗಲಿಡೀ ಕಾದು ನಿಂತು, ಮೊಸಳೆಯನ್ನು ಕಾಣದೆ ಹಿಂತಿರುಗಿದವರೂ ಬಹಳಷ್ಟು ಜನರು ಇದ್ದಾರೆ. ಈ ಮೊಸಳೆಗೆ ಮೊದಲು ಇನ್ನೊಂದು ಮೊಸಳೆ ಕೆರೆಯಲ್ಲಿ ಇದ್ದುದಾಗಿ ಹಿರಿಯರು ಹೇಳುತ್ತಾರೆ. ಇದು `ಬಬಿಯಾ’ ಎಂದು ಕೆರೆಯ ದಡದಲ್ಲಿ ನಿಂತು ಗಟ್ಟಿಯಾಗಿ ಕೂಗಿದರೆ, ಶರವೇಗದಲ್ಲಿ ಕರೆದವರ ಸನಿಹಕ್ಕೆ ಬರುತ್ತಿತ್ತು. ಬಂದಾಗ ಎನಾದರೂ ತಿನ್ನಲು ಸಿಗುತ್ತಿತ್ತು. ಎಷ್ಟೋ ಜನರು ಕೈಯಲ್ಲಿಯೇ ಆಹಾರವನ್ನು ಕೊಟ್ಟವರೂ ಇದ್ದಾರೆ ಎಂದು ಸುಮಾರು ಎಪ್ಪತ್ತು ವರ್ಷ ಪ್ರಾಯದ ಸ್ಥಳವಾಸಿಯೊಬ್ಬರು ಹೇಳಿದರು. ಈ ಘಟನೆ ನಡೆದಿದ್ದು 1945 ರಲ್ಲಿ. ಆಗ ಆ ಪ್ರದೇಶವು ಬ್ರಿಟಿಷ್ ಸೈನಿಕರ ತಾಣವಾಗಿತ್ತು. ಕೆರೆಯಲ್ಲಿ ಕರೆಯುವಾಗ ಬರುವ ಮೊಸಳೆಯೊಂದಿಗೆ ಎಂಬ ಸಂಗತಿಯನ್ನು ಕೇಳಿ ಅವರಿಗೆ ತುಂಬಾ ತಮಾಷೆಯಾಯಿತು.ಪರೀಕ್ಷೆ ಮಾಡಬೇಕೆಂದು ತೀರ್ಮಾನಿಸಿ ಮೊಸಳೆಯನ್ನು ‘ಬಬಿಯಾ’ ಎಂದು ಗಟ್ಟಿಯಾಗಿ ಕರೆದರು. ಅಭ್ಯಾಸದಂತೆ ಬಬಿಯಾ ಈಜುತ್ತಾ ಅವರ ಸನಿಹಕ್ಕೆ ಬಂತು. ಈ ವಿಚಿತ್ರ ಅನುಭವವನ್ನು ಸಹಿಸಲಾರದೆ ಅದರಲ್ಲೊಬ್ಬನು ತನ್ನ ಪಿಸ್ತೂಲಿನಿಂದ ಗುಂಡನ್ನು ಹಾರಿಸಿಯೇ ಬಿಟ್ಟ. ಮೊಸಳೆಯು ಸತ್ತಿತು. ಆದರೆ ಚರಿತ್ರೆಗೆ ಪೂರ್ಣತೆ ಬರಲು ಇನ್ನೊಂದು ಘಟನೆಯು ಅದರೊಂದಿಗೇ ಸಂಭವಿಸಿತು. ಪಿಸ್ತೂಲಿನಿಂದ ಕೈ ತೆಗೆಯುವಷ್ಟರಲ್ಲಿ ದೇವಾಂಗಣದಲ್ಲಿರುವ ದೊಡ್ಡ ಒಂದು ಅಶ್ವತ್ಥ ಮರದಿಂದ ವಿಷಜಂತುವೊಂದು ಇವನ ಮೇಲೆರಗಿತು. ತನ್ನ ಹಲ್ಲು ಉಗುರುಗಳಿಂದ ಆತನನ್ನು ಘಾಸಿಗೊಳಿಸಿತು. ವೈದ್ಯರಲ್ಲಿಗೆ ಕೊಂಡು ಹೋಗುವ ಮಧ್ಯೆ ಆತನೂ ಸಾವನ್ನಪ್ಪಿದನು. ಘಟನೆಯನ್ನು ನೋಡಿದವರೂ ಈ ಪರಿಸರದಲ್ಲಿ ಇದ್ದರು. ಮೊಸಳೆಯ ದೇಹವನ್ನು ಮನುಷ್ಯನನ್ನು ಸಂಸ್ಕರಿಸುವ ರೀತಿಯಲ್ಲೇ ಆ ಮೇಲೆ ಸಂಸ್ಕರಿಸಲಾಯಿತು. ದೇವಾಲಯದ ಹೊರಗೆ ಆಗ್ನೇಯ ಮೂಲೆಯಲ್ಲಿ ‘ಕುತ್ತಿಕಾಡು’ ಎಂಬ ಸ್ಥಳದಲ್ಲಿ ಮೊಸಳೆಯನ್ನು ದಹಿಸಲಾಯ್ತು ಎಂದೂ ಹೇಳಿದರು. ದಿನಗಳು ತುಂಬಾ ಕಳೆಯಲಿಲ್ಲ ಮರಿಮೊಸಳೆಯು ಪ್ರತ್ಯಕ್ಷವಾಯ್ತು. ಅದೇ ಮೊಸಳೆಯು ಈಗ ಕೆರೆಯಲ್ಲಿರುವುದು. ಹಿಂದಿನವನ ಹೆಸರನ್ನೇ ಇದಕ್ಕೂ ಇಡಲಾಗಿದೆ. ‘ಬಬಿಯಾ’ ಹೆಣ್ಣೋ ಗಂಡೋ ಎಂದೂ ತಿಳಿಯಲಾಗಲಿಲ್ಲ. 60 ವರ್ಷದ ವಯೋವೃದ್ಧ ! 8 ಅಡಿ ಉದ್ದವಿದೆ. ಕಳೆದ 60 ವರ್ಷಗಳಿಂದ ಇದರ ಆಹಾರ ಏನು ? ಒಂಟಿಯಾಗೆ ಹೇಗೆ ಜೀವಿಸುತ್ತಿದೆ? ಕ್ರೂರ ಪ್ರಾಣಿಯಾಗಿರುವುದರಿಂದ ‘ಆಕ್ರಮಣ ಪ್ರವೃತ್ತಿ’ ತೋರಿಸದಿರುವುದು ಯಾಕಾಗಿ? ಎಂಬಿತ್ಯಾಗಿ ಪ್ರಶ್ನೆಗಳಿಗೆ ವಿಜ್ಞಾನವು ಮೌನವಾಗುವುದು. ಮಾಂಸಾಹಾರಿಯಾದ ಮೊಸಳೆಯು ಸಣ್ಣ ಸಣ್ಣ ಮೀನುಗಳನ್ನು ತಿಂದರೂ ಅದಕ್ಕೆ ಸಾಕೇ? ನೈವೇದ್ಯ ಅನ್ನವನ್ನು ಮಧ್ಯಾಹ್ನ ಪೂಜೆಯ ನಂತರ ಅರ್ಚಕರು ಮೊಸಳೆಗೆ ಕೊಡುವುದಿದೆ. ಮನುಷ್ಯರಿಗೆ ಉಪದ್ರವ ಕೊಟ್ಟ ಘಟನೆಗಳು ಕಳೆದ 60 ವರ್ಷಗಳಲ್ಲಿ ಸಂಭವಿಸಿಲ್ಲ. ಕ್ಷೇತ್ರದ ಅರ್ಚಕರು ಈ ಕೆರೆಯಲ್ಲಿ ಮುಳುಗಿ ಸ್ನಾನ ಮಾಡುತ್ತಾರೆ. ಒಂದೊಂದು ದಿನ ಬೆಳಗ್ಗೆ 5 ಗಂಟೆಗೆ ಸ್ನಾನಕ್ಕಾಗಿ ಬಂದ ಅರ್ಚಕರು ಮೊಸಳೆಯ ಮೇಲೆ ಕಾಲಿಟ್ಟ ಘಟನೆಗಳೂ ಬೇಕಾದಷ್ಟಿವೆ. ಆಗಲೇ ಅದಕ್ಕೂ ಎಚ್ಚರವಾಗುವುದು. ಫಕ್ಕನೆ ಬದಿಗೆ ಸರಿದು, ಕೆರೆಗೆ ಹಾರಿ ತನ್ನ ಗುಹೆಯೊಳಗೆ ಹೋಗುವುದು. ಕ್ಷೇತ್ರದ ನೌಕರರೊಬ್ಬರು ದೇವಸ್ಥಾನದ ಗೋಪುರದಲ್ಲಿ ಮಲಗುತ್ತಿದ್ದರು. ಗೋಪುರವನ್ನು ಏರಲು ಮೆಟ್ಟಿಲು ಇರುವ ಅಗಲವಾದ ಒಂದು ಏಣಿಯನ್ನು ಇಡಲಾಗಿದೆ. ಒಂದು ದಿನ ನೌಕರನು ಒಬ್ಬಂಟಿಗನಾಗಿ ಗೋಪುರದಲ್ಲಿ ಮಲಗಿ ನಿದ್ರಿಸುತ್ತಿದ್ದನು. ನಿದ್ದೆಯ ಅಮಲಿನಲ್ಲಿ ಮಗ್ಗುಲು ಬದಲಿಸಿದಾಗ ಫಕ್ಕದಲ್ಲೇ ಮೊಸಳೆಯೂ ಮಲಗಿತ್ತು! ಆ ಮೇಲೆ ಯಾರೂ ಇಲ್ಲಿ ಮಲಗುವಾಗಲೂ ಏಣಿಯನ್ನು ದೂರಕ್ಕೆ ಇಟ್ಟೇ ಮಲಗುವುದು ಕ್ರಮವಾಗಿತ್ತು. ಮೊಸಳೆಯು ಬೇರೆಯೂ ಕೆಲವು ಚೇಷ್ಟೆಗಳನ್ನೂ ಮಾಡಿದ್ದುಂಟು. ಒಂದು ದಿನ ಐದು ಜನ ಒಳಗೊಳ್ಳುವ ಒಂದು ತಂದ ಕೊಲ್ಲೂರಿಗೆ ಪಯಣ ಮಾಡುತ್ತಿದ್ದರು. ದೇವಸ್ಥಾನದ ಕುರಿತು ಕೇಳಿದ ಇವರು ಶ್ರೀ ಕ್ಷೇತ್ರಕ್ಕೂ ಆಗಮಿಸಿದ್ದರು. ಇವರೆಲ್ಲರೂ ತಮಿಳರಾಗಿದ್ದರು. ಸಾಯಂಕಾಲ 5 ಗಂಟೆಯ ಹೊತ್ತು! ವಿಜ್ಞಾನಿಗಳೂ, ಬುದ್ಧಿಶಾಲಿಗಳೂ ಸೇರಿದ್ದ ತಂಡವಾಗಿತ್ತು. ದೇವಾಲಯದ ಬಗ್ಗೆ ವಿವರಣೆಯನ್ನು ಕೊಟ್ಟಮೇಲೆ ಕೆರೆಯಲ್ಲಿರುವ ಮೊಸಳೆಯ ಬಗ್ಗೆ ಹೇಳಿದೆವು. ಅದರಲ್ಲೊಬ್ಬರು ಈ ರೀತಿ ಪ್ರಶ್ನಿಸಿದರು ‘ಸಮೀಪದಲ್ಲಿ ಹೊಳೆಯೋ ಸಮುದ್ರವೋ ಇದೆಯೇ?’ ನಾವು ‘ಇಲ್ಲ’ ಎಂದು ಉತ್ತರ ಕೊಟ್ಟೆವು. ಎಷ್ಟು ಮೊಸಳೆಗಳಿವೆ ಎಂದು ಪ್ರಶ್ನಿಸಿದ್ದಕ್ಕೆ ‘ಒಂದೇ ಇರುವುದು’ ಎಂದೆವು. ನಮ್ಮ ಉತ್ತರವನ್ನು ಕೇಳಿದಾಕ್ಷಣ ಆ ವಿದ್ವಾಂಸ ಗಕ್ಕನೆ ನಕ್ಕು ಬಿಟ್ಟ. ಅವನು ಹೇಳಿದ, ‘ನೋಡೀ, ಮೊಸಳೆ ಒಂದು ಕ್ರೂರ ಪ್ರಾಣಿ, ಅದು ಒಂದು ಮಾಂಸಾಹಾರಿ, ಅದೂ ಅಲ್ಲದೆ ಯಾವುದೇ ಪ್ರಾಣಿಯು ಒಂಟಿಯಾಗಿ ಜೀವಿಸಲಾರದು. ನೀವು ಜನರನ್ನು ಆಕರ್ಷಿಸುವುದಕ್ಕೆ ಬೇರೆ ಏನಾದರೂ ವಿಷಯಗಳನ್ನು ಹೇಳಿ, ಅವರನ್ನು ನಂಬಿಸಿ, ಆದರೆ ಇದು ಸರಿಯಲ್ಲ’ ಎಂದು ಬಿಟ್ಟ. ಮೊಸಳೆಯ ಫೋಟೋವನ್ನು ತಂದು ತೋರಿಸಿದೆವು. ಅದಕ್ಕೆ ಅವನು “ಇಂತಹ ಫೋಟೋ ಎಷ್ಟು ಬೇಕಾದರೂ ನಾನು ತೋರಿಸುತ್ತೇನೆ ” ಎಂದ. ನಮಗೆ ಉತ್ತರ ಇರಲಿಲ್ಲ. ಮುಖಭಂಗವಾಯಿತು. ಇನ್ನೇನು ಮಾಡುವುದೆಂದು ಯೋಚಿಸುತ್ತಾ ಇದ್ದಾಗ, ದೇವಸ್ಥಾನದ ಅರ್ಚಕರು, ‘ಅದೋ ಮೊಸಳೆ’ ಎಂದು ಬೆರಳು ತೋರಿಸಿ, ಬಂದವರ ಗಮನವನ್ನು ಅತ್ತ ಸೆಳೆದರು. ಬಹಳ ರಭಸದಿಂದಲೇ ಬಂದ ಮೊಸಳೆಯು ದೇವಸ್ಥಾನದ ಬಡಗು ಬದಿಯಲ್ಲಿ ಬಂದು ನಿಂತಿತು. ಆಮೇಲೆ ಐದು ನಿಮಿಷಗಳ ಕಾಲ ಅದರ ಕಸರತ್ತಾಗಿತ್ತು. ನೀರಿನ ಮೇಲೆ ನಿಲ್ಲುವುದು, ಬೀಳುವುದು, ಹೊರಳಾಡುವುದು ಇತ್ಯಾದಿ. ನಾವೆಂದೂ ಮೊಸಳೆಯನ್ನು ಈ ಸ್ಥಿತಿಯಲ್ಲಿ ಕಂಡಿರಲಿಲ್ಲ. ತನ್ನ ಕಸರತ್ತನ್ನು ನಿಲ್ಲಿಸಿ ನೇರವಾಗಿ ಗುಹೆಯೊಳಗೆ ಹೋಯ್ತು.

ಮೊಸಳೆಯ ಕಸರತ್ತನ್ನು ಕಂಡು ತಮಿಳರ ತಂಡವು ದಂಗಾಗಿ ಬಿಟ್ಟಿತು. ಮಾತುಗಳನ್ನಾಡಲೂ ಅವರಿಂದ ಆಗಲಿಲ್ಲ. ನೇರವಾಗಿ ಶ್ರೀ ನಡೆಯಲ್ಲಿ ಕಣ್ಣೀರು ಸುರಿಸಿ ಪ್ರಾರ್ಥಿಸಿದರು. ‘ತಪ್ಪಾಯ್ತು, ಕ್ಷಮಿಸು’ ಎಂದು ಪದೇ ಪದೇ ಆ ವಿದ್ವಾಂಸನು ದೇವರಿಗೆ ಅಡ್ಡಬಿದ್ದು ಗೊಣಗುತ್ತಿದ್ದನು. ಮಳೆಗಾಲದ ಒಂದು ದಿನ ಸುತ್ತಲೂ ಜಾರುತ್ತಿತ್ತು. ಯಾತ್ರಿಕರ ತಂಡವು ಆ ದಿನಗಳಲ್ಲಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿತು. ಕೆರೆಯ ಬಡಗು ಬದಿಯಲ್ಲಿ ಮೊಸಳೆಯ ಗುಹೆಯ ಸಮೀಪಕ್ಕೆ ತಂಡವು ಬಂದಿತ್ತು. ಮಧ್ಯಾಹ್ನ ಪೂಜೆಯ ಸಮಯ. ಅಲ್ಲಿ ಬಗ್ಗಿ ನೋಡಿದವರಿಗೆಲ್ಲಾ ಮೊಸಳೆಯ ದರ್ಶನವಾಗುತ್ತಿತ್ತು. ತಂಡದಲ್ಲಿದ್ದ ಚಿಕ್ಕ ಮಗುವೊಂದು ಕೂಡಾ ಈ ಪ್ರಯತ್ನ ಮಾಡಿತು. ಬಗ್ಗಿ ನೋಡುತ್ತಿರುವಂತೆಯೇ ‘ಗುಳುಂ’ ಎಂದು ನೀರಿಗೆ ಬಿದ್ದೇ ಬಿಟ್ಟಿತು! ಮೊಸಳೆಯು ಗುಹೆಯೊಳಗೇ ಇತ್ತು. ಮಗು ಬಿದ್ದದ್ದೂ ಮೊಸಳೆಯ ಗುಹೆಯ ಸಮೀಪಕ್ಕೆ! ನಾವೆಲ್ಲರೂ ನೋಡುತ್ತಿದ್ದೆವು. ಏನು ಮಾಡುವುದೆಂದು ತೋಚದೆ ಕೈ ಕೈ ಹಿಚುಕಿಕೊಳ್ಳುತ್ತಿದ್ದೆವು. ಚರಿತ್ರೆಯೊಂದು ಉದ್ಭವಿಸುತ್ತದೆ ಎಂದೆಣಿಸುವಷ್ಟರಲ್ಲಿ ಮೊಸಳೆಯು ರಭಸವಾಗಿ ಗುಹೆಯಿಂದ ಹೊರಕ್ಕೆ ಬಂತು. ಮಗುವನ್ನು ಮೂಸಿತು. ಕೂಡಲೇ ಹಿಂದಕ್ಕೆ ಹೋಗಿ ತನ್ನ ಯಥಾಸ್ಥಾನವನ್ನು ಸೇರಿತು. ಆ ಮೇಲೆ ಮಗುವಿನೊಂದಿಗೆ ಬಂದವರೊಬ್ಬರು ನೀರಿಗೆ ಧುಮುಕಿ ಮಗುವನ್ನು ಎತ್ತಿಕೊಂಡು ಬಂದರು.

ಈಗಿರುವ ಮೊಸಳೆಯು ಮೊದಲಿನ ಮೊಸಳೆಯಂತೆ ಮನುಷ್ಯರೊಂದಿಗೆ ಬೇಗನೆ ಬೆರೆಯುವುದಿಲ್ಲ. ತನ್ನ ಹಿಂದಿನವನನ್ನು ಮೋಸದಿಂದ ಕೊಂದವರಲ್ಲವೇ? ವಿಶ್ವಾಸದ ಕೊರತೆ ಇದ್ದರೂ ಇರಬಹುದು. ಮನುಷ್ಯರಿಗೆ ಇಚ್ಚೆ ಬಂದಾಗ ನನ್ನನ್ನು ನೋಡದಿರಲಿ. ನನಗೆ ಇಚ್ಚೆ ಬಂದಾಗ ಅವರು ನೋಡಲಿ ಎಂಬ ಭಾವನೆ ಇದ್ದ ಹಾಗೆ ಇದೆ. ಇದಕ್ಕೆ ದೈವೇಚ್ಹೆಯೇ ಪ್ರೇರಣೆ ಯಾಗಿರಲೂಬಹುದು. ತನ್ನ ಬುದ್ದಿಗೆ ನಿಲುಕದ್ದನ್ನು ‘ಮೂಡನಂಬಿಕೆ’ಯ ಪಟ್ಟಿಗೆ ಸೇರಿಸಿ ತಾನು ನಿಶ್ಚಿಂತನಾಗುವ ಈ ಮನುಷ್ಯ ಯಾಂತ್ರಿಕಯುಗದ ಯಂತ್ರದಂತೆ ವರ್ತಿಸುವ ಕಾಲವಿದು.

ಕೆಲವು ದೇವಾಲಯಗಳಿಗೂ ಕೆಲವು ವಿಶಿಷ್ಟ ಜೀವಿಗಳಿಗೂ ಪರಸ್ಪರ ಅವಿನಾಭಾವ ಸಂಬಂಧವಿರುವುದನ್ನು ನಮಗೆ ಕಾಣಬಹುದು. ಉದಾಹರಣೆಗೆ, ತಮಿಳು ನಾಡಿನಲ್ಲಿ ‘ತಿರುಕ್ಕುಳುಕ್ಕುಂಡ್ರಂ’ ಶಿವಕ್ಷೇತ್ರದಲ್ಲಿ ಇಂತಹ ಒಂದು ದೃಶ್ಯ ವನ್ನು ಈ ಇಪ್ಪತ್ತನೇ ಶತಮಾನದಲ್ಲೂ ಕಾಣಬಹುದು. ಮಧ್ಯಾಹ್ನ ಪೂಜೆಯ ನಂತರ ಅರ್ಚಕರ ಕೈಯಿಂದಲೇ ಪಾಯಸವನ್ನು ಕುಕ್ಕಿ ತಿನ್ನುವ ಎರಡು ಬಿಳಿ ರಣ ಹದ್ದುಗಳು ತಮ್ಮ ಸಮಯ ಪಾಲನೆಯನ್ನು ಬದಲಾಯಿಸದೇ ಇರುವುದು ವೈಶಿಷ್ಟ್ಯ ಜನಸಾಗರವು ಈ ದೃಶ್ಯ ವನ್ನು ನೋಡಲು ಬಂದು ಸೇರಿದ್ದರೂ, ಯಾವುದೇ ಭಯವಿಲ್ಲದೆ ಈ ಹದ್ದುಗಳೆರಡು ಬಂದು ಪಾಯಸವನ್ನು ಕುಕ್ಕಿ ತಿಂದು, ಆಕಾಶದ ಗರ್ಭದಲ್ಲಿ ಮಾಯವಾಗುವ ದೃಶ್ಯವನ್ನು ವಿಜ್ಞಾನವೂ ವಿಸ್ಮಯದಿಂದಲೇ ನೋಡುವುದು. ಈ ಹದ್ದುಗಳೂ ಮಾಂಸಾಹಾರಿಗಳು, ಹಲವು ಪಕ್ಷಿ ವಿಜ್ಞಾನಿಗಳೂ ಈ ವಿದ್ಯಮಾನವನ್ನು ‘ಅದ್ಬುತವೆಂದೇ ಪರಿಗಣಿಸುವರು. ವೈವಿಧ್ಯಮಯವಾದ ಪ್ರಾಪಂಚಿಕ ವಿದ್ಯಮಾನಗಳ ಹಿಂದಿರುವ ಅನಂತವಾದ ಆತ್ಮೀಯ ಚೈತನ್ಯ ಮಾತ್ರವೆಂದು ಹೇಳಿ ಸಮಾಧಾನಪಟ್ಟುಕೊಳ್ಳೋ ಣವೇ? ಅಥವಾ ಋಷಿ ಶ್ರೇಷ್ಟರ ಯಾಗ, ತಪಸ್ಸುಗಳ ಪರಿಣಾಮವೆಂದು ಇದನ್ನು ಪರಿಗಣಿಸುವುದೇ? ನ್ಯೂಟ್ರೋನ್ ನಿಂದ ಸರ್ವನಾಶ ಮಾಡಬಹುದಾದ ‘ಅತಿ ಬುದ್ಧಿ ಗೂ ನಿಲುಕದ ಇಂತಹ ಅನುಭವಗಳ ಮೂಲ ಕಾರಣ ವನ್ನು ಅಧ್ಯಾತ್ಮಿಕವಾಗಿ ಚಿತ್ರಿಸಬಹುದೇ ? ಅನಂತಪುರ ಸರೋವರ ಕ್ಷೇತ್ರದಲ್ಲಿರುವ ಈ ಮೊಸಳೆಯ ಇರುವಿಕೆಯನ್ನು ಅಧ್ಯಾತ್ಮಿಕ ವಿಧ್ಯಮಾನ ಎಂದುಸಮಾಧಾನಪಟ್ಟುಕೊಳ್ಳೋ ಣವೇ?

2001 ರಿಂದ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ನಿರಂತರವಾಗಿ ನಡೆದು ಬರುತ್ತಿರುವುದರಿಂದ ಕೆರೆಯ ನೀರನ್ನು ಕಟ್ಟಿ ನಿಲ್ಲಿಸಲಾಗಲಿಲ್ಲ. ನೀರು ಬಹಳ ಕಡಿಮೆಯಾಗಿರುವ ಸಂದರ್ಭಗಳಲ್ಲೆಲ್ಲ ಈ ದೇವರ ಮೊಸಳೆಯು ತೋರಿಸಿದ ಇನ್ನೊಂದು ಕೃತ್ಯವನ್ನು ಗಮನಿಸಿರಿ. ಈ ಕೆರೆಗೆ ಸಮೀಪದಲ್ಲಿ ಹೊಳೆಯೋ ಸರೋವರವೋ ಇಲ್ಲ. ಆದರೆ ಕೆರೆಯ ತೆಂಕು ಭಾಗದಲ್ಲಿ ಪ್ರಾಕಾರದ ಹೊರಗೆ ಸುಮಾರು 100ಮೀ. ದೂರದಲ್ಲಿ ‘ಹೊರಗಿನ ಕೆರೆ’ ಎಂದೇ ಕರೆಯಲ್ಪಡುವ ಇನ್ನೊಂದು ಸಣ್ಣ ಕೆರೆ ಇದೆ. ಶ್ರೀ ವನಶಾಸ್ತಾರ ಬನದ ಸಮೀಪ ಇದೆ. ದೇವರ ಕೆರೆಯಿಂದ ಸುಮಾರು 20 ಮೆಟ್ಟಲುಗಳನ್ನು ಹತ್ತಿ, ದಕ್ಷಿಣ ಪಾಶ್ವದ ಗೇಟನ್ನು ತೆರೆದು, 100 ಮೀ. ನಷ್ಟು ದೂರವನ್ನು ತೆವಳಿಕೊಂಡೇ ಬಂದು ಈ ಮೊಸಳೆಯು ಎರಡು ಸಲ ‘ಹೊರಗಿನ ಕೆರೆ’ ಯನ್ನು ಆಶ್ರಯಿಸಿದೆ. ದೇವರ ಕೆರೆಯಲ್ಲಿ ನೀರು ತುಂಬುವಾಗ ಈ ಕ್ಷುದ್ರ ಪ್ರಾಣಿಗೆ ಹೇಗೋ ತಿಳಿಯುತ್ತದೆ. ಪುನಃ ಯಥಾ ಸ್ಥಾನಕ್ಕೆ ಬರುತ್ತದೆ. ರಾತ್ರಿ ಕಾಲದಲ್ಲೇ ಇದರ ಸಂಚಾರ. ಮಾರ್ಗ ಮಧ್ಯೆ ದನಕರುಗಳು ಧಾರಾಳ ಮಲಗಿಕೊಂಡಿರುತ್ತವೆ. ಆದರೂ ಯಾವುದೇ ಮೃಗೀಯ ಸ್ವಭಾವವನ್ನು ತೋರಿಸದೆ ಈ ದೇವರ ಮೊಸಳೆಯು ಸಾತ್ವಿಕ ಸ್ವಭಾವದ ಹರಿಕಾರನಾಗುತ್ತದೆ ಎಂಬುದು ನಮ್ಮೆಲ್ಲರ ಅನುಭವ. ವನಶಾಸ್ತಾರ ಪೂರ್ಣವಾಗಿ ಜೀರ್ಣಾವಸ್ಥೆ ಯಲ್ಲಿದ್ದ ಈ ಸಾನಿಧ್ಯವು ಇತ್ತೀಚೆಗಿನ ನವೀಕರಣ ಕಾರ್ಯಕ್ರಮದಲ್ಲಿ ಪುನರ್ಜೀವನಗೊಂಡಿದೆ. ವೀಶಾಲವಾದ ಕಟ್ಟೆಯೊಂದರ ಮೇಲೆ ಕಗ್ಗಲಿನ ಮೂರು ಮೂರ್ತಿಗಳನ್ನೂ ಪ್ರತಿಷ್ಠೆ ಮಾಡಲಾಗಿದೆ. ಎದುರು ಬದಿಯಲ್ಲಿ ಗೋಪುರದ ರಚನೆಯು ಕಾಣುವುದು. ಸುತ್ತಲೂ ಆವರಣಗೂಡೆಯಿಂದ ಇಲ್ಲಿನ ಪಾವಿತ್ರವನ್ನು ಜೋಪಾನವಾಗಿ ಇಡಲಾಗಿದೆ.

ಈ ವನಶಾಸ್ತಾರನ ಸನ್ನಿಧಿಯ ಬಲ ಭಾಗದಲ್ಲಾಗಿ ವೇಟ್ಟುಕ್ಕುರುವನ್ ಎಂಬ ಸಾನಿಧ್ಯವೂ ಇದ್ದು. ಪ್ರತ್ಯೇಕ ಕಟ್ಟೆಯಲ್ಲಿ ಇದಕ್ಕೆ ಸ್ಥಾನವನ್ನು ಕಲ್ಪಿಸಲಾಗಿದೆ. ಶಿವಶಕ್ತಿಯಾದ ಈ ಸಾನ್ನಿದ್ಯವೂ ದೇವಾಲಾಯದ ಎಲ್ಲಾ ಆಗುಹೋಗುಗಳ ಪ್ರಾಧಾನ ಕೇಂದ್ರಬಿಂದುವಾಗಿದೆಯೆಂದು ಪ್ರೆಶ್ನೆ ಚಿಂತನೆಯ ಮೂಲಕ ತಿಳಿದು ಬಂದಿದೆ. ಶಬರಿಮಲೆ ಶ್ರೀ ಅಯ್ಯಪ್ಪನ ದರ್ಶನಕ್ಕಾಗಿ ಮಲೆ ಏರಲು ಸಿದ್ಧರಾದ ಭಕ್ತರು ಧ್ಯಾನ ಜಪ ಭಜನೆಗಳನ್ನು ಮಾಡಿ, ಇರುಮುಡಿ ಕಟ್ಟವನ್ನು ಕಟ್ಟಿ ವನಶಾಸ್ತಾರ ಮತ್ತು ವೇಟ್ಟುಕ್ಕುರುವನ್ ಸಾನಿಧ್ಯದಿಂದ ಯಾತ್ರೆ ಪ್ರಾರಂಭಿಸುವುದು ವಿಶೇಷವಾದ ಅನುಭವವೆಂದು ಜನರು ಆಡಿಕೊಳ್ಳುತ್ತಿದ್ದಾರೆ. ಶ್ರೀವನಶಾಸತ್ತಾರ ಸನ್ನಿಧಿಯಿಂದ ಸುಮಾರು ನಲವತ್ತು ವರ್ಷಗಳ ಹಿಂದೆ ಇರುಮುಡಿ ಕಟ್ಟವನ್ನು ಹೊತ್ತುಕೊಂಡು ಶ್ರೀ ಅಯ್ಯಪ್ಪನ ದರ್ಶನ ಮಾಡಿ ಬಂದ ವಯೋವೃದ್ಧ ಸಿದ್ದಿ ಬೈಲು ಶ್ರೀ ಕೃಷ್ಣ ಗಟ್ಟಿಯವರು ಮೊದಲಿನ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ.

ಶ್ರೀ ವನಶಾಸ್ತಾರನ ಪಶ್ಚಿಮ ಭಾಗದಲ್ಲಿ ಒಂದು ಕೊಳವಿದೆ. ಆ ಸನ್ನಿದಿಯಲ್ಲಿ ಪೂಜಾದಿ ಕರ್ಮಗಳಿಗೆ ತೀರ್ಥವಾಗಿ ಇದರ ಜಲವನ್ನು ಪುರಾತನ ಕಾಲದಿಂದಲೂ ಊಪಯೋಗಿಸುತ್ತಿದ್ದರು ಎಂಬುದು ಪ್ರೆಶ್ನೆ ಚಿಂತನೆ. ಆದುದರಿಂದ ಇದು ಕೂಡಾ ಒಂದು ತೀರ್ಥಕೂಳವೇ ಆಗಿದೆ. ಮೈದಾನದಲ್ಲಿ ಮೇಯುತ್ತಿರುವ ಜಾನುವಾರುಗಳಿಗೆ ಬೇಕಾದಸ್ಟು ನೀರು ಕುಡಿಯುವ ಸೌಕರ್ಯ್ಯವು ಈ ಕೊಳದಲ್ಲಿದೆ.

ಗಣಪತಿ ಗುಡಿಯ ಭಾಗದಲ್ಲಿ ಒಂದು ಶಿಲಾಲೇಖನವಿದೆ. ಆದರೆ ಈ ಶಿಲೆಯಲ್ಲಿ ಬರೆದುದನ್ನು ಓದಿ ಅರ್ಥೈಸಿಕೊಳ್ಳಲು ಈವರೆಗೆ ಆಗಲಿಲ್ಲ. ಪುರಾತನ ದ್ರಾವಿಡ ಭಾಷೆಗಳನ್ನೆಲ್ಲಾ ಮಿಶ್ರಮಾಡಿ ಶಿಲೆಯಲ್ಲಿ ಬರೆದಿರುತ್ತಾರೆ. ಹೆಚ್ಚಾಗಿ ಆ ಕಾಲದಲ್ಲಿ ಪ್ರಚಲಿತವಾಗಿದ್ದ ತುಳು ಲಿಪಿಯನ್ನು ಬಳಸುತ್ತಿದ್ದರು ಎಂದು ವಿದ್ವಾಂಸರ ಅನಿಸಿಕೆ. ದೇವಾಲಯದ ನಿಯಮ ನಿಯತ್ತುಗಳನ್ನು ಆರ್ಥಿಕ ಮೂಲಗಳನ್ನೂ ಇದರಲ್ಲಿ ಬರೆದಿರಬಹುದು. ಪ್ರಯತ್ನಪಟ್ಟು ಈ ಲೇಖನವನ್ನು ಓದಲು ಸಾದ್ಯವಾದರೆ, ರಹಸ್ಯವಾಗಿಯೇ ಇರುವ ಹಲವಾರು ವಿಷಯಗಳನ್ನು ಬೆಳಕು ಕಾಣುವುದರಲ್ಲಿ ಸಂಶಯವಿಲ್ಲ.

ಶ್ರೀ ಮಹಾ ಗಣಪತಿ ದೇವಾಲಯ

ದೇವಾಲಯದ ಈಶಾನ್ಯ ಭಾಗದಲ್ಲಿ ಗುಹೆಯ ಮೇಲಾಗಿ ಗಣಪತಿ ಗುಡಿಯಿದೆ. ಸಾಮಾನ್ಯವಾಗಿ ಈಶಾನ್ಯ ಭಾಗದಲ್ಲಿ ಪ್ರಧಾನ ದೇವಾಲಯದ ಮುಂಭಾಗದಲ್ಲಿ ಗಣಪತಿ ಗುಡಿಯನ್ನು ಕಾಣಲು ಅಸಾಧ್ಯ. ಆದರೆ ಅನಂತಪುರದ ದೈವೀಕವಾದ ವೈಶಿಷ್ಟ್ಯಗಳನ್ನು ಪುಷ್ಟೀಕರಿಸುವ ಒಂದು ವಿಷಯವು ಇದಾಗಿದೆ. ಪುರಾತನ ಕಾಲದಲ್ಲಿ ಇಲ್ಲಿ ಕಡುಶರ್ಕರ ಪಾಕದ ಗಣಪತಿ ವಿಗ್ರಹವಿತೆಂದು ಅಭಿಷೇಕಾದಿ ಕರ್ಮಗಳಿಂದ ಅದು ವಿರೂಪವಾಗಿತ್ತೆಂದೂ ತಿಳಿದುಬಂದಿದೆ. ಈಗ ಇರುವ ಶಿಲೆಯ ಗಣಪತಿ ವಿಗ್ರಹಕ್ಕಿಂತ ಮೊದಲಿನ ವಿಗ್ರಹವನ್ನು ತೆಗೆದು ಜಲಧಿವಾಸ ಮಾಡಿದ್ದರು. ಶಿಲ್ಪಿಗಳ ಆದೇಶ ಮೇರೆಗೆ ಈ ವಿಗ್ರಹವನ್ನು ಮೇಲಕ್ಕೆತ್ತಿ ಸಂಗ್ರಹ ಕೋಣೆ ಯಲ್ಲಿ ಇಟ್ಟಿರುತ್ತಾರೆ. ಗಣಪತಿ ಗುಡಿಯ ಮುಂಭಾಗದಲ್ಲಿ ಮಾಡಿಲ್ಲದ ನಮಸ್ಕಾರ ಮಂಟಪದ ಸ್ಥಾನವಿದೆ. ಗಣಪತಿ ಹೋಮಗಳನ್ನು ಬಹಳ ಹಿಂದಿನಿಂದಲೇ ಈ ಪಂಚಾಂಗದ ಮೇಲೆಯೇ ಮಾಡುತ್ತಿದ್ದರು ಎಂದು ತಿಳಿದು ಬರುತ್ತದೆ.

ಗಣಪತಿ ಗುಡಿಯ ಬಲಭಾಗದಲ್ಲಿ ಒಂದು ಶಿಲಾಲೇಖನವಿದೆ. ಆದರೆ ಈ ಶಿಲೆಯಲ್ಲಿ ಬರೆದುದನ್ನು ಓದಿ ಅರ್ಥೈಸಿಕೊಳ್ಳಲು ಈವರೆಗೂ ಆಗಲಿಲ್ಲ. ಪುರಾತನ ದ್ರಾವಿಡ ಭಾಷೆಗಳನ್ನೆಲ್ಲಾ ಮಿಶ್ರಮಾಡಿ ಶಿಲೆಯಲ್ಲಿ ಬರೆದಿರುತ್ತಾರೆ. ಹೆಚ್ಚಾಗಿ ಆ ಕಾಲದಲ್ಲಿ ಪ್ರಚಲಿತವಾಗಿದ್ದ ತುಳು ಲಿಪಿಯನ್ನು ಬಳಸುತ್ತಿದ್ದರು ಎಂದು ವಿದ್ವಾಂಸರ ಅನಿಸಿಕೆ. ದೇವಾಲಯದ ನಿಯಮ ನಿಯತ್ತುಗಳನ್ನು ಆರ್ಥಿಕ ಮೂಲಗಳನ್ನೂ ಇದರಲ್ಲಿ ಬರೆದಿರಬಹುದು. ಪ್ರಯತ್ನಪಟ್ಟು ಈ ಲೇಖನವನ್ನು ಓದಲು ಸಾದ್ಯವಾದರೆ, ರಹಸ್ಯವಾಗಿಯೇ ಇರುವ ಹಲವಾರು ವಿಷಯಗಳನ್ನು ಬೆಳಕು ಕಾಣುವುದರಲ್ಲಿ ಸಂಶಯವಿಲ್ಲ.

ಗಣಪತಿಗುಡಿಯ ಎಡಬದಿಯಲ್ಲಿ ರಕ್ತೇಶ್ವರಿ ಕಟ್ಟಿದೆ. ಬಹಳ ಹಳೆಯದಾದ ದೊಡ್ಡ ಒಂದು ಅಶ್ವತ್ಥ ಮರದ ಕಟ್ಟೆಯೂ ಇದಕ್ಕೆ ತಾಕಿಕೊಂಡು ಇದೆ. ಹಲವು ತರದ ಸರ್ಪಗಳ ಆವಾಸ ಸ್ಥಾನವು ಈ ಮರವಾಗಿದೆ. ಎಸ್ಟೋ ಸಲ ಈ ಪರಿಸರದಲ್ಲಿ ಹಾವುಗಳನ್ನು ಕಂಡವರು ಇದ್ದಾರೆ. ಹಿಂದೆ ತಂತ್ರಿ ಮನೆಯವರು ಈ ಊರಿನಿಂದ ವಲಸೆ ಹೋದಾಗ ಅವರ ಆರಾಧ್ಯ ದೈವವಾದ ರಕ್ತೇಶ್ವರಿ ದೈವವನ್ನು ಇಲ್ಲಿ ಪ್ರತಿಷ್ಟಾಪಿಸಿ, ಹೊರಟು ಹೋದರು ಎಂದು ಪ್ರೆಶ್ನೆ ಮೂಲಕ ತಿಳಿದುಬಂದಿದೆ. ಎಲ್ಲಾ ಮಂಗಳವಾರ ಮತ್ತು ಸಂಕ್ರಮಣ ದಿನದಂದು ರಕ್ತೇಶ್ವರಿಗೆ ‘ತಂಬಿಲ’ ಸೇವೆಯ ನಡೆಯುತ್ತಿರುತ್ತದೆ. ಬೆಳ್ತಿಗೆ ಅಕ್ಕಿ ಮತ್ತು ತೆಂಗಿನಕಾಯನ್ನು ನೈವೇದ್ಯ ಮಾಡುವುದೇ ಈ ತಂಬಿಲ ಸೇವೆ. ಇದರ ಎಡಬದಿಯಲ್ಲಿ ಯಕ್ಷಿಯ ಕಲ್ಲು ಇದೆ. ದೇವಸ್ಥಾನದ ರಕ್ಷಾ ದೇವತೆಯಾಗಿ ಯಕ್ಷಿಯನ್ನು ಇಲ್ಲಿ ಆರಾದಿಸುತ್ತಾರೆ. ಸರಾಗವಾದ ಮೂರು ದಿನಗಳಲ್ಲಿ ರಕ್ತೇಶ್ವರಿಗೆ ತಂಬಿಲ ಕೂಡುವ ಹಾಗಿಲ್ಲ. ಹಾಗೇನಾದರು ಕೊಟ್ಟಲ್ಲಿ ನಾಲ್ಕನೆಯ ದಿನ ರಕ್ತೇಶ್ವರಿಯ ಭೂತಕೂಲವು ನಡೆಯಬೇಕೆಂಬುದು ಇಲ್ಲಿನ ಕ್ರಮ.

ತಂಬಿಲ ನಡೆಯುವ ಹೊತ್ತಿಗೆ ಸ್ತ್ರೀಯರು ಪ್ರಾಕಾರದ ಒಳಗೆ ಇರಬಾರದೆಂದು ಹಿಂದಿನಿಂದಲೇ ಆಚರಿಸಿಕೊಂಡು ಬಂದಿರುವಂತಹ ಆಚಾರ. ಯಕ್ಷಿಯೂ ಘೋರ ಸ್ತ್ರೀಯ ರೂಪದಲ್ಲಿ ಇಲ್ಲೆಲ್ಲಾ ಅಲೆಯುತ್ತಿರುವ ಸಮಯವಾದುದರಿಂದ, ಸ್ತ್ರೀ ರೂಪದ ಭಯವನ್ನು ನಿವಾರಿಸಲೋಸುಗ ಈ ಕ್ರಮ ಬಂದಿರಲೂ ಬಹುದು. ಈಗ ನಡೆಯುತ್ತಿರುವ ಜೀರ್ಣೋದ್ಧಾರದ ಭಾಗವಾಗಿ ರಕ್ತೇಶ್ವರಿ ಮತ್ತು ಯಕ್ಷಿಯ ಸ್ಥಾನಗಳು ಬದಲಾಗುವುದು.

 

ಹಿಂದಿನ ಪುಟ…

ಮುಂದಿನ ಪುಟ…